Advertisement

ವಲಸೆ ಕಾರ್ಮಿಕರ ಸ್ಥಿತಿ-ಸೌಲಭ್ಯ ಪರಿಶೀಲನೆ

11:59 AM Apr 13, 2020 | Naveen |

ದಾವಣಗೆರೆ: ಕರೊನಾ ವೈರಸ್‌ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಹಾಗೂ ಕೇಂದ್ರ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯಂತೆ ಹಿರಿಯ ಸಿವಿಲ್‌ ನ್ಯಾಯಾಧೀಶ ಪ್ರಭು ಎನ್‌. ಬಡಿಗೇರ್‌ ಶನಿವಾರ ನಗರದಲ್ಲಿನ ವಲಸೆ ಕೂಲಿ ಕಾರ್ಮಿಕರ ಸ್ಥಿತಿಗತಿ ಅವಲೋಕಿಸಿದರು.

Advertisement

ಪಾಲಿಕೆಯ 381 ಪೌರಕಾರ್ಮಿಕರಿಗಾಗಿ ದೊಡ್ಡ ಬೂದಿಹಾಳ್‌ನಲ್ಲಿ ನಿರ್ಮಿಸುತ್ತಿರುವ ಗೃಹಭಾಗ್ಯ ವಸತಿ ಸಮುಚ್ಚಯದ ಕಟ್ಟಡ ಕಾಮಗಾರಿಯಲ್ಲಿ 42 ಮಂದಿ ಕಾರ್ಮಿಕರು ತೊಡಗಿದ್ದಾರೆ. ಈ ಪೈಕಿ ಮಧ್ಯಪ್ರದೇಶದ 27, ತಮಿಳುನಾಡಿನ ಒಬ್ಬರು ಹಾಗೂ ಕರ್ನಾಟಕದ ವಿಜಯಪುರ, ರಾಯಚೂರು, ಉಡುಪಿ ಜಿಲ್ಲೆಗಳ 14 ಕಾರ್ಮಿಕರಿದ್ದಾರೆ. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ನ್ಯಾಯಾಧೀಶ ಪ್ರಭು ಎನ್‌. ಬಡಿಗೇರ್‌, ಪಾಲಿಕೆ ವತಿಯಿಂದ ಮಾಸ್ಕ್, ಕೈಗವಸು, ಕುಡಿವ ನೀರು, ಶೌಚಗೃಹ ವ್ಯವಸ್ಥೆ ಮಾಡಿದ್ದಾರೆಯೇ ಎಂಬುದಾಗಿ ಪ್ರಶ್ನಿಸಿ, ಎಲ್ಲರೂ ತಪ್ಪದೇ ಮಾಸ್ಕ್ ಧರಿಸಬೇಕೆಂದರು.

ಕೆಲವರು ಮಾಸ್ಕ್ ಬದಲಿ ಕರವಸ್ತ್ರ ಧರಿಸಿದ್ದವರು ಮಾಸ್ಕ್ ತೊಳೆಯಲು ಹಾಕಿದ್ದೇವೆ ಎಂದು ತಿಳಿಸಿದರು. ಗುತ್ತಿಗೆದಾರರೇ ಈ ಕಾರ್ಮಿಕರಿಗೆ ಊಟ ಕಲ್ಪಿಸುತ್ತಿದ್ದಾರೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ನ್ಯಾಯಾಧೀಶರ ಗಮನಕ್ಕೆ ತಂದರು. ಸ್ಮಾರ್ಟ್‌ಸಿಟಿ ಯೋಜನೆಯಡಿ ಚರಂಡಿ ಕಾಮಗಾರಿಯನ್ನು ತೆಲಂಗಾಣದ 15 ಹಾಗೂ ಕರ್ನಾಟಕದ 8 ಮಂದಿ ನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇವರೆಲ್ಲರೂ ರಾಜೀವ್‌ಗಾಂಧಿ ಬಡಾವಣೆಯ ಪಾರ್ಕ್‌ ಜಾಗದಲ್ಲಿ ತಂಗಿದ್ದಾರೆ. ಅಲ್ಲಿಯೂ ಭೇಟಿಯಿತ್ತ ನ್ಯಾಯಾಧೀಶರು ಸ್ಮಾರ್ಟ್ ಸಿಟಿ ಎಂಡಿ ಭೇಟಿ ನೀಡಿದ್ದಾರೆಯೆ? ನಿಮಗೆ ಊಟ, ನೀರಿನ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದರು.

ಜಿಲ್ಲಾಡಳಿತದಿಂದ ಈ ಭಾಗಕ್ಕೆ ಎರಡು ಬಾರಿ ಆಹಾರಧಾನ್ಯ ನೀಡಲಾಗಿದೆ. ಪಾಲಿಕೆಯಿಂದ ಐದು ದಿನಗಳ ಕಾಲ ಹಾಲು ವಿತರಿಸಿದ್ದೇವೆ. ವಿದ್ಯುತ್‌ ಸರಬರಾಜು ವ್ಯವಸ್ಥೆ ಸರಿಪಡಿಸಲಾಗುವುದು ಎಂದು ಆಯುಕ್ತರು ಇದೇ ಸಂದರ್ಭದಲ್ಲಿ ತಿಳಿಸಿದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸದಿದ್ದರೂ ಕೂಲಿ ನಿಲ್ಲಿಸದಿರುವಂತೆ ಸೂಚನೆ ಇದೆ. ಅದರಂತೆ ಸಂಬಳ ನಿಲ್ಲಿಸಬೇಡಿ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಅವರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next