Advertisement

ಯುವ ಜನಾಂಗಕ್ಕೆ ಬೇಕಿದೆ ಸ್ವಾಭಿಮಾನ-ಸಂಸ್ಕಾರ 

11:31 AM Oct 04, 2019 | Naveen |

ಮಾನವ ಧರ್ಮ ಮಂಟಪ(ದಾವಣಗೆರೆ): ರಾಷ್ಟ್ರದ ಉಜ್ವಲ ಭವಿಷ್ಯ ನಿರ್ಮಾಣ ಮಾಡುವ ಶಕ್ತಿ ಯುವಜನಾಂಗದಲ್ಲಿದೆ. ಆಲಸ್ಯ ಮತ್ತು ದುರ್ವಸನಗಳಿಂದ ದೂರವಾಗಿ ಸದೃಢ ಸಮಾಜ ಕಟ್ಟಿ ಬೆಳೆಸುವಲ್ಲಿ ಯುವ ಜನಾಂಗ ಮುಂದಾಗಬೇಕಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಹೇಳಿದ್ದಾರೆ.

Advertisement

ಗುರುವಾರ ನಗರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 5ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಯುವ ಜನಾಂಗದಲ್ಲಿ ಸ್ವಾಭಿಮಾನ ಬೆಳೆಸುವ ಮತ್ತು ಉತ್ತಮ ಸಂಸ್ಕಾರ ಕಲಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಯೌವನಾವಸ್ಥೆಯಲ್ಲಿ ಧಾರ್ಮಿಕ ಮೌಲ್ಯಗಳನ್ನು ಪರಿಪಾಲಿಸಿಕೊಂಡು ಬರುವ ನಿಟ್ಟಿನಲ್ಲಿ ಜಾಗೃತಗೊಳಿಸಬೇಕಾಗಿದೆ. ಶಿಸ್ತು, ಶ್ರದ್ಧೆ, ಛಲ, ಸಮರ್ಪಣಾ ಮನೋಭಾವನೆಗಳನ್ನು ಬೆಳೆಸಬೇಕಿದೆ. ಸ್ವಾರ್ಥ ರಹಿತ ಬದುಕಿನಿಂದ ಬಾಳಿಗೆ ಬಲ ಮತ್ತು ಬೆಲೆಯಿದೆ ಎಂಬುದನ್ನು ನೆನಪಿಸುವ ಅವಶ್ಯಕತೆಯಿದೆ. ಯೌವನ, ಧನ ಸಂಪತ್ತು, ಅಧಿಕಾರ ಮತ್ತು ಅವಿವೇಕ ಈ ನಾಲ್ಕರಲ್ಲಿ ಒಂದಿದ್ದರೆ ಸಾಕು, ಮನುಷ್ಯನನ್ನು ನಾಶ ಮಾಡುತ್ತವೆ. ಈ ನಾಲ್ಕು ಒಬ್ಬ ವ್ಯಕ್ತಿಯಲ್ಲಿ ಮನೆ ಮಾಡಿದರೆ ಇನ್ನೆಷ್ಟು ಅನಾಹುತ ಆದೀತೆಂಬುದನ್ನು ಯೋಚಿಸಲಾಗದು ಎಂದು ಅವರು ಹೇಳಿದರು.

ರಂಭಾಪುರಿ ಬೆಳಗು ಮಾಸಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಸಚಿವ ಸಿ. ಸಿ. ಪಾಟೀಲ್‌, ಯುವ ಜನಾಂಗದಲ್ಲಿ ಆದರ್ಶ ಗುಣ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕಿರಿ ವಯಸ್ಸಿನಲ್ಲಿ ಉತ್ತಮ ಸಂಸ್ಕಾರ ಕಲಿಸಿದರೆ ಜೀವನದ ಕೊನೆಯವರೆಗೆ ಬಾಳಿಗೆ ಬಲ ಬರಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ವರ್ತಿಸುವ ಅವಶ್ಯಕತೆ ಇದೆ ಎಂದರು.

ಸಂಸದ ಜಿ. ಎಂ. ಸಿದ್ಧೇಶ್ವರ್‌, ಶಾಸಕ ಎಸ್‌. ಎ. ರವೀಂದ್ರನಾಥ, ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ| ಎ. ಎಚ್‌. ಶಿವಯೋಗಿಸ್ವಾಮಿ, ಎಚ್‌. ಆನಂದಪ್ಪ, ಡಾ| ಎಂ. ಶಿವಕುಮಾರಸ್ವಾಮಿ, ಕೇರಳದ ಸಾಹಿತಿ ಜಿ. ಕೆ. ನಂಬಿಯಾರ್‌ ಮುಖ್ಯ ಅತಿಥಿಗಳಾಗಿ, ಮಾತನಾಡಿದರು.

Advertisement

ಪತ್ರಕರ್ತ ಎ.ಆರ್‌.ರಘುರಾಮ್‌, ರಾಷ್ಟ್ರಪ್ರಜ್ಞೆ ಮತ್ತು ಯುವ ಜನತೆ ಕುರಿತು ವಿಚಾರ ಮಂಡಿಸಿದರು. ಅಮ್ಮಿನಭಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶ್ರೀ ನುಡಿ ತೋರಣ ಸಮರ್ಪಿಸಿದರು. ಎಸಳೂರು ತೆಂಕಲಗೂಡುಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ಸಮಾರಂಭದ ನೇತೃತ್ವ ವಹಿಸಿದ್ದರು.

ಕಿರಿವಯಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಸವಣೂರಿನ ಡಾ| ಗುರುಪಾದಯ್ಯ ವೀ. ಸಾಲಿಮಠ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ರಂಭಾಪುರಿ ಶ್ರೀಗಳು ಪ್ರದಾನ ಮಾಡಿ, ಆಶೀರ್ವದಿಸಿದರು.

ಇಂಚಿಗೇರಿ ಡಾ| ರೇಣುಕ ಶ್ರೀ, ಬೀರೂರು ರುದ್ರಮುನಿ ಶ್ರೀ, ಕಾರ್ಜುವಳ್ಳಿ ಶಂಭುಲಿಂಗ ಶ್ರೀ, ಹರಪನಹಳ್ಳಿ ಟಿ.ಎಂ.ಎ.ಇ. ಸಂಸ್ಥೆಯ ಕಾರ್ಯದರ್ಶಿ ಟಿ. ಎಂ. ಚಂದ್ರಶೇಖರಯ್ಯ, ರಮಣಲಾಲ್‌ ಸಿ. ಸಂಘವಿ, ಮಾಲತೇಶ್‌ ಜಾಧವ್‌, ಕಾಸಲ್‌ ಅಮರನಾಥ್‌, ಸತ್ಯನಾರಾಯಣ, ಬಿ. ಎಂ. ಷಣ್ಮುಖಯ್ಯ, ಚಾಕಣಿ ಬಸವರಾಜ್‌, ಪ್ರವೀಣಕುಮಾರ್‌ ಸಾಲಿಮಠ, ಚನಬಸಯ್ಯ ಹಿರೇಮಠ, ಪ್ರಭುಸ್ವಾಮಿ ಹಾಲೇವಾಡಿಮಠ, ಜಿ. ಎಂ. ರೇವಣಸಿದ್ಧಪ್ಪ, ರವೀಂದ್ರ, ಎಸ್‌. ಟಿ. ವೀರೇಶ್‌, ಲಿಂಗರಾಜು ಸೇರಿದಂತೆ ಹಲವು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಹರಸಿದರು. ಶಿವಮೊಗ್ಗದ ಕುಮಾರಿ ಕೆ. ಆರ್‌. ಭೂಮಿಕಾ ಭರತನಾಟ್ಯ ಪ್ರದರ್ಶಿಸಿದರು.

ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಸಂಗೀತ ಜರುಗಿತು. ಬಾದಾಮಿ ಮಲ್ಲಿಕಾರ್ಜುನ ಸ್ವಾಗತಿಸಿದರು. ದಾವಣಗೆರೆಯ ಎಸ್‌. ಮಲ್ಲಯ್ಯ ಮತ್ತು ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಸಮಾರಂಭದ ನಂತರ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಪೀಠದ ಸಿಬ್ಬಂದಿ ಹಾಗೂ ಭಕ್ತ ವೃಂದದಿಂದ ನಜರ್‌ (ಗೌರವ) ಸಮರ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next