ದಾವಣಗೆರೆ: ಇಡೀ ಮಾನವ ಕುಲಕ್ಕೆ ಪ್ರೀತಿಯ… ಸಂದೇಶ ಸಾರಿದ ಮಹಾನ್ ದಾರ್ಶನಿಕ, ಕ್ರೈಸ್ತ ಧರ್ಮಿಯರ ಆರಾಧ್ಯ ದೈವ, ದೇವಸುತ… ಎಂದೇ ಪೂಜಿಸಲ್ಪಡುವ ಏಸುಕ್ರಿಸ್ತನ ಜಯಂತಿ ಕ್ರಿಸ್ಮಸ್… ಹಬ್ಬವನ್ನ ಕ್ರೈಸ್ತ ಬಾಂಧವರು ಬುಧವಾರ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ಪಿ.ಜೆ. ಬಡಾವಣೆಯ ಸಂತ ತೋಮಸರ ದೇವಾಲಯ ಕ್ರಿಸ್ಮಸ್‌ನ ಪ್ರಮುಖ ಆಕರ್ಷಣಾ ಕೇಂದ್ರವಾಗಿತ್ತು. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯಿಂದಲೇ ವಿವಿಧ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಅಸಂಖ್ಯಾತ ಭಕ್ತರು, ಕ್ರಿಸ್ತಾರಾಧಕರು ಮೊಂಬತ್ತಿ ಬೆಳಗಿ, ಹಾಡು ಹಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಮಂಗಳವಾರ ಮಧ್ಯರಾತ್ರಿಯಿಂದಲೇ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿತ್ತು. ಮೇರ್ರಿ ಕ್ರಿಸ್ಮಸ್… ಎಂಬ ಘೋಷಣೆ ಹಬ್ಬದ ಸಂಭ್ರಮವನ್ನು ನೂರ್ಮಡಿಗೊಳಿಸಿತ್ತು. ಸಾಂತಾ ಕ್ಲಾಸ್… ವೇಷಧಾರಿಗಳು ಎಲ್ಲರಿಗೂ ಹಬ್ಬದ ಶುಭ ಕೋರಿದರು. ಸರ್ವರೂ ವಿಶೇಷ ಪ್ರಾರ್ಥನೆಯ ಮೂಲಕ ಕ್ರಿಸ್ತನ ಗುಣಗಾನ ಮಾಡಿದರು.
ಕ್ರೈಸ್ತ ಬಾಂಧವರು ಗೋಂದಲಿ(ದನದ ಕೊಟ್ಟಿಗೆ)ಯಲ್ಲಿ ಬಾಲ ಏಸುವಿನ ಪ್ರತಿಷ್ಠಾಪನೆ ಮಾಡಿ, ಬಲಿ ಪೂಜೆ, ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಫ್ಲೆಕ್ಸ್ ಮೂಲಕ ಕ್ರಿಸ್ತನ ಜನ್ಮ ವೃತ್ತಾಂತ, ಜೀವನ ಸಾಧನೆ, ಸಂದೇಶಗಳ ಪ್ರದರ್ಶಿಸಲಾಗಿತ್ತು.
ಕ್ರೈಸ್ತ ಬಾಂಧವರ ಮನೆಗಳು ಕ್ರಿಸ್ಮಸ್ ಟ್ರೀ, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದವು. ಸಾಂತಾಕ್ಲಾಸ್‌ನ ವೇಷಧಾರಿಯೊಂದಿಗೆ ಅನೇಕರು ಮನೆ ಮನೆಗೆ ತೆರಳಿ, ಏಸು, ಕ್ರಿಸ್ಮಸ್ ಕುರಿತ ಹಾಡುಗಳ ಹಾಡುವ ಮೂಲಕ ಕ್ರಿಸ್ಮಸ್ ಶುಭ ಕೋರಿದರು. ಬುಧವಾರ ಬೆಳಗ್ಗೆಯಿಂದಲೇ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಸಂಜೆ ಮೇಣದ ಬತ್ತಿ ಬೆಳಗಿಸುವ ಮೂಲಕ ಕ್ರಿಸ್ಮಸ್ ಸಂಭ್ರಮದ ಜೊತೆಗೆ ಇಡೀ ಜಗತ್ತಿಗೆ ಒಳ್ಳೆಯದಾಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಂತ ತೋಮಸರ ಚರ್ಚ್‌ನಲ್ಲಿ ಕ್ರೈಸ್ತ ಬಾಂಧವರ ಜೊತೆಗೆ ಸಾವಿರಾರು ಜನರು ಚರ್ಚ್ ಆವರಣದಲ್ಲಿ ಕಂಡು ಬಂದರು. ಹ್ಯಾಪಿ, ಮೇರಿ ಕ್ರಿಸ್ಮಸ್… ಎನ್ನುತ್ತಾ ಪರಸ್ಪರ ಶುಭ ಕೋರಿದರು. ಹೊಸ ವರ್ಷದ ಶುಭಾಶಯವನ್ನೂ ಕೋರಿದರು. ಚರ್ಚ್ ಆವರಣದಲ್ಲಿ ಎಲ್ಲಿ ನೋಡಿದರೂ ಜನ ಸಾಗರದಿಂದಾಗಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಜಯನಗರ, ಜಾಲಿನಗರ, ಕೆ.ಆರ್. ರಸ್ತೆ ಒಳಗೊಂಡಂತೆ ಇತರೆ ಪ್ರಾರ್ಥನಾ ಮಂದಿರದಲ್ಲಿ ಕ್ರಿಸ್ಮಸ್ ಸಂಭ್ರಮ ಕಂಡು ಬಂದಿತು.