Advertisement

4 ದಿನಗಳಲ್ಲಿ ಲೋಕಾಯುಕ್ತಕ್ಕೆ ದೂರು: ಬಸವರಾಜ್‌ ಬೆಳ್ಳೊಡಿ

08:46 PM Jun 21, 2021 | Team Udayavani |

ದಾವಣಗೆರೆ: ಐತಿಹಾಸಿಕ ಪ್ರಸಿದ್ಧ, ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಖ್ಯಾತಿಯ ಚನ್ನಗಿರಿ ತಾಲೂಕಿನ ಸೂಳೆಕೆರೆ (ಶಾಂತಿಸಾಗರ) ಬಳಿ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಕಾನೂನು ಬಾಹಿರ, ಅಕ್ರಮವಾಗಿ ಸ್ಫೋಟಕ ಬಳಕೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಇನ್ನು ನಾಲ್ಕು ದಿನಗಳಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಖಡ್ಗ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಬಸವರಾಜ್‌ ಬೆಳ್ಳೊಡಿ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಅಗಲೀಕರಣ ಕಾಮಗಾರಿಗಾಗಿ ಸ್ಫೋಟಕ ಬಳಸಿರುವುದರಿಂದ ಕೆರೆ ಮತ್ತ ನಾಲೆಗಳಿಗೆ ಸಾಕಷ್ಟು ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಪಾಯ ಉಂಟಾಗುವ ಆತಂಕ ಕಾಡುತ್ತಿದೆ. ತಪ್ಪು ಮಾಡಿರುವಂತಹವರು ಕಾಂಕ್ರೀಟ್‌ ತಡೆಗೋಡೆ ಒಳಗೊಂಡಂತೆ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಬೇಕು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಸ್ತೆ ಅಗಲೀಕರಣ ಕಾಮಗಾರಿಗಾಗಿ ಸಾಮಾನ್ಯ ಸ್ಫೋಟಕ ಬಳಕೆಗೆ ಜಿಲ್ಲಾಡಳಿತದಿಂದ ಅನುಮತಿ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಕೆರೆಗೆ 20-25 ಅಡಿ ದೂರದಲ್ಲಿರುವ ಗುಡ್ಡವನ್ನು ಸ್ಫೋಟಿಸಿದಾಗ ಕಲ್ಲು ಮತ್ತು ಮಣ್ಣು 150 ಅಡಿಗೂ ಹೆಚ್ಚು ಎತ್ತರಕ್ಕೆ ಚಿಮ್ಮಿರುವುದನ್ನ ಗಮನಿಸಿದರೆ ಭಾರೀ ಸ್ಫೋಟಕ ಬಳಸಲಾಗಿದೆ ಎಂಬುದು ಗೊತ್ತಾಗುತ್ತದೆ. ಈಗ ಸ್ಫೋಟಕ ಬಳಕೆ ನಿಲ್ಲಿಸಲಾಗಿದೆ ಎಂದು ತಿಳಿಸಿದರು.

ಸ್ಫೋಟಕ ಬಳಸಿರುವುದರಿಂದ ಸಿದ್ಧನ ನಾಲೆಯಲ್ಲಿ ಅಲ್ಲಲ್ಲಿ ಬಿರುಕು ಕಂಡು ಬಂದಿದೆ. ಬಿರುಕುಗಳ ಕಾರಣದಿಂದ ನಾಲೆ ಒಡೆದು ಹೋದರೆ 50 ರಿಂದ 60 ಹಳ್ಳಿಗಳು ಮುಳುಗಡೆ ಆಗಲಿವೆ. ದಾವಣಗೆರೆ, ಚಿತ್ರದುರ್ಗ ಮುಂತಾದ ಭಾಗಗಳಿಗೆ ಕುಡಿಯುವ ನೀರು ಒದಗಿಸುವುದಕ್ಕೆ ಧಕ್ಕೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿದ್ದನ ನಾಲೆ ಬಳಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಸ್ಫೋಟಕಗಳ ಬಳಕೆ ಮಾಡಿರುವ ಬಗ್ಗೆ ಪ್ರಶ್ನಿಸಿದರೆ ನೀರಾವರಿ, ಕಂದಾಯ, ಲೋಕೋಪಯೋಗಿ, ಅರಣ್ಯ ಇಲಾಖೆಯವರು ನಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ.

Advertisement

ದಾಖಲೆಗಳ ಪ್ರಕಾರ ಸರ್ವೇ ನಂಬರ್‌ 1ರಲ್ಲಿ ಇರುವ ಸಿದ್ಧನ ನಾಲೆ ಅರಣ್ಯ ಇಲಾಖೆಗೆ ಸೇರಿದೆ. ಆದರೆ ಅರಣ್ಯ ಇಲಾಖೆಯವರು ಸರ್ವೇ ನಂ. 36 ರಿಂದ ನಮ್ಮ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಹೇಳುತ್ತಾರೆ. ಲೋಕೋಪಯೋಗಿ ಇಲಾಖೆಯವರು ಕಾಮಗಾರಿ ಗುತ್ತಿಗೆ ನೀಡಲಾಗಿದೆ.

ಆದರೆ, ಅದು ಇಲಾಖೆಗೆ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಐತಿಹಾಸಿಕ ಪ್ರಸಿದ್ಧ ಕೆರೆ ಯಾವ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂಬುದೇ ಗೊತ್ತಿಲ್ಲದಂತಾಗಿದೆ ಎಂದರು. ಸಿದ್ದನ ನಾಲೆಯಿಂದ ಅರ್ಧ ಕಿಲೋ ಮೀಟರ್‌ವರೆಗೆ ಸ್ಫೋಟಕ ಬಳಕೆಯಿಂದ ಗುಡ್ಡದ ಮಣ್ಣು ಕುಸಿದು ಕೆರೆಗೆ ಸೇರುತ್ತಿದೆ. ಕೆರೆಯಲ್ಲಿ ಇನ್ನಷ್ಟು ಹೂಳು ತುಂಬುವುದರಿಂದ ಕೆರೆಯ ಸಂಗ್ರಹಣಾ ಸಾಮರ್ಥ್ಯ ಕಡಿಮೆ ಆಗಲಿದೆ. ಗುಡ್ಡದ ಮಣ್ಣು ಕೆರೆಯ ಪಾಲಾಗುವುದನ್ನು ತಪ್ಪಿಸಲು ಕಾಂಕ್ರೀಟ್‌ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಸಂಸ್ಥೆ ನಿರ್ದೇಶಕ ಬಿ. ಚಂದ್ರಹಾಸ ಲಿಂಗದಹಳ್ಳಿ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಸ್ಫೋಟಕ ಬಳಕೆ ಮಾಡಿ ಗುಡ್ಡ ಒಡೆಯುವುದಕ್ಕೆ ವಿರೋಧ ಇದೆ ಎಂದರು. ಸೈಯದ್‌ ನಯಾಜ್‌ ನಲ್ಲೂರು, ನಿರ್ದೇಶಕ ನಾಗರಾಜ್‌ ಬೆಳ್ಳೊಡಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next