ದುಬೈ: ಕೆಲ ತಿಂಗಳ ಹಿಂದೆ ಫುಟ್ ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ ಪತ್ರಿಕಾಗೋಷ್ಠಿಯಲ್ಲಿ ಕೋಕಾ ಕೊಲಾ ಬಾಟಲಿಯನ್ನು ಬದಿಗಿರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಘಟನೆಯ ಬಳಿಕ ಕೋಕಾ ಕೊಲಾ ಭಾರಿ ನಷ್ಟ ಅನುಭವಿಸಿತ್ತು. ಇದೀಗ ಇಂತಹದೇ ಘಟನೆ ಐಸಿಸಿ ಟಿ20 ವಿಶ್ವಕಪ್ ನಲ್ಲಿ ನಡೆದಿದೆ.
ಗುರುವಾರ ಆಸ್ಟ್ರೇಲಿಯಾ- ಶ್ರೀಲಂಕಾ ನಡುವಿನ ಪಂದ್ಯದ ಬಳಿಕ ಆಸೀಸ್ ಆಟಗಾರ ಡೇವಿಡ್ ವಾರ್ನರ್ ಪತ್ರಿಕಾಗೋಷ್ಠಿಯಲ್ಲಿ ರೊನಾಲ್ಡೋ ನಕಲು ಮಾಡಿದರು.
ಪತ್ರಿಕಾಗೋಷ್ಠಿಗೆ ಆಗಮಿಸಿದ ಡೇವಿಡ್ ವಾರ್ನರ್ ಟೇಬಲ್ ಮೇಲಿದ್ದ ಎರಡು ಕೋಕ್ ಬಾಟಲಿಗಳನ್ನು ಅಡಗಿಸಿದರು. ನಂತರ ಬಾಟಲಿಗಳನ್ನು ಟೇಬಲ್ ಮೇಲಿಟ್ಟ ವಾರ್ನರ್, “ನಾನು ಇದನ್ನು ತೆಗೆಯಬಹುದೇ..? ಇದು ಕ್ರಿಸ್ಟಿಯಾನೋಗೆ ಒಳ್ಳೆಯದು ಎಂದಾದರೆ ನನಗೂ ಕೂಡ ಒಳ್ಳೆಯದೇ” ಎಂದು ನಕ್ಕಿದ್ದಾರೆ.
ಇದನ್ನೂ ಓದಿ:ಕಿವೀಸ್ ವಿರುದ್ಧ ಗೆಲ್ಲಬೇಕಾದರೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆಗಳು ಅಗತ್ಯ: ಗಾವಸ್ಕರ್
ಐಸಿಸಿ ಟಿ20 ವಿಶ್ವಕಪ್ ನಲ್ಲಿ ಕೋಕಾ ಕೊಲಾ ಕಂಪನಿ ಪ್ರಾಯೋಜಕತ್ವ ಹೊಂದಿದೆ. ಹೀಗಾಗಿ ಅದರ ಎರಡು ಬಾಟಲಿಗಳನ್ನು ಪ್ರೆಸ್ ಮೀಟ್ ನಡೆಯುವ ಟೇಬಲ್ ಮೇಲಿಡಲಾಗುತ್ತದೆ.
ಗುರುವಾರ ರಾತ್ರಿ ದುಬೈನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧ ಏಳು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಮೊದಲ ಬ್ಯಾಟ್ ಮಾಡಿದ ಲಂಕಾ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 154 ರನ್ ಗಳಿಸಿದರೆ, ಆಸೀಸ್ ಮೂರು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಜಯ ಸಾಧಿಸಿತು. ಡೇವಿಡ್ ವಾರ್ನರ್ 65 ರನ್ ಗಳಿಸಿದರು.