Advertisement

ಬಿಜೆಪಿಯಿಂದ ಹಿಂದುಳಿದ ವರ್ಗದ ಕಡೆಗಣನೆ

06:25 PM Aug 03, 2021 | Team Udayavani |

ದಾವಣಗೆರೆ: ರಾಜ್ಯ ಬಿಜೆಪಿ ಸರ್ಕಾರ ಹಿಂದುಳಿದ ವರ್ಗದವರನ್ನು ಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ನ ಇತರೆ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

Advertisement

ರಾಜ್ಯ ಸರ್ಕಾರ ಹಿಂದುಳಿದ ವರ್ಗದವರ ಅಭಿವೃದ್ಧಿಯನ್ನು ಕಡೆಗಣಿಸುತ್ತಿದೆ. ಅಗತ್ಯವಾಗಿರುವ ಅನುದಾನವನ್ನು ಕಡಿತ ಮಾಡಿದೆ ಎಂದು ಆಕ್ಷೇಪಿಸಿದರು. ರಾಜ್ಯದಲ್ಲಿ ಶೇ. 52 ರಷ್ಟು ಹಿಂದುಳಿದ ವರ್ಗದವರಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ 6 ಸಾವಿರ ಕೋಟಿ ರೂ. ಅನುದಾನ ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಅದನ್ನು 400 ಕೋಟಿ ರೂ.ಗೆ ಇಳಿಸಿದೆ ಎಂದು ದೂರಿದರು.

ರಾಜ್ಯದಲ್ಲಿನ ಹಿಂದುಳಿದ ವರ್ಗದ ಒಂದು ಸಾವಿರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ 3 ಲಕ್ಷ, ವಿದೇಶಗಳಲ್ಲಿ ವ್ಯಾಸಂಗಕ್ಕೆ 10 ಲಕ್ಷ ರೂ. ಸೌಲಭ್ಯ ನೀಡಲಾಗುತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅನುದಾನ ಕಡಿತಗೊಳಿಸಿದೆ. ಹಿಂದುಳಿದ ವರ್ಗದವರಿಗೆ ಒದಗಿಸಲಾಗುತ್ತಿದ್ದ ಅನೇಕ ಮೂಲ ಸೌಲಭ್ಯಗಳನ್ನೂ ನೀಡಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಹಿಂದುಳಿದ ವರ್ಗಗಳ ವಿಭಾಗದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಬೂತ್‌ ಮಟ್ಟದಲ್ಲಿ ಪಕ್ಷವನ್ನ ಸಂಘಟಿಸಬೇಕು. ಪ್ರತಿಯೊಬ್ಬರೂ ತಾವೇ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಎಂದು ಪಕ್ಷದ ಕೆಲಸ ಮಾಡುವ ಮೂಲಕ ಮುಂದಿನ ಚುನಾವಣೆಗಳಲ್ಲಿ ಗೆಲುವಿಗೆ ಶ್ರಮಿಸಬೇಕು. ಎಂತದ್ದೇ ಸಮಸ್ಯೆ ಗಳು ಎದುರಾದಲ್ಲಿ ತಮ್ಮನ್ನು ನೇರವಾಗಿ ಸಂಪರ್ಕಿಸಬೇಕು ಎಂದು ತಿಳಿಸಿದರು. ಹರಿಹರ ಶಾಸಕ ಎಸ್‌. ರಾಮಪ್ಪ ಮಾತನಾಡಿ, ಬಿಜೆಪಿ ಸದಾ ಜಾತಿ ರಾಜಕಾರಣ, ಕೋಮುವಾದ ಮಾಡುತ್ತಿದೆ.

ಯುವ ಸಮೂಹದಲ್ಲಿ ಕೋಮು ದ್ವೇಷ ಬಿತ್ತುತ್ತಿದೆ. ಧರ್ಮ, ಜಾತಿ, ಕೋಮು ಭೇದ ಭಾವ ಮನೋಭಾವನೆ ಮೂಡಿಸುವ ಮೂಲಕ ಯುವ ಸಮೂಹವನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿರುವುದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ ಅನುದಾನ ಬಿಡುಗಡೆಗಾಗಿ ಇಂತಿಷ್ಟು ನೀಡಲೇಬೇಕು ಎಂದು ಸ್ವಪಕ್ಷದವರೇ ಆರೋಪ ಮಾಡುತ್ತಿದ್ದರು. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ವರ ಅಭಿವೃದ್ಧಿಗೆ ನೀಡಲಾಗುತ್ತಿದ್ದ ಅನುದಾನವನ್ನೂ ಕಡಿತ ಮಾಡಲಾಗಿತ್ತು ಎಂದು ದೂರಿದರು. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ವರ್ಷಕ್ಕೆ 2 ಕೋಟಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು.

Advertisement

ಆದರೆ ಯಾರಿಗೂ ಉದ್ಯೋಗ ನೀಡಲಿಲ್ಲ. ಕಂಪನಿಗಳನ್ನೇ ಮುಚ್ಚಿಸಿದರು. ಇದರಿಂದ ಕಾರ್ಮಿಕರು ಬೀದಿಪಾಲಾಗುವಂತಾಯಿತು ಎಂದರು. ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರು ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಪ್ರಜಾತಾಂತ್ರಿಕ ವ್ಯವಸ್ಥೆಯಂತೆ ತೆಗೆಯದೆ ಯಡಿಯೂರಪ್ಪ ಬೆನ್ನಿಗೆ ಚೂರಿ ಹಾಕಿದರು. ನಂತರ ಟ್ವಿಟರ್‌ ಮೂಲಕ ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

12ನೇ ಶತಮಾನದಲ್ಲಿ ಮನುವಾದಿಗಳು ಬಸವಣ್ಣನವರ ಸರ್ಕಾರ ಕೆಡವಿದ್ದನ್ನು ಕೇಳಿದ್ದೆವು. ಈಗ 21ನೇ ಶತಮಾನದಲ್ಲಿ ಕಣ್ಣಾರೆ ಕಂಡಿದ್ದೇವೆ ಎಂದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ಸೇವೆಗೆ ಅಧಿಕಾರಕ್ಕೆ ಬಂದಿಲ್ಲ. ಅಂಬಾನಿ, ಅದಾನಿ ಅವರಂತಹ ಬಂಡವಾಳಶಾಹಿಗಳ ಸೇವೆ ಮಾಡಲು ಬಂದಿದೆ. ಮೋದಿ ನೇತೃತ್ವದ ಸರ್ಕಾರ ದೇಶ ಕಂಡಂತಹ ಅತ್ಯಂತ ಕೆಟ್ಟ ಮತ್ತು ವಿಫಲ ಸರ್ಕಾರ. ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮನೆ ಮನೆಗೆ ತೆರಳಿ ತಿಳಿಸಬೇಕು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್‌ ಒಬಿಸಿ ವಿಭಾಗದ ಅಧ್ಯಕ್ಷ ನಲ್ಕುಂದ ಹಾಲೇಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ಉಮಾಪತಿ, ಅನಿತಾಬಾಯಿ ಮಾಲತೇಶ್‌, ಎಂ. ನಾಗೇಂದ್ರಪ್ಪ ಇತರರು ಇದ್ದರು.

ರಾಜ್ಯ ಒಬಿಸಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜಮ್ನಳ್ಳಿ ನಾಗರಾಜ್‌ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ವಿರೋಧಿಸಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪಕ್ಷದ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next