ಹೊನ್ನಾಳಿ: ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 585 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅವಳಿ ತಾಲೂಕಿನ 94 ಕರೆಗಳನ್ನು ತುಂಬಿಸಲು 460 ಕೋಟಿ ರೂ. ಹಾಗೂ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಹೆಚ್ಚುವರಿಯಾಗಿ 161 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದರು.
ಬೆನಕನಹಳ್ಳಿ ಏತ ನೀರಾವರಿ ಯೋಜನೆ ಮೂಲಕ 24 ಕರೆಗಳನ್ನು ತುಂಬಿಸುವ ಯೋಜನೆಗೆ 51 ಕೋಟಿ ರೂ., ಫಲವನಹಳ್ಳಿ, ಹೊಸಕೊಪ್ಪ ಸೇರಿದಂತೆ 61 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು 68 ಕೋಟಿ ರೂ., ಹೊಸಹಳ್ಳಿ ಸೇರಿದಂತೆ 21 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ನೀಡುವ ದೃಷ್ಟಿಯಿಂದ 34.9 ಕೋಟಿ ರೂ. ಹಾಗೂ ಹೊಸದೇವರಹೊನ್ನಾಳಿ ಸೇರಿದಂತೆ 16 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು 17.6 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಹೇಳಿದರು.
ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿನ ಸೋಂಕಿತರಿಗೆ ಸೋಗಿಲು ಗ್ರಾಮಸ್ಥರು ರೊಟ್ಟಿ, ಗೋಧಿ ಪಾಯಸ ಊಟದ ವ್ಯವಸ್ಥೆ ಮಾಡಿದ್ದರು. ನಂತರ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಕೋವಿಡ್ ವಾರ್ಡಿಗೆ ರೇಣುಕಾಚಾರ್ಯ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧರೊಬ್ಬರು ನಿಮ್ಮಿಂದ ನಾವು ಬದುಕಿದ್ದೇವೆ, ನೀವಿಲ್ಲದ್ದರೆ ಸತ್ತೇ ಹೋಗುತ್ತಿದ್ವಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ತಾಲೂಕಿನ ಜನರ ಹಿತರಕ್ಷಣೆ ನನ್ನ ಕರ್ತವ್ಯ ಎಂದರು ಜಿಪಂ ಸದಸ್ಯ ಸುರೇಂದ್ರ ನಾಯ್ಕ, ನ್ಯಾಮತಿ ತಾಪಂ ಮಾಜಿ ಅಧ್ಯಕ್ಷ ಎಸ್.ಪಿ. ರವಿಕುಮಾರ್, ತಾಪಂ ಸದಸ್ಯ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.