Advertisement

ಜಿಲ್ಲೆಯಲ್ಲಿ ಪಿಎಂಜೆವಿಕೆ ಕಾರ್ಯಕ್ರಮ

11:36 AM Feb 05, 2020 | Naveen |

ದಾವಣಗೆರೆ: ಅಲ್ಪಸಂಖ್ಯಾತ ಕೇಂದ್ರೀಕೃತ ಪ್ರದೇಶಗಳ ಸಾಮಾಜಿಕ, ಆರ್ಥಿಕ ಸ್ಥಿತಿ ಸುಧಾರಣೆಗೆ ಮೂಲಭೂತ ಸೌಕರ್ಯ ಒದಗಿಸಿ, ಅಭಿವೃದ್ಧಿಪಡಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಪ್ರಧಾನಮಂತ್ರಿ ಜನ್‌ ವಿಕಾಸ್‌ ಕಾರ್ಯಕ್ರಮ (ಪಿಎಂಜೆವಿಕೆ) ದಡಿ ದಾವಣಗೆರೆ ಜಿಲ್ಲೆ ಆಯ್ಕೆಯಾಗಿದೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್‌ ಕುರಿಯನ್‌ ತಿಳಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿ, ಪಿಎಂಜೆವಿಕೆ ಮುಖ್ಯವಾಗಿ ಅಲ್ಪಸಂಖ್ಯಾತರ ಶೈಕ್ಷಣಿಕ, ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿಯಂತಹ ಮೂಲಭೂತ ಸೌಕರ್ಯ ಒದಗಿಸುವ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ರಾಷ್ಟ್ರಾದ್ಯಂತ 308 ಅಲ್ಪಸಂಖ್ಯಾತ ಕೇಂದ್ರೀಕೃತ ಜಿಲ್ಲೆಗಳನ್ನು ಈ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ದಾವಣಗೆರೆಯೂ ಒಂದಾಗಿದೆ ಎಂದರು.

ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮದಡಿ ವಸತಿಯುತ ಕಾಲೇಜು, ಐಟಿಐ, ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳು, ಉದ್ಯೋಗನಿರತ ಮಹಿಳೆಯರ ವಸತಿನಿಲಯಗಳು, ಸಮುದಾಯ ಭವನಗಳು, ಮಾರುಕಟ್ಟೆ ಸ್ಥಳಗಳು ಸೇರಿದಂತೆ ಇತರೆ ಸಾಮಾಜಿಕ, ಆರ್ಥಿಕ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು. ಅಲ್ಪಸಂಖ್ಯಾತರ ಸಾಮಾಜಿಕ ಆರ್ಥಿಕ ಸ್ಥಿತಿ ಸುಧಾರಣೆ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಅಲ್ಪಸಂಖ್ಯಾತ ಕೇಂದ್ರೀಕೃತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ತಮಿಳುನಾಡಿನ ರಾಮನಾಥಪುರಂನಲ್ಲಿ ಸಮುದ್ರದ ನೀರು ಕುಡಿಯವ ಬಳಕೆಗೆ ಶುದ್ಧೀಕರಣ ಘಟಕ ಸ್ಥಾಪಿಸಲು ಯೋಜನೆ ತಯಾರಿಸಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಯಾವುದಾದರೂ ವಿಶೇಷ ಯೋಜನೆ ಬೇಕಿದ್ದರೆ ಪ್ರಸ್ತಾವನೆ ಸಲ್ಲಿಸಬಹುದು. ಕೇಂದ್ರ ಮತ್ತು ರಾಜ್ಯ ಅನುದಾನ ನೀಡಲಿದ್ದು, ರಾಜ್ಯ ಸರ್ಕಾರ ಆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ನಗರದಲ್ಲಿ ಮಂಡಕ್ಕಿಭಟ್ಟಿಯ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಮತ್ತು ಅಭಿವೃದ್ಧಿ ಕುರಿತು ಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯ್‌ಕುಮಾರ್‌ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 2019ರ ಏಪ್ರಿಲ್‌ನಿಂದ ಡಿಸೆಂಬರ್‌ ಅಂತ್ಯದವರೆಗೆ ಪೌಷ್ಟಿಕ ಆಹಾರ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರಿಗೆ 95,138 ರೂ. ಗುರಿ ನೀಡಲಾಗಿದ್ದು, ಶೇ.60.53ರಷ್ಟು ಪ್ರಗತಿ ಸಾ ಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1721
ಅಂಗನವಾಡಿಗಳಿದ್ದು, 203 ಅಲ್ಪಸಂಖ್ಯಾತರ ಅಂಗನವಾಡಿಗಳಿವೆ ಎಂದು ಸಭೆ ಗಮನಕ್ಕೆ ತಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ವರಪ್ಪ ಮಾತನಾಡಿ, ಇಲಾಖೆಯಲ್ಲಿ 8 ಯೋಜನೆಗಳಿದ್ದು, 5 ಯೋಜನೆಗಳಲ್ಲಿ ಶೇ.100ರಷ್ಟು ಪ್ರಗತಿ ಸಾ ಧಿಸಲಾಗಿದೆ. 2ನೇ ಜೊತೆ ಸಮವಸ್ತ್ರ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಅನುದಾನ ಬಂದಿಲ್ಲ. ಜಿಲ್ಲೆಯಲ್ಲಿ 132 ಉರ್ದು ಶಾಲೆಗಳಿದ್ದು, 561 ಜನ ಉರ್ದು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ, 2019-20 ನೇ ಸಾಲಿನಲ್ಲಿ 8 ಮದರಸ ಸಂಸ್ಥೆಗಳಿಗೆ 50 ಲಕ್ಷ ಅನುದಾನ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಅಕ್ಟೋಬರ್‌ ಆರಂಭದಿಂದ ಡಿಸೆಂಬರ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ ಕೋಮು ಗಲಭೆ ಘಟನೆಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಎನ್‌ಆರ್‌ಸಿ, ಸಿಎಎ ಗೆ ಸಂಬಂ ಧಿಸಿದಂತೆ ಸಿಎಎ ಪರ ಮತ್ತು ವಿರೋಧ ಪ್ರತಿಭಟನೆಗಳು ಜರುಗಿವೆ. ಆದರೆ, ಯಾವುದೇ ಅಹಿತರಕರ ಘಟನೆ ನಡೆದಿಲ್ಲ. ವಿವಿಧ ಧರ್ಮ, ಸಮುದಾಯ ಜಾತಿಗಳ ನಡುವೆ ಸಮನ್ವಯ ಬೆಳೆಸಲು ಪ್ರಮುಖ ಹಬ್ಬ-ಹರಿದಿನಗಳ ಸಮಯದಲ್ಲಿ ಶಾಂತಿ ಸಭೆ ನಡೆಸಲಾಗುತ್ತಿರುತ್ತದೆ ಎಂದರು.

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗಂಗಪ್ಪ ಮಾತನಾಡಿ, ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ಕಾರ್ಯಕ್ರಮದಲ್ಲಿ 30226 ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ಪೂರ್ವ,
4209 ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ, 848 ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿ ವೇತನ ನೀಡಲಾಗಿದ್ದು, ವೇತನ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ 5 ಮೌಲಾನ ಅಜಾದ್‌ ಮಾದರಿ ಶಾಲೆಗಳಿದ್ದು, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ಮತ್ತು ಮಧ್ಯಾಹ್ನದ ಬಿಸಿಊಟ ಹಾಗೂ ಕ್ಷೀರ ಭಾಗ್ಯ ಯೋಜನೆ ಒದಗಿಸಲಾಗಿದೆ ಎಂದು ಹೇಳಿದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಮಹಾನಗರಪಾಲಿಕೆ ನಲ್ಮ್ ಯೋಜನೆಯಡಿ ಸ್ವಯಂ ಉದ್ಯೋಗ ಯೋಜನೆಯಲ್ಲಿ 5.04 ಲಕ್ಷ ರೂ., ಸಹಾಯ ಗುಂಪು ಯೋಜನೆಯಲ್ಲಿ 7 ಲಕ್ಷ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ 51.32 ಲಕ್ಷ ರೂ. ಅನುದಾನದಲ್ಲಿ ಶೇ.15 ರಷ್ಟು ಅನುದಾನ ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದೆ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಶೇ.7.25 ಕಾರ್ಯಕ್ರಮದಲ್ಲಿ 2019-20ನೇ ಸಾಲಿಗೆ ವೈಯಕ್ತಿಕ ಶೌಚಾಲಯಕ್ಕಾಗಿ 39.08 ಲಕ್ಷ ರೂ. ಅನುದಾನ ನೀಡಿದ್ದು, ಅಲ್ಪಸಂಖ್ಯಾತರಿಗೆ 5.86 ಲಕ್ಷ ರೂ. ಮೀಸಲಿರಿಸಿ, ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಯೋಗದ ಉಪಾಧ್ಯಕ್ಷರು, 27 ಇಲಾಖೆಗಳಲ್ಲಿ ಅಲ್ಪಸಂಖ್ಯಾತರಿಗೆ ಸಂಬಂಧ ಯೋಜನೆ ಜಾರಿಯಲ್ಲಿ ಪ್ರಗತಿ ತೃಪ್ತಿದಾಯಕವಾಗಿದೆ ಎಂದರು. ಸಭೆಯಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಬುನಿಯನ್‌ ಸುಮಿತ್ರಾ ಜಿ.ಪಂ. ಯೋಜನಾ ನಿರ್ದೇಶಕ ಜಗದೀಶ್‌, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌, ಇತರ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next