Advertisement

Davangere: ಪಕ್ಷ ಗಳ ಗೆಲುವಿನ ಮತ ಲೆಕ್ಕಾಚಾರ ಚುನಾವಣಾ ಫಲಿತಾಂಶದ ಕಾತರ

05:57 PM May 13, 2024 | Team Udayavani |

ಉದಯವಾಣಿ ಸಮಾಚಾರ
ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿದ ನಂತರ ದಿನೇ ದಿನೇ ಫಲಿತಾಂಶದ ಕಾತುರ ಹೆಚ್ಚುತ್ತಿದೆ. ಮತದಾರರು ಹಾಗೂ ಪಕ್ಷಗಳಲ್ಲಿ ಗೆಲುವಿನ ಲೆಕ್ಕಾಚಾರ ಜೋರಾಗಿದ್ದು ಎಲ್ಲೆಡೆ ಇದೇ ಚರ್ಚೆ ನಡೆದಿದೆ. ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್‌ ಕಾಲು ಶತಮಾನಕ್ಕೂ ಹೆಚ್ಚು ಕಾಲದಿಂದ ಕಾಯುತ್ತಿದ್ದರೆ, ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರಿಸುವ ಉಮೇದಿನಲ್ಲಿದೆ.

Advertisement

ಹೌದು ಹಿಂದೊಮ್ಮೆ ಕೈ ಭದ್ರಕೋಟೆಯೇ ಆಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿ ಕಾಲು ಶತಮಾನಕ್ಕಿಂತಲೂ ಹೆಚ್ಚು ವರ್ಷವಾಗಿವೆ. 1998 ರಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವಿನ ನಂತರ ದಾವಣಗೆರೆ
ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ 26 ವರ್ಷಗಳಿಂದ ಗೆದ್ದೇ ಇಲ್ಲ.

1977 ರಲ್ಲಿ ಅವಿಭಜಿತ ಚಿತ್ರದುರ್ಗ ಜಿಲ್ಲೆಯಿಂದ ಪ್ರತ್ಯೇಕವಾದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನದ್ದೇ ಪಾರಮ್ಯ. 1977 ರಲ್ಲಿ ಕೊಂಡಜ್ಜಿ ಬಸಪ್ಪ, 1980 ರಲ್ಲಿ ಟಿ.ವಿ. ಚಂದ್ರಶೇಖರಪ್ಪ, 1984 ರಿಂದ 1991 ರ ವರೆಗೆ ಚನ್ನಯ್ಯ ಒಡೆಯರ್‌ ಗೆದ್ದ ಇತಿಹಾಸ ಇದೆ. 1991 ರಲ್ಲಿ ಬಿಜೆಪಿಯ ಎಸ್‌.ಎ. ರವೀಂದ್ರನಾಥ್‌ ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್‌ ವಿರುದ್ಧ 455 ಅಲ್ಪಮತಗಳಲ್ಲಿ ಸೋತ ನಂತರ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಮಲದ ಕಮಾಲ್‌ ಗೆ ಮುನ್ನುಡಿ ಬರೆಯಲಾಯಿತು.

1996 ರಲ್ಲಿ ಭೀಮಸಮುದ್ರದ ಅಡಕೆ ವರ್ತಕ ಜಿ. ಮಲ್ಲಿಕಾರ್ಜುನಪ್ಪ  ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್‌ ವಿರುದ್ಧ 97,087 ಮತಗಳ ಅಂತರದಲ್ಲಿ ಜಯಿಸುವ ಮೂಲಕ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದರು. 1998 ರ ಚುನಾವಣೆಯಲ್ಲಿ
ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ಬಿಜೆಪಿಯ ಜಿ. ಮಲ್ಲಿಕಾರ್ಜುನಪ್ಪ ವಿರುದ್ಧ 11,332 ಮತಗಳಲ್ಲಿ ಗೆಲ್ಲುವ ಮೂಲಕ ದಾವಣಗೆರೆ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್‌ ತೆಕ್ಕೆಗೆ ತರುವಲ್ಲಿ ಯಶಸ್ವಿಯಾದರು. ಆದರೆ, ಹದಿಮೂರೇ ತಿಂಗಳಲ್ಲಿ ನಡೆದ 1999 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ. ಮಲ್ಲಿಕಾರ್ಜುನಪ್ಪ ವಿರುದ್ಧ 16,269 ಮತಗಳಲ್ಲಿ ಶಾಮನೂರು ಸೋಲು
ಕಂಡರು.

1999 ರ ಗೆಲುವಿನ ನಂತರ ಬಿಜೆಪಿ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. 2004, 2009, 2014, 2019 ರಲ್ಲಿ ಜಿ. ಮಲ್ಲಿಕಾರ್ಜುನಪ್ಪ ಅವರ ಪುತ್ರ ಡಾ|ಜಿ.ಎಂ. ಸಿದ್ದೇಶ್ವರ ಸತತವಾಗಿ ಗೆಲುವು ಸಾಧಿಸುವ ಮೂಲಕ ಅಕ್ಷರಶಃ ಬಿಜೆಪಿಯನ್ನು ಭದ್ರಕೋಟೆ ಯನ್ನಾಗಿಸಿದ್ದಾರೆ. ಸತತ ಮೂರು ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿ ಎಸ್‌.ಎಸ್‌. ಮಲ್ಲಿಕಾರ್ಜುನ್‌
ವಿರುದ್ದವೇ ಗೆಲುವು ದಾಖಲಿಸಿರುವುದು ವಿಶೇಷ.

Advertisement

ಕಾತರದಲ್ಲಿ ಕಾಂಗ್ರೆಸ್‌: 1998 ರ ನಂತರ ಗೆಲುವನ್ನೇ ಕಾಣದ ಕಾಂಗ್ರೆಸ್‌ 2024 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವಂತಹ ಭರಪೂರ ವಿಶ್ವಾಸದಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಅಮೋಘ ಸಾಧನೆ. ಹರಿಹರ ಹೊರತು ಪಡಿಸಿ ಇನ್ನುಳಿದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಇರುವುದು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಅಲೆಯಲ್ಲಿ ಕಾಲು
ಶತಮಾನದ ನಂತರ ಕ್ಷೇತ್ರ ಕೈ ವಶವಾಗಲಿದೆ ಎಂಬ ಲೆಕ್ಕಾಚಾರ ನಡೆದಿದೆ.

ಕಳೆದ ಹಲವಾರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾಳೆಯದಲ್ಲಿ ಕಾಣದೇ ಹೋಗಿದ್ದಂತಹ ವಿಶ್ವಾಸ, ಒಗ್ಗಟ್ಟಿನ
ಹೋರಾಟ, ಗೆದ್ದೇ ಗೆಲ್ಲಬೇಕು ಎಂಬ ಕಾರ್ಯತಂತ್ರ, ಮತದಾರರ ಮನೆ, ಮನಗಳಿಗೆ ಮುಟ್ಟುವ ನಿಟ್ಟಿನಲ್ಲಿ ನಡೆಸಿದ ಅತ್ಯಂತ ವ್ಯವಸ್ಥಿತ ಪ್ರಚಾರ ಕಾರ್ಯ, ಹೊಸ, ವಿದ್ಯಾವಂತ ಅಭ್ಯರ್ಥಿ… ಈ ಎಲ್ಲವೂ ಕಾಂಗ್ರೆಸ್‌ನ ಗೆಲುವಿಗೆ ಸಹಕಾರಿ ಆಗಲಿವೆ ಎಂಬ ಭರ್ಜರಿ ವಿಶ್ವಾಸ ಕಾಂಗ್ರೆಸ್‌ನಲ್ಲಿ ಕಂಡು ಬರುತ್ತಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನಲ್ಲಿ ಇಂತಹ ಆತ್ಮವಿಶ್ವಾಸದ
ವಾತಾವರಣ ಮೂಡಿರುವುದು ವಿಶೇಷ.

ಬಲದ ವಿಶ್ವಾಸದಲ್ಲಿ ಬಿಜೆಪಿ: ಸತತ ನಾಲ್ಕು ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಸಹ ಐದನೇ ಬಾರಿಯೂ ಜಯ ಸಾಧಿಸುವ ಭಾರೀ ವಿಶ್ವಾಸದಲ್ಲೇ ಇದೆ. ಕೇಂದ್ರ ಸರ್ಕಾರದ ಸಾಧನೆ, ಸಿದ್ದೇಶ್ವರ ಅವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ, ಹೊಸ ಅಭ್ಯರ್ಥಿ, ಪ್ರಮುಖವಾಗಿ ಮೋದಿ ಅಲೆ, ಜೆಡಿಎಸ್‌ನೊಂದಿಗೆ ಮೈತ್ರಿ, ಬೂತ್‌, ಶಕ್ತಿ ಕೇಂದ್ರ ಮಟ್ಟದಲ್ಲಿ ಮುಖಂಡರು, ಕಾರ್ಯಕರ್ತರ ಶ್ರಮ, ಯುವ ಮತದಾರ ಕೈ ಹಿಡಿಯುವ ವಿಶ್ವಾಸ ಹೀಗೆ ಎಲ್ಲವೂ ಗೆಲುವು ತಂದು ಕೊಟ್ಟೇ ಕೊಡುತ್ತವೆ ಎಂಬ ಆತ್ಮವಿಶ್ವಾಸ ಕಮಲ ಪಾಳಯದಲ್ಲಿ ಇದೆ. ಆದರೂ, ಪ್ರತಿ ಚುನಾವಣೆಯಲ್ಲಿನ ಬಿಜೆಪಿಯಲ್ಲಿನ ಸಂಘಟಿತ ಹೋರಾಟ ಈ ಬಾರಿ ಅಷ್ಟಾಗಿ ಕಂಡು ಬರಲಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವುದೂ ಈ ಬಾರಿಯ ವಿಶೇಷ.

ಲೆಕ್ಕಾಚಾರಗಳು ಏನೇ ಇರಲಿ. ಈಗಾಗಲೇ ಮತದಾರರ ನಿರ್ಧಾರ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಭದ್ರವಾಗಿ ದಾಖಲಾಗಿದೆ. ಜೂ. 4 ರಂದು ಬಹಿರಂಗವಾಗಲಿದೆ. ಅಲ್ಲಿಯವರೆಗೂ ಸೋಲು-ಗೆಲುವಿನ ಲೆಕ್ಕಾಚಾರ ಇದ್ದೇ ಇರಲಿದೆ.

■ ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next