Advertisement

ಕೆಲವೆಡೆ ಮುಖಂಡರು ಕೈ ಕೊಟ್ಟಿರಬಹುದು!

10:32 AM May 25, 2019 | Naveen |

ದಾವಣಗೆರೆ: ಕಾಲಾವಕಾಶ ಅಭಾವ ಹಾಗೂ ಕ್ಷೇತ್ರದಲ್ಲಿ ಎಲ್ಲಾ ಕಡೆ ಸುತ್ತಾಡಲಾಗದಿದ್ದರಿಂದ ಈ ಚುನಾವಣೆಯಲ್ಲಿ ತಮಗೆ ಹಿನ್ನೆಡೆಯಾಯಿತು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪರಾಜಯ ಅನುಭವಿಸಿದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಹೇಳಿದ್ದಾರೆ.

Advertisement

ಶುಕ್ರವಾರ, ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಸೋಲಿನ ಬಗ್ಗೆ ತಮ್ಮದೇ ಆದ ಕಾರಣ ನೀಡಿದ ಅವರು, ಈ ಚುನಾವಣೆಯಲ್ಲಿ ಕರ್ನಾಟಕವಲ್ಲದೆ, ಇಡೀ ದೇಶದಲ್ಲೇ ಪಕ್ಷಕ್ಕೆ ಹಿನ್ನೆಡೆಯಾಗಿದೆ.ಅದಕ್ಕೆ ದಾವಣಗೆರೆ ಕ್ಷೇತ್ರವೂ ಹೊರತಲ್ಲ. ಇರುವ ಸಮಯದಲ್ಲೇ ನನ್ನ ಪರವಾಗಿ ನಮ್ಮ ಪಕ್ಷದ ಮಾಜಿ ಶಾಸಕರು, ಮುಖಂಡರು ಸೇರಿದಂತೆ ಜೆಡಿಎಸ್‌. ಕಮ್ಯೂನಿಸ್ಟ್‌, ರೈತಸಂಘದವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ಕ್ಷೇತ್ರದಲ್ಲಿ ಬದಲಾವಣೆ ಆಗಬಹುದೆಂದು ಭಾವಿಸಿದ್ದೆವು. ಆದರೂ ಸಹ ತಮ್ಮ ನಿರೀಕ್ಷೆಯಂತೆ ಫಲಿತಾಂಶ ಸಿಗಲಿಲ್ಲ ಎಂದರು.

ಈ ಚುನಾವಣೆಯಲ್ಲಿ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸ್ಪರ್ಧಿಸಬೇಕೆಂಬುದು ಪಕ್ಷದ ಹೈಕಮಾಂಡ್‌, ಜಿಲ್ಲಾ ಮುಖಂಡರು ಹಾಗೂ ಎಲ್ಲಾ ಕಾರ್ಯಕರ್ತರ ಅಭಿಲಾಶೆಯಾಗಿತ್ತು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಆರೋಗ್ಯದ ದೃಷ್ಟಿಯಿಂದ ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ಅಭ್ಯರ್ಥಿಗಳಾಗಲಿಲ್ಲ. ನೀನೇ ಅಭ್ಯರ್ಥಿಯಾಗು ಎಂಬುದಾಗಿ ಅವರಿಬ್ಬರೂ ಹೇಳಿದರು. ಕೊನೆಗೆ ಎಲ್ಲಾ ಮುಖಂಡರು ಚರ್ಚಿಸಿ, ನನ್ನನ್ನು ಕಣಕ್ಕಿಳಿಸಿದ್ದರು. ಪಕ್ಷದ ತೀರ್ಮಾನವಾಗಿದ್ದರಿಂದ ನಾನು ಅಭ್ಯರ್ಥಿಯಾದೆ. ನನಗೆ ಬಿ ಫಾರಂ ಸಿಕ್ಕಿದ್ದೇ ನಾಮಪತ್ರ ಸಲ್ಲಿಸುವ ಕೊನೆಯ ಎರಡು ದಿನವಿದ್ದಾಗ. ಕೇವಲ 17 ದಿವಸ ಮಾತ್ರ ಚುನಾವಣೆಗೆ ಬಾಕಿ ಇದ್ದಿದ್ದರಿಂದ ಕ್ಷೇತ್ರದ ಎಲ್ಲಾ ಕಡೆ ನಾನು ಸುತ್ತಾಡಲು ಸಾಧ್ಯವಾಗಲಿಲ್ಲ. ಮುಖ್ಯವಾಗಿ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಕೆಲವು ಪಂಚಾಯಿತಿಗಳ ಮುಖಂಡರನ್ನೇ ಸಂಪರ್ಕಿಸಲಾಗಲಿಲ್ಲ. ಆದರೂ ಎಲ್ಲರ ಪ್ರಾಮಾಣಿಕ ಪರಿಶ್ರಮದಿಂದ 4,83,294 ಮತ ಗಳಿಸಿದ್ದೇನೆ. ಈ ಸೋಲಿನಿಂದ ನಾನು ಎದೆಗುಂದಿಲ್ಲ. ನನಗೇನೂ ವಯಸ್ಸಾಗಿಲ್ಲ. ಮೊದಲ ಬಾರಿಗೆ ದೊಡ್ಡ ಚುನಾವಣೆ ಎದುರಿಸಿದ್ದೇನೆ. ಈ ಸೋಲನ್ನೇ ಸವಾಲಾಗಿ ಸ್ವೀಕರಿಸಿ, ಮುಂದಿನ ದಿನಗಳಲ್ಲಿ ಹೋರಾಟ ನಡೆಸುವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ನಾನು, ಈ ಚುನಾವಣೆಯಲ್ಲಿ ಹಣ ಖರ್ಚು ಮಾಡಿಲ್ಲ. ವೆಚ್ಚ ಮಾಡಲು ನನ್ನ ಬಳಿ ಹಣವೇ ಇರಲಿಲ್ಲ. ಹಳ್ಳಿ ಹಳ್ಳಿಗಳಲ್ಲಿ ಮುಖಂಡರೇ ಹಣ ಸಂಗ್ರಹಿಸಿ, ಖರ್ಚು ಮಾಡಿದ್ದರು. ಇದನ್ನೆಲ್ಲಾ ನೋಡಿ ನನಗೆ ಗೆಲ್ಲುವ ನಂಬಿಕೆ ಇತ್ತು. ಮೇಲಾಗಿ 25 ವರ್ಷಗಳ ನಂತರ ಪಕ್ಷ ಹಿಂದುಳಿದ ಸಮುದಾಯದವರಿಗೆ ಟಿಕೆಟ್ ನೀಡಿದ್ದರಿಂದ ಫಲಿತಾಂಶ ನನ್ನ ಪರವಾಗಿ ಬರಬಹುದೆಂಬ ನಿರೀಕ್ಷೆ ಇತ್ತು. ಮೋದಿ ಅಲೆಯ ಜತೆಗೆ ಹೆಚ್ಚು ಯುವ ಜನಾಂಗ ಬಿಜೆಪಿ ಬೆಂಬಲಿಸಿದ್ದರಿಂದ ನಮ್ಮ ನಿರೀಕ್ಷೆ ಹುಸಿಯಾಯಿತು ಎಂದು ಅವರು ತಮ್ಮ ಸೋಲಿನ ಕಾರಣ ಬಿಚ್ಚಿಟ್ಟರು.

ಮೈತ್ರಿ ಅಭ್ಯರ್ಥಿಯಾಗಿದ್ದರಿಂದ ಜೆಡಿಎಸ್‌ನ ಮುಖಂಡರೂ ಸಹ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ನಿಜ, ನನ್ನ ಸ್ವಂತ ಕ್ಷೇತ್ರವಾದ ಹೊನ್ನಾಳಿಯಲ್ಲೇ ನನಗೆ ಹಿನ್ನಡೆಯಾಗಿದೆ. ಮಾಜಿ ಶಾಸಕ ಡಿ.ಜಿ.ಶಾಂತನಗೌಡರು ಸಹ ನನ್ನ ಪರವಾಗಿ ಎಲ್ಲಡೆ ಸುತ್ತಿ ಪ್ರಚಾರ ಮಾಡಿದ್ದರು. ಅಲ್ಲಿ ಮಾಜಿ ಸಚಿವ, ಬಿಜೆಪಿ ಹಾಲಿ ಶಾಸಕ ಇರುವುದರಿಂದ ಕಡಿಮೆ ಮತ ಬಂದಿರಬಹುದು. ಇನ್ನು ಕೆಲವಡೆ ಒಳ ರಾಜಕೀಯವೂ ನಡೆದಿರಬಹುದು. ನಾನು ಬೆಳೆದರೆ ಮುಂದೆ ಅಡ್ಡಿಯಾಗಬಹುದೆಂಬ ಹಿನ್ನೆಲೆಯಲ್ಲಿ ಕೆಲವರು ಒಳ ಹೊಡೆತ ನೀಡಿರಬಹುದು. ಕೆಲವು ಕಾಣದ ಕೈಗಳು ಸಹ ಕೆಲಸ ಮಾಡಿರಬಹುದು. ಆದರೆ, ಇದೇ ಕಾರಣದಿಂದ ನನಗೆ ಹಿನ್ನೆಡೆಯಾಗಿಲ್ಲ. ನಮ್ಮ ಹಾಗೂ ಮೈತ್ರಿ ಪಕ್ಷದ ಮುಖಂಡರು ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದಲ್ಲಿ ನಾನು ಈ ಪ್ರಮಾಣದ ಮತ ಗಳಿಸಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Advertisement

ಈ ಚುನಾವಣೆಯಲ್ಲಿ ನಾವು ಯುವ ಮತದಾರರನ್ನು ಸೆಳೆಯುವಲ್ಲಿ ವಿಫಲರಾಗಿದ್ದೇವೆ ಎಂದೆನಿಸುತ್ತಿದೆ. ಏಕೆಂದರೆ ಆ ಮತದಾರರು ನರೇಂದ್ರ ಮೋದಿಯತ್ತ ಆಕರ್ಷಿತರಾಗಿ ಬಿಜೆಪಿ ಬೆಂಬಲಿಸಿದ್ದಾರೆ. ಮುಖ್ಯವಾಗಿ ಪುಲ್ವಾಮಾ ಘಟನೆ ನಂತರದ ಸರ್ಜಿಕಲ್ ಸ್ಟ್ರೈಕ್‌ ಸಹ ಮತದಾರರ ಮೇಲೆ ಪರಿಣಾಮ ಬೀರಿದೆ. ಸೋಲಿಗೆ ಇನ್ನೂ ಬೇರೆ ಬೇರೆ ಕಾರಣಗಳಿರಬಹುದು. ಹಾಗಾಗಿ ವೈಫಲ್ಯದ ಪರಾಮರ್ಶೆ ಮಾಡಿಕೊಂಡು, ಮುಂದೆ ಜಿಲ್ಲಾದ್ಯಂತ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಶ್ರಮಿಸುವೆ. ಸೋಲಿನಿಂದ ಪಕ್ಷದ ಯಾವ ಕಾರ್ಯಕರ್ತರೂ ಕಂಗೆಡಬೇಕಿಲ್ಲ. ಕಾಲಚಕ್ರ ಉರುಳಿದಂತೆ ಎಲ್ಲವೂ ಬದಲಾಗಲಿದೆ. ಅದಕ್ಕಾಗಿ ನಾವು ಕಾಯಬೇಕಷ್ಟೆ ಎಂದು ಅವರು ಹೇಳಿದರು.

ಮೈತ್ರಿ ಪಕ್ಷಗಳ ಮುಖಂಡರ ಗೊಂದಲದ ಹೇಳಿಕೆಗಳು ಸಹ ಚುನಾವಣೆ ಮೇಲೆ ಪರಿಣಾಮ ಬೀರಿರಬಹುದು. ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಾದ ಹರಿಹರ, ದಾವಣಗೆರೆ ದಕ್ಷಿಣದಲ್ಲೂ ಬಿಜೆಪಿಗೆ ಲೀಡ್‌ ಬಂದಿರುವುದು ಆಶ್ಚರ್ಯ ತಂದಿದೆ. ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ಪಕ್ಷದ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮಂಜಪ್ಪ, ತಮ್ಮ ಪರವಾಗಿ ಪ್ರಚಾರ ನಡೆಸಿದ ಶಾಸಕ ಶಾಮನೂರು, ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಜೆಡಿಎಸ್‌ನ ಮಾಜಿ ಶಾಸಕ ಎಚ್.ಎಸ್‌.ಶಿವಶಂಕರ್‌, ಹೊದಿಗೆರೆ ರಮೇಶ್‌, ಅರಸೀಕೆರೆ ಕೊಟ್ರೇಶ್‌, ತೇಜಸ್ವಿ ಪಟೇಲ್, ಸಿಪಿಐನ ಎಚ್.ಕೆ.ರಾಮಚಂದ್ರಪ್ಪ ಸೇರಿದಂತೆ ಮುಖಂಡರಿಗೆ ತಾವು ಕೃತಜ್ಞತೆ ಸಲ್ಲಿಸುವೆ ಎಂದು ತಿಳಿಸಿದರು.

ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ದಾವಣಗೆರೆ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಯೂಬ್‌ ಪೈಲ್ವಾನ್‌, ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿ.ಶಿವಕುಮಾರ್‌, ಮಾಜಿ ಉಪಾಧ್ಯಕ್ಷ ಎ.ನಾಗರಾಜ್‌, ಮುಜಾಹಿದ್‌ ಪಾಷ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ನಾನು ಬಲಿಪಶು ಆಗಿಲ್ಲ
ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ನಾನೇನು ಬಲಿಪಶು ಆಗಿಲ್ಲ. 6 ತಿಂಗಳ ಮೊದಲೇ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ನೀನೇ ಅಭ್ಯರ್ಥಿಯಾಗು ಎಂದೇಳಿದ್ದರು. ಬೇರೆ ಯಾರನ್ನೋ ಕರೆತಂದು ಕಣಕ್ಕಿಳಿಸುವುದಕ್ಕಿಂತ ಸ್ಥಳೀಯ, ಪರಿಚಿತ ವ್ಯಕ್ತಿಯೇ ಸೂಕ್ತ ಎಂಬುದಾಗಿ ಎಲ್ಲಾ ಮುಖಂಡರು ಸೂಚಿಸಿದ್ದರಿಂದ ನಾನು ಧೈರ್ಯದಿಂದ ಅಭ್ಯರ್ಥಿಯಾದೆ. ನಾನು ಅಭ್ಯರ್ಥಿಯಾದ ನಂತರ ಬಿಜೆಪಿ ಪಡೆಯಲ್ಲಿ ಆತಂಕವಿತ್ತು. ಸಮೀಕ್ಷಾ ವರದಿ ಪ್ರಕಟವಾದ ನಂತರ ಅವರ ಆತಂಕ ದೂರವಾಗಿತ್ತು. 18ನೇ ವಯಸ್ಸಿನಲ್ಲೇ ರಾಜಕೀಯ ಪ್ರವೇಶಿಸಿರುವ ನಾನು, 25ನೇ ವರ್ಷದಲ್ಲಿ ಹೊನ್ನಾಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷನಾಗಿ, ನಂತರ 36ನೇ ವರ್ಷದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾದೆ. ನನಗಿನ್ನೂ ಬಹಳ ವಯಸ್ಸಿದೆ. ಎಲ್ಲರೊಟ್ಟಿಗೆ ಪಕ್ಷ ಸದೃಢಗೊಳಿಸುವೆ. ಜನಪರ ಹೋರಾಟದಲ್ಲಿ ತೊಡಗಿಸಿಕೊಳ್ಳುವೆ.
•ಎಚ್.ಬಿ.ಮಂಜಪ್ಪ,
ಪರಾಜಿತ ಮೈತ್ರಿ ಅಭ್ಯರ್ಥಿ
Advertisement

Udayavani is now on Telegram. Click here to join our channel and stay updated with the latest news.

Next