Advertisement
ಶನಿವಾರ ಜಿಲ್ಲೆಯ ವಿವಿಧ ಇಲಾಖೆಯಲ್ಲಿ ಪ.ಜಾತಿ ಉಪಯೋಜನೆ/ಗಿರಿಜನ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸಭೆಗೆ ಯೋಜನೆ ಪ್ರಗತಿ ಕುರಿತಾದ ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕು. ಇಲಾಖಾವಾರು ಮಾಹಿತಿ ನೀಡುವಾಗ ಎಲ್ಲವನ್ನೂ ವಿವರವಾಗಿ ಹೇಳಬೇಕು. ಸಭೆಗೆ ಬರಲು ಆಗದಿದ್ದರೆ ಸಕಾರಣದೊಂದಿಗೆ ಮುಂಚಿತವಾಗಿ ಅನುಮತಿ ಪಡೆದು, ನಿಯೋಜಿತ ಅಧಿಕಾರಿಗೆ ಸಮರ್ಪಕ ಮಾಹಿತಿಯೊಂದಿಗೆ ಕಳುಹಿಸಿಕೊಡಬೇಕು ಎಂದರು.
Related Articles
Advertisement
ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಇತರೆ ಇಲಾಖೆಗಳ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಇರುವ ಸೌಲಭ್ಯಗಳ ಕುರಿತು ಫಲಾನುಭವಿಗಳಿಗೆ ಮಾಹಿತಿ ಇಲ್ಲ. ಈ ಯೋಜನೆಗಳ ಕುರಿತು ಅಧಿಕಾರಿಗಳು ಸಮರ್ಪಕವಾಗಿ ಪ್ರಚಾರ, ಮಾಹಿತಿ ನೀಡಿಲ್ಲ. ಇನ್ನು ಮುಂದೆ ಅರ್ಹರಿಗೆ ಈ ಯೋಜನೆಯ ಮಾಹಿತಿ ತಿಳಿಯುವಂತೆ ಕ್ರಮ ವಹಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುವ ಉದ್ಯೋಗಿನಿ ಯೋಜನೆಗೆ ಬೇಡಿಕೆ ಇದ್ದು, ಇದಕ್ಕೆ ನಿಗದಿಪಡಿಸಿರುವ ಗುರಿ ಪ್ರಮಾಣ ಹೆಚ್ಚಿಸಲು ಆ ಇಲಾಖೆ ಉಪನಿರ್ದೇಶಕರು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಾಯಕ ಅಭಿಯಂತರರು ಎಸ್ ಸಿಪಿ/ಟಿಎಸ್‌ಪಿ ಯೋಜನೆಯಡಿ ನಿರ್ಮಿಸಲಾದ ಚೆಕ್‌ಡ್ಯಾಮ್‌ಗಳ ಬಗ್ಗೆ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಜಿಲ್ಲಾಧಿಕಾರಿಗಳು, ಈ ಸಭೆಗೆ ಸಂಬಂಧಿಸಿದ ಅಧಿಕಾರಿ ಗೈರಾಗಿದ್ದಾರೆ. ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರಲ್ಲದೇ, ಯಾವುದೇ ಜಿಲ್ಲಾಮಟ್ಟದ ಅಧಿಕಾರಿಗಳು ಇಂತಹ ಮುಖ್ಯವಾದ ಸಭೆಗಳಿರುವಾಗ ಅನುಮತಿ ಪಡೆಯದೇ ಗೈರು ಹಾಜರಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಲೋಕೋಪಯೋಗಿ ಇಲಾಖೆಯ ಎಇ ಸಹ ಅನುಮತಿ ಪಡೆಯದೇ ಗೈರು ಹಾಜರಾಗಿದ್ದನ್ನು ಕಂಡ ಜಿಲ್ಲಾ ಧಿಕಾರಿಗಳು, ಅವರಿಗೆ ನೋಟಿಸ್ ನೀಡುವಂತೆ ಸೂಚಿಸಿದರಲ್ಲದೆ, ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಂಡು ನಿಗದಿತ ಗುರಿ ತಲುಪಲು ಶ್ರಮಿಸಬೇಕು. ಜಿ.ಪಂ ಸಿಇಒ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕರೆದು ಪರಿಶೀಲಿಸಬೇಕೆಂದು ಹೇಳಿದರು. ಹರಿಹರ ಶಾಸಕ ಎಸ್.ರಾಮಪ್ಪ ಮಾತನಾಡಿ, ಎಸ್‌ಸಿಪಿ/ಟಿಎಸ್‌ಪಿ ಪ್ರಗತಿ ಪರಿಶೀಲನೆ ಸಭೆಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಾಗಬೇಕು. ಅರ್ಹರಿಗೆ ಈ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಎಂದರು. ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ ಮಾತನಾಡಿ, ಎಸ್‌ಸಿಪಿ/ ಟಿಎಸ್‌ಪಿ ಸೇರಿದಂತೆ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಮಾನದಂಡಗಳಲ್ಲಿ ಯಾವುದಾದರೂ ತೊಡಕುಗಳು, ಬದಲಾವಣೆಗಳಿದ್ದರೆ ಆ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳು ಅ.21ರಂದು ನಡೆಸುವ ಕೆಡಿಪಿ ಪೂರ್ವಭಾವಿ ಸಭೆಗೆ ಸಲ್ಲಿಸಿದಲ್ಲಿ, ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ್, ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.