Advertisement

Davanagere; ಅಡಕೆ ಮರ ಕಡಿದಿದ್ದಕ್ಕೆ ಮಹಿಳೆಯ ಕೊಲೆ; ಇಬ್ಬರು ಆರೋಪಿಗಳ ಬಂಧನ

06:58 PM May 14, 2024 | Team Udayavani |

ದಾವಣಗೆರೆ: ಅಡಕೆ ಮರಗಳನ್ನು ಕಡಿದಿದ್ದ ಕೋಪದಿಂದ ಮಹಿಳೆಯನ್ನು ನೇಣು ಬಿಗಿದು ಕೊಲೆ ಮಾಡಿ ಭದ್ರಾ ನಾಲೆಯಲ್ಲಿ ಎಸೆದ್ದಿದ್ದ ಇಬ್ಬರು ಆರೋಪಿಗಳನ್ನು ಬಸವಾಪಟ್ಟಣ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ನಾಗೊಲೆ (ಅರಕೆರೆ ಗೇಟ್) ನಿವಾಸಿ ಎಚ್.ಜಿ. ಕುಮಾರ್ (50), ಅರಕೆರೆ ಗ್ರಾಮದ ಚಿದಾನಂದಪ್ಪ (54) ಬಂಧಿತರು.

ಇವರಿಬ್ಬರು ಏ. 20 ರಂದು ಅರಕೆರೆ ಗ್ರಾಮದ ನೇತ್ರಾವತಿ (47) ಎಂಬುವರನ್ನು ತೋಟದಲ್ಲಿ ಕೊಲೆ ಮಾಡಿ, ಭದ್ರಾ ನಾಲೆಯಲ್ಲಿ ಶವವನ್ನು ಎಸೆದಿದ್ದರು.

ಚನ್ನಗಿರಿ ತಾಲೂಕಿನ ಕಣಿವೆ ಬಿಳಚಿ ಗ್ರಾಮದ ಬಳಿ ಭದ್ರಾ ನಾಲೆಯಲ್ಲಿ ಮೇ 5ರಂದು ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊರಳಲ್ಲಿ ಹಗ್ಗ ಸುತ್ತಿದ ರೀತಿಯಲ್ಲಿದ್ದು, ಯಾರೋ ಎಲ್ಲಿಯೋ ಕೊಲೆ ಮಾಡಿ ನಾಲೆಗೆ ಹಾಕಿರಬಹುದು ಎಂಬ ಅನುಮಾನದಿಂದ ಬಸವಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ್, ಜಿ.ಮಂಜುನಾಥ್, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ವೃತ್ತ ನಿರೀಕ್ಷಕ ಗೋಪಾಲನಾಯ್ಕ್ ಸಿಬ್ಬಂದಿಗಳ ತಂಡ ಶವದ ಗುರುತು ಪತ್ತೆಗಾಗಿ ಜಿಲ್ಲೆಯ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳ ಕಾಣೆಯಾದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣದ ಮಹಿಳೆಯ ಚಹರೆಗೂ ಹಾಗೂ ಅನಾಮಧೇಯ ಶವದ ಚಹರೆಗೂ ಹೋಲಿಕೆ ಕಂಡು ಬಂದಿತ್ತು. ಈ ವೇಳೆ ಹೆಚ್ಚಿನ ವಿಚಾರಣೆ ನಡೆಸಿದಾಗ ಕೊಲೆಯಾದ ಮಹಿಳೆ ಅರಕೆರೆ ಗ್ರಾಮದ 47 ವರ್ಷದ ನೇತ್ರಾವತಿ ಎಂಬುದು ಪತ್ತೆಯಾಯಿತು.

Advertisement

ಎಲ್ಲ ಆಯಾಮಗಳಲ್ಲಿ ತೀವ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಿದಾಗ ಕೊಲೆಗೀಡಾದ ನೇತ್ರಾವತಿ ಏ.20 ರಂದು ಜಮೀನಿನಲ್ಲಿ ಅಡಕೆ ಗಿಡಗಳನ್ನು ಕಡಿದಿದ್ದರಿಂದ ಕೋಪಗೊಂಡ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ನಂತರ ಜಮೀನಿನ ಸಮೀಪದ ಭದ್ರಾ ಚಾನಲ್‌ ನಲ್ಲಿ ಶವವನ್ನು ಹಾಕಿದ್ದಾಗಿ ಆರೋಪಿಗಳು ಹೇಳಿದ್ದಾರೆ.

ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿತರ ಬಂಧನದ ಕಾರ್ಯಾಚರಣೆಗೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಪ್ರಶಂಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next