ದಾವಣಗೆರೆ: ಬಾಯಿಚಟಕ್ಕೆ ಟೀಕೆ ಮಾಡುತ್ತಿರುವ ಮೂರ್ನಾಲ್ಕು ಜನರಿಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ, ಹಕ್ಕು ಇಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೋ ಒಬ್ಬಿಬ್ಬರು ಬಾಯಿಚಟಕ್ಕೆ ಮಾತನಾಡಿದ ಮಾತ್ರಕ್ಕೆ ಏನೂ ಮಾಡಲಿಕ್ಕೆ ಆಗುವುದಿಲ್ಲ. ವಿಜಯೇಂದ್ರ ಅಧ್ಯಕ್ಷ ಆಗಿರುವ ತನಕ ಪ್ರಚಾರಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಹೋಗದಿದ್ದರೆ ಬೇಡ. ಹೋಗದಿದ್ದರೆ ಏನಾಗುತ್ತದೆ ಎಂದು ಪ್ರಶ್ನಿಸಿದರು.
ವಿಜಯೇಂದ್ರ ಅವರನ್ನು ರಾಷ್ಟ್ರೀಯ ಮುಖಂಡರು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಆದರೂ, ಅವರ ವಿರುದ್ಧ ಹಾದಿಯಲ್ಲಿ ಮಾತನಾಡುವಂತಹವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲ. ನಿಷ್ಠಾವಂತ ಕಾರ್ಯಕರ್ತರಾಗಿದ್ದರೆ ಹಾದಿಯಲ್ಲಿ ಮಾತನಾಡುತ್ತಿರಲಿಲ್ಲ. 2019 ರಲ್ಲಿ ಯಾರೋ ಒಬ್ಬರಿಂದಲೇ ಬಿಜೆಪಿ ಸರ್ಕಾರ ಬಂದಿದ್ದಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೆಸರು ಪ್ರಸ್ತಾಪಿಸಿದೆ ಟಾಂಗ್ ನೀಡಿದರು.
ವಿಜಯಪುರದಲ್ಲಿ ಅಡ್ಜೆಸ್ಟ್ ಮೆಂಟ್ ರಾಜಕೀಯ ಮಾಡುತ್ತಿರುವವರು ಯಾರು ಎಂಬುದು ಗೊತ್ತಿದೆ. ಬಿಜೆಪಿ ಬಿಟ್ಟು ಜೆಡಿಎಸ್ ಗೆ ಹೋಗಿ ಯಡಿಯೂರಪ್ಪ ಅವರ ಕೈ ಕಾಲು ಹಿಡಿದುಕೊಂಡು ಮತ್ತೆ ಬಿಜೆಪಿಗೆ ಬಂದಂತಹವರಿಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮಾತನಾಡುವ ಯಾವ ನೈತಿಕತೆ ಇಲ್ಲ. ಯಾರು ಏನೇ ಮಾಡಿದರೂ ಮೂರು ಉಪ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜನಸಂಘ ಕಾಲದಿಂದಲೂ ಲಕ್ಷಾಂತರ ಕಾರ್ಯಕರ್ತರು, ಮುಖಂಡರ ಪರಿಶ್ರಮದಿಂದ ಬೆಳೆದಿರುವ ಪಕ್ಷ. ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಮಜಬೂತಾಗಿ ನಡೆದಿದೆ. ರಾಜ್ಯ ಮಟ್ಟದಲ್ಲಿ 65 ಲಕ್ಷ, ಜಿಲ್ಲಾ ಮಟ್ಟದಲ್ಲಿ 2 ಲಕ್ಷದಷ್ಟು ಸದಸ್ಯತ್ವ ನೋಂದಣಿ ಆಗಿದೆ. ಜಿಲ್ಲೆಯಲ್ಲಿ ಯಾವುದೇ ಬಣಗಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.