ದಾವಣಗೆರೆ: ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆಯಿತು. ಉಭಯ ಪಕ್ಷಗಳು ಪರಸ್ಪರ ಧಿಕ್ಕಾರ ಕೂಗಿದರು.
ಮೇಯ-ರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಮೇಯರ್ ಸ್ಥಾನಕ್ಕೆ ಏರಲು ಅಗತ್ಯವಾದ ಬಹುಮತ ಹೊಂದಿರುವ ಬಿಜೆಪಿಯಲ್ಲಿ ಪರಿಶಿಷ್ಟ ಪಂಗಡದವರು ಇರಲಿಲ್ಲ. ಹಾಗಾಗಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ನ ವಿನಾಯಕ ಪೈಲ್ವಾನ್ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ವಿನಾಯಕ ಪೈಲ್ವಾನ್ ಬಿಜೆಪಿಯ ಅಭ್ಯರ್ಥಿಯಾಗಿ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇದರಿಂದಾಗಿ ಬಿಜೆಪಿಗೆ ಮೇಯರ್ ಸ್ಥಾನ ಒಲಿಯುವುದು ಪಕ್ಕಾ ಆಗಿದೆ. ಮೂರು ಗಂಟೆ ನಂತರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಕೊನೆಗೂ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಗಲಿದೆ.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನ ಸವಿತಾ ಹುಲ್ಮನೆ ಗಣೇಶ್ ನಾಮಪತ್ರ ಸಲ್ಲಿಸಿದ ನಂತರದ ಕೆಲ ಹೊತ್ತಿನಲ್ಲಿ ವಿನಾಯಕ ಪೈಲ್ವಾನ್ ಮಾಜಿ ಮೇಯರ್ ಎಸ್.ಟಿ. ವೀರೇಶ್ ಅವರೊಟ್ಟಿಗೆ ನಾಮಪತ್ರ ಸಲ್ಲಿ ಸಲು ಆಗಮಿಸುತ್ತಿದ್ದಂತೆಯೇ ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಇತರರು, ಬಿಜೆಪಿಯವರ ಜೊತೆಗೆ ಹೋಗಬೇಡ. ನಮ್ಮ ಜೊತೆಗೆ ಇರು ಎಂದು ಒತ್ತಾಯಿಸಿದರು. ವಿನಾಯಕ ಪೈಲ್ವಾನ್ ಅವರನ್ನು ಹಿಡಿದು ಸೆಳೆಯಲು ಯತ್ನಿಸಿದರು. ನಾನು ಎಲ್ಲಿಗೂ ಹೋಗಿಲ್ಲ. ಪಕ್ಷ ಬಿಟ್ಟಿಲ್ಲ ಎಂದು ಹೇಳುತ್ತಲೇ ನಾಮಪತ್ರ ಸಲ್ಲಿಸಲು ತೆರಳಿದರು.
ನಾಮಪತ್ರ ಸಲ್ಲಿಸಿ ಹೊರ ಬಂದ ನಂತರ ಕಾಂಗ್ರೆಸ್ ಕಾರ್ಯಕರ್ತರು ಮತ್ತೆ ವಿನಾಯಕ ಪೈಲ್ವಾನ್ ಅವರಿಗೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆಯಿತು. ಪರಸ್ಪರ ಧಿಕ್ಕಾರ ಕೂಗಿದರು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಬಿಜೆಪಿ ಸದಸ್ಯರು ವಿನಾಯಕ ಪೈಲ್ವಾನ್ ಅವರನ್ನು ಕರೆದೊಯ್ದರು.
ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನ ಶಿವಲೀಲಾ ಕೊಟ್ರಯ್ಯ, ಬಿಜೆಪಿಯ ಯಶೋಧಾ ಹೆಗ್ಗಪ್ಪ ನಾಮಪತ್ರ ಸಲ್ಲಿಸಿದರು.