Advertisement

ಸಪ್ತಪದಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ

11:23 AM Feb 27, 2020 | Naveen |

ದಾವಣಗೆರೆ: ಧಾರ್ಮಿಕ ದತ್ತಿ, ಮುಜುರಾಯಿ ಇಲಾಖೆಯಿಂದ ಕೈಗೊಳ್ಳಲಿರುವ ಸಪ್ತಪದಿ ಸರಳ ವಿವಾಹ ಕಾರ್ಯಕ್ರಮ ಅಚ್ಚುಕಟ್ಟು, ವ್ಯವಸ್ಥಿತವಾಗಿ ನಡೆಯವಂತಾಗಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಧಾರ್ಮಿಕ ದತ್ತಿ ಇಲಾಖೆಯಿಂದ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮೇ. 24 ರಂದು ಸಪ್ತಪದಿ ಸರಳ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಕುಟುಂಬಗಳಲ್ಲಿನ ಮದುವೆಯನ್ನ ಹೇಗೆ ಮಾಡುತ್ತಿರೋ ಅದೇ ರೀತಿ ಸಾಮೂಹಿಕ ವಿವಾಹ ನೆರವೇರಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದ 100 ಎ…ದರ್ಜೆಯ ದೇವಸ್ಥಾನಗಳಲ್ಲಿ ಸಪ್ತಪದಿ ಸರಳ ವಿವಾಹ ಕಾರ್ಯಕ್ರಮ ನಡೆಸಲಾಗುತ್ತಿದೆ. ವಧುವಿಗೆ 40 ಸಾವಿರ ಮೌಲ್ಯದ ಚಿನ್ನದ ತಾಳಿ, ಧಾರೆ ಸೀರೆ, ಸೀರೆ, ರವಿಕೆ ಮತ್ತು ಕಣ, ಹಾರಕ್ಕೆ 10 ಸಾವಿರ ರೂಪಾಯಿ, ವರನಿಗೆ ಪಂಚೆ, ಶರ್ಟ್‌, ಶಲ್ಯ, ಹೂವಿನಹಾರಕ್ಕೆ 5 ಸಾವಿರ ಒಳಗೊಂಡಂತೆ ಒಟ್ಟು 55 ಸಾವಿರ ರೂಪಾಯಿ ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯದ ವಿಜಯಪುರ, ಗದಗ ಒಳಗೊಂಡಂತೆ ಕೆಲವಾರು ಜಿಲ್ಲೆಯಲ್ಲಿ ಎ ದರ್ಜೆಯ ದೇವಸ್ಥಾನಗಳು ಇಲ್ಲ. ಬಿ ಮತ್ತು ಸಿ ದರ್ಜೆಯ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹಕ್ಕೆ ಅವಕಾಶ ನೀಡಬೇಕು ಎಂದು ಶಾಸಕರು ಕೋರಿದ್ದಾರೆ. ಹಾಗಾಗಿ ಜಿಲ್ಲೆಯ ಎಲ್ಲಾ 8 ಶಾಸಕರೊಂದಿಗೆ ಚರ್ಚಿಸಿ, ಅವರು ಎಲ್ಲಿ ಮಾಡೋಣ ಎಂದು ಸೂಚಿಸುವರೋ ಆ ದೇವಸ್ಥಾನಗಳ ಬಗ್ಗೆ ಶೀಘ್ರವೇ ಮಾಹಿತಿ ನೀಡಿದಲ್ಲಿ ಸಾಮೂಹಿಕ ವಿವಾಹ ಮಹೋತ್ಸವದ ಮುಂದಿನ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಕೂಲ ಆಗುವುದು. ಕೂಡಲೇ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿತ ಸಪ್ತಪದಿ ಸರಳ ವಿವಾಹ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪ ದೋಷ, ಅವ್ಯವಸ್ಥೆ ಆಗದಂತೆ ಬಹಳ ಯಶಸ್ವಿಯಾಗಿ ನೆರವೇರಬೇಕು ಎಂಬುದು ಎಲ್ಲರ ಅಪೇಕ್ಷೆ. ಹಾಗಾಗಿ ಜಿಲ್ಲೆಗೆ ಒಬ್ಬ ನೋಡಲ್‌ ಅಧಿಕಾರಿ ಜೊತೆಗೆ ಯಾವ ದೇವಸ್ಥಾನದಲ್ಲಿ ಸಪ್ತಪದಿ ಸರಳ ವಿವಾಹ ಕಾರ್ಯಕ್ರಮ ನಡೆಯುವುದೋ ಆ ದೇವಸ್ಥಾನಕ್ಕೆ ಸಂಬಂಧಿಸಿದಂತೆ ನೋಡಲ್‌ ಅಧಿಕಾರಿ ನೇಮಕ ಮಾಡಬೇಕು ಎಂದು ಸೂಚಿಸಿದರು.

Advertisement

ನಮ್ಮ ಕ್ಷೇತ್ರದಲ್ಲಿ ಸಪ್ತಪದಿ ಸರಳ ವಿವಾಹ ಕಾರ್ಯಕ್ರಮ ನಡೆಸಬೇಕು. ಒಂದರೆಡು ದಿನಗಳಲ್ಲಿ ಚರ್ಚಿಸಿ, ದೇವಸ್ಥಾನದ ಮಾಹಿತಿ ನೀಡಲಾಗುವುದು ಎಂದು ಮಾಯಕೊಂಡ ಶಾಸಕ ಪ್ರೊ| ಎನ್‌. ಲಿಂಗಣ್ಣ ಹೇಳಿದರು.

ಎ ದರ್ಜೆಯ ದೇವಸ್ಥಾನಗಳಲ್ಲಿ ಆದಾಯ ಬರುವುದರಿಂದ ಸಪ್ತಪದಿ ಸರಳ ವಿವಾಹ ಕಾರ್ಯಕ್ರಮ ನಿರ್ವಹಣೆ ಕಷ್ಟವಾಗಲಿಕ್ಕಿಲ್ಲ. ಬಿ ಮತ್ತು ಸಿ ದರ್ಜೆಯ ದೇವಸ್ಥಾನಗಳಲ್ಲಿ ಅಂತಹ ಆದಾಯ ಇರುವುದಿಲ್ಲ. ಬಿ ಮತ್ತು ಸಿ ದರ್ಜೆಯ ದೇವಸ್ಥಾನಗಳ ಮಾಹಿತಿ ನೀಡಿದರೆ ಸಪ್ತಪದಿ ಸರಳ ವಿವಾಹ ಕಾರ್ಯಕ್ರಮಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಏ.26 ರಂದು ಅಕ್ಷಯ ತದಗಿ… ಬಹಳ ಒಳ್ಳೆಯ ಮುಹೂರ್ತ ಇರುತ್ತದೆ. ಮೊದಲ ಹಂತದ ಸಪ್ತಪದಿ ಸರಳ ವಿವಾಹ ಕಾರ್ಯಕ್ರಮ ಅಂದು ನೆರವೇರಿಸಲಾಗುವುದು. ಮಾ. 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆಯ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಮೇ.24 ರಂದು ನಡೆಯಲಿದೆ. ಇಲಾಖೆಯಿಂದ ನೀಡಿರುವ ಸುತ್ತೋಲೆಯಂತೆ ಟೆಂಡರ್‌ ಕರೆಯಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಸಪ್ತಪದಿ ಸರಳ ವಿವಾಹ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಾಂಛನ ಬಿಡುಗಡೆ ಮಾಡಿದ್ದಾರೆ. ಪ್ರಚಾರಕ್ಕಾಗಿ ಸಪ್ತಪದಿ ರಥ… ಯಾತ್ರೆಗೆ ಚಾಲನೆ ನೀಡಲಾಗಿದೆ. ಅಲ್ಲದೆ ಕೆಲವಾರು ಜಿಲ್ಲೆಯಲ್ಲಿ ವಿಚಾರ ಸಂಕಿರಣ ನಡೆಸಲಾಗಿದೆ. ಮಾ.1 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ಸ್ಪೀಕರ್‌ ಭಾಗವಹಿಸವರು.

7 ರಂದು ಧಾರವಾಡ ಮತ್ತು ಬೆಳಗಾವಿಯಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸಪ್ತಪದಿ ಸರಳ ವಿವಾಹ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸರ್ಕಾರ 1 ಸಾವಿರ ನಾಮಫಲಕ ಅಳವಡಿಸುತ್ತಿದೆ. ಸಾರಿಗೆ ಸಂಸ್ಥೆ ಬಸ್‌ ಹಿಂಭಾಗದಲ್ಲಿ ಜಾಹೀರಾತು ಪ್ರದರ್ಶನ ಮಾಡಲಾಗುವುದು. ಕರಪತ್ರ, ಭಿತ್ತಿಪತ್ರ ವಿತರಣೆ, ಸ್ಥಳೀಯ ಕೇಬಲ್‌ ಟಿವಿಯಲ್ಲಿ ಜಾಹೀರಾತು ಮೂಲಕ ಹೆಚ್ಚಿನ ಪ್ರಚಾರ ನೀಡಲಾಗುವುದು. ಜಿಲ್ಲೆಯಲ್ಲೂ ಸಪ್ತಪದಿ ಸರಳ ವಿವಾಹ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮತ್ತು ವ್ಯಾಪಕ ಪ್ರಚಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ ಅವರಿಗೆ ಸೂಚಿಸಿದರು.

ಸಪ್ತಪದಿ ಸರಳ ವಿವಾಹ ಕಾರ್ಯಕ್ರಮ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಸಂಸದರು, 224 ಶಾಸಕರು, 75 ಜನ ವಿಧಾನ ಪರಿಷತ್ತು ಸದಸ್ಯರಿಗೆ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್‌ ಜನಪ್ರತಿನಿಧಿಗಳಿಗೆ ಪತ್ರ ಬರೆಯಲಾಗುವುದು. ಪಕ್ಷಾತೀತವಾಗಿ ಸಪ್ತಪದಿ ಸರಳ ವಿವಾಹ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ಕೋರಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ, ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಡಾ| ಮಮತಾ ಹೊಸಗೌಡರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next