ದಾವಣಗೆರೆ: ಪ್ರಶ್ನೆಗಳಿಗೆ ಉತ್ತರ ಬರೆಯಲು ಬಂದ ವಿದ್ಯಾರ್ಥಿಗಳ ಕೈಗೆ ಉತ್ತರ ಪತ್ರಿಕೆಯೇ ಸಿಕ್ಕರೆ ಹೇಗೆ!
ಇಂಥದೊಂದು ಎಡವಟ್ಟು ದಾವಣಗೆರೆ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಇ-ಕಾಮರ್ಸ್ ಪರೀಕ್ಷೆ ವೇಳೆ ಕಂಡು ಬಂದಿದೆ.
ವಾಣಿಜ್ಯ ವಿಭಾಗದ ಮುಕ್ತ ಆಯ್ಕೆ ಇ-ಕಾಮರ್ಸ್ ಪರೀಕ್ಷೆ ಮಂಗಳವಾರ ನಿಗದಿಯಾಗಿತ್ತು. ನಿಯಮದಂತೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಬಂದಿರುವ ಪ್ರಶ್ನೆ ಪತ್ರಿಕೆ ಬಂಡಲ್ ತೆರೆದು ವಿದ್ಯಾರ್ಥಿಗಳ ಕೈಗೆ ನೀಡಿದ್ದಾರೆ. ಇದರಲ್ಲಿ ಪ್ರಶ್ನೆ ಪತ್ರಿಕೆ ಬದಲಾಗಿ ಉತ್ತರ ಪತ್ರಿಕೆ ಇರುವುದು ವಿದ್ಯಾರ್ಥಿಗಳ ಕೈಗೆ ಸಿಕ್ಕ ಮೇಲೆಯೇ ಗೊತ್ತಾಗಿದೆ. ಇನ್ನು ಕೆಲವು ಕಾಲೇಜುಗಳಲ್ಲಿ ಮೇಲ್ವಿಚಾರಕರು ಪತ್ರಿಕೆ ಹಂಚುವ ಮೊದಲೇ ಗುರುತಿಸಿ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮುದ್ರಿತ ಉತ್ತರ ಪತ್ರಿಕೆ ಹಂಚಿಕೆಯಾದ ಪ್ರಮಾದ ಗೊತ್ತಾಗುತ್ತಿದ್ದಂತೆ ದಾ.ವಿ.ವಿ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ದಾವಣಗೆರೆ ವಿವಿ ವ್ಯಾಪ್ತಿಯ ಕಾಲೇಜಗಳಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿಷಯ ಆಯ್ಕೆ ಮಾಡಿಕೊಂಡಿದ್ದು 14 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿತ್ತು.
ಪ್ರಶ್ನೆ ಪತ್ರಿಕೆ ಬದಲಾಗಿ ಮುದ್ರಿತ ಉತ್ತರ ಪತ್ರಿಕೆ ಬಂಡಲ್ ಪರೀಕ್ಷಾ ಕೇಂದ್ರಕ್ಕೆ ಹೇಗೆ ಬಂದಿತು. ಇದು ಯಾರ ಪ್ರಮಾದದಿಂದ ಆಗಿದೆ ಎಂಬುದರ ಬಗ್ಗೆ ವಿವಿ ತನಿಖೆಗೆ ಮುಂದಾಗಿದ್ದು ಸದ್ಯ ಪರೀಕ್ಷೆಯನ್ನು ಮುಂದೂಡುವ ನಿರ್ಧಾರ ಕೈಗೊಂಡಿದೆ.