Advertisement

ಏ.1 ಜ್ಞಾನದಿನವಾಗಿ ಸರ್ಕಾರ ಆಚರಿಸಲಿ

07:56 AM Jan 26, 2019 | |

ದಾವಣಗೆರೆ: ತುಮಕೂರಿನ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮದಿನವಾದ ಏ.1ನೇ ತಾರೀಕನ್ನು ಜ್ಞಾನ ದಿನವಾಗಿ ಸರ್ಕಾರ ಆಚರಿಸಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಆಗ್ರಹಿಸಿದರು.

Advertisement

ನಗರದ ಕಾಯಿಪೇಟೆಯ ಬಸವೇಶ್ವರ ಪುತ್ಥಳಿ ಮುಂಭಾಗದಲ್ಲಿ ಶುಕ್ರವಾರ ಸ್ವಾಗತ್‌ ಯುವಕರ ಸಂಘದಿಂದ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಹಮ್ಮಿಕೊಂಡಿದ್ದ ನುಡಿನಮನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ದೇಶದಲ್ಲೆಡೆ ಏ.1 ನ್ನು ಮೂರ್ಖರ ದಿನವೆಂದು ಆಚರಿಸಲಾಗುತ್ತಿದೆ. ಆದರೆ, ಆ ದಿನವನ್ನು ಜ್ಞಾನದ ದಿನವಾಗಿ ಆಚರಿಸುವ ಮೂಲಕ ಸಿದ್ಧಗಂಗಾ ಶ್ರೀಗಳಿಗೆ ಗೌರವ ಸಲ್ಲಿಸಬೇಕು ಎಂದರು.

ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಆಗ್ರಹ ಎಲ್ಲೆಡೆ ಕೇಳಿಬರುತ್ತಿದೆ. ಆದರೆ, ಶ್ರೀಗಳು ಎಂದೂ ಪ್ರಶಸ್ತಿ ಬಯಸಿದವರಲ್ಲ. ಅವರಿಗೆ ಭಾರತರತ್ನ ನೀಡಬೇಕು ಎಂಬುದು ಕೇವಲ ಒಬ್ಬರ ಮಾತಲ್ಲ. ಕೋಟ್ಯಾಂತರ ಭಕ್ತರ ಆಗ್ರಹವಾಗಿದೆ. ಈ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳಿದರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡಬೇಕೆಂಬುದು ಅಸಂಖ್ಯಾತ ಭಕ್ತರ ಆಗ್ರಹವಾಗಿದೆ. ಅನ್ನ, ಅಕ್ಷರ, ಆಶ್ರಯದಂತಹ ತ್ರಿವಿಧ ದಾಸೋಹಗಳಿಂದ ಶ್ರೀಗಳಿಂದು ಕೋಟ್ಯಾಂತರ ಜನರ ಮನಸ್ಸಿನಲ್ಲಿ ದೊಡ್ಡರತ್ನವಾಗಿ ಮನೆ ಮಾಡಿದ್ದಾರೆ. ಹುಟ್ಟಿದ ಬಳಿಕ ಒಳ್ಳೆಯ ಕಾರ್ಯಗಳ ಮೂಲಕ ಹೇಗೆ ಜನರು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸನ್ಮಾರ್ಗದ ದಾರಿ ತೋರಿಸಿರುವ ದಿವ್ಯಜ್ಯೋತಿಯಾಗಿದ್ದಾರೆ ಎಂದರು.

Advertisement

ಚಿತ್ರದುರ್ಗದ ಮುರುಘಾಮಠದ ಮೇಲೆ ಸಿದ್ಧಗಂಗಾ ಶ್ರೀಗಳು ಅಪಾರ ಭಕ್ತಿಶ್ರದ್ಧೆಯನ್ನು ಹೊಂದಿದ್ದರು. ಮೊಟ್ಟಮೊದಲ ಬಾರಿಗೆ ಜಯದೇವ ಶ್ರೀಗಳು ಪ್ರಾರಂಭಿಸಿದ ಉಚಿತ ಪ್ರಸಾದ ನಿಲಯದ ಪರಿಕಲ್ಪನೆಯನ್ನು ತಮ್ಮ ಮಠದ ಮೂಲಕವೂ ಹೆಚ್ಚು ಕಾರ್ಯರೂಪಕ್ಕೆ ತಂದರು ಎಂದು ಸ್ಮರಿಸಿಕೊಂಡರು.

ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಸಿದ್ಧಗಂಗಾ ಶಾಲೆ ಮುಖ್ಯೋಪಾಧ್ಯಾಯಿನಿ ಜಸ್ಟಿನ್‌ ಡಿಸೋಜಾ, ಪತ್ರಕರ್ತ ವೀರಪ್ಪ ಎಂ. ಬಾವಿ,ಹದಡಿ ನಟರಾಜ್‌, ಶಂಕರ್‌, ಶಾಂತಕುಮಾರ್‌ ಸೋಗಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next