ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆಯ 2020-21ನೇ ಸಾಲಿನಲ್ಲಿ ಒಟ್ಟು 284.89 ಲಕ್ಷ ರೂ. ಗಳ ಉಳಿತಾಯ ಆಯ-ವ್ಯಯ ಮಂಡಿಸಲಾಗಿದೆ.
ಶನಿವಾರ, ಪಾಲಿಕೆ ಸಭಾಂಗಣದಲ್ಲಿ ಮೇಯರ್ ಬಿ.ಜಿ.ಅಜಯಕುಮಾರ್ ಮಂಡಿಸಿದ ನೂತನ ಸಾಲಿನ ಆಯ-ವ್ಯಯದ ಅಂದಾಜು ಪಟ್ಟಿಯಲ್ಲಿ 40,191.13 ಲಕ್ಷ ರೂ. ಸ್ವೀಕೃತಿ ನಿರೀಕ್ಷಿಸಲಾಗಿದ್ದು, ಒಟ್ಟು 39,906.23 ಲಕ್ಷ ರೂ. ಒಟ್ಟು ಪಾವತಿಗಳಿದ್ದು. 284.89 ಲಕ್ಷ ರೂ. ಉಳಿತಾಯ ಅಂದಾಜಿಸಲಾಗಿದೆ. ಹೊಸ ಆರ್ಥಿಕ ಸಾಲಿನಲ್ಲಿ ಪ್ರಾರಂಭಿಕ ಶಿಲ್ಕು 3030.47 ಲಕ್ಷ ರೂ. ಸೇರಿ ರಾಜಸ್ವ ಸ್ವೀಕೃತಿಗಳು 11140.15, ಬಂಡವಾಳ ಸ್ವೀಕೃತಿಗಳು 11140.00 ಹಾಗೂ ಅಸಾಮಾನ್ಯ ಸ್ವೀಕೃತಿಗಳು 14880.50 ರೂ. ಒಳಗೊಂಡಂತೆ 40,191.13 ಜಮೆ ಅಂದಾಜಿಸಲಾಗಿದೆ.
ಹಾಗೆಯೇ ಈ ಸಾಲಿನಲ್ಲಿ ರಾಜಸ್ವ ಪಾವತಿ 11005.23, ಬಂಡವಾಳ ಪಾವತಿ 13,890.00 ಹಾಗೂ ಅಸಾಮಾನ್ಯ ಪಾವತಿಗಳು 5011.00 ಲಕ್ಷ ರೂ. ಸೇರಿದಂತೆ ಒಟ್ಟು 39906.23 ಲಕ್ಷ ರೂ. ವೆಚ್ಚ ಅಂದಾಜಿಸಿ, ಒಟ್ಟು 284.89 ಲಕ್ಷ ರೂ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಅವರು ಹೊಸ ಸಾಲಿನ ಲೆಕ್ಕಾಚಾರ ಮಂಡಿಸಿದರು.
ನಗರದ ಸರ್ವಾಂಗೀಣ ಅಭಿವೃದ್ಧಿ ಮಾತ್ರವೇ ಮಾನದಂಡವಾಗಿಸಿಕೊಂಡು ಈ ಸಾಲಿನ ಆಯ-ವ್ಯಯ ಸಿದ್ಧಪಡಿಸಲಾಗಿದೆ. ಪಕ್ಷಾತೀತವಾಗಿ ಎಲ್ಲಾ ಸದಸ್ಯರ ಸಲಹೆ, ಆಶೋತ್ತರ, ನಗರದ ನಾಗರಿಕರು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ನಡೆಸಿದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾದ ಸಲಹೆ-ಸೂಚನೆ ಜತೆಗೆ, ನಗರದಅಭಿವೃದ್ಧಿಗೆ ಹೊಂದಿರುವ ನನ್ನದೇ ಆದ ಕೆಲವು ಕನಸು ನನಸು ಮಾಡುವ ನಿಟ್ಟಿನಲ್ಲಿ ಸೀಮಿತ ಸಂಪನ್ಮೂಲಗಳಲ್ಲೇ ಸಾಧ್ಯವಾದಷ್ಟು ಉತ್ತಮ ಆಯ-ವ್ಯಯ ಸಿದ್ಧಪಡಿಸಲು ಪ್ರಯತ್ನಿಸಿದ್ದೇನೆ ಎಂದು ಮೇಯರ್ ಬಜೆಟ್ ಮಂಡಿಸುವ ವೇಳೆ ಪ್ರಸ್ತಾಪಿಸಿದರು.
ಕಳೆದ ನವೆಂಬರ್‌ನಲ್ಲಿ ಪಾಲಿಕೆಗೆ ಚುನಾವಣೆ ನಡೆದು, ಹೊಸದಾಗಿ ರಚನೆಗೊಂಡ ಕೌನ್ಸಿಲ್ ಬಗ್ಗೆ ನಗರದ ಜನತೆಗೆ ಹಲವು ನಿರೀಕ್ಷೆಗಳಿರುವುದು ಸಹಜ. ಆ ನಿರೀಕ್ಷೆ ನೆರವೇರಿಸುವ ನಿಟ್ಟಿನಲ್ಲಿ ತಮ್ಮ ನೇತೃತ್ವದ ಆಡಳಿತ ಕಟಿಬದ್ಧವಾಗಿದೆ. ಸರ್ಕಾರದ ಹಳೇ ಯೋಜನೆಗಳು ಮುಂದುವರಿಯಲಿದ್ದು, ನಗರಗಳ ಮೂಲ ಸೌಕರ್ಯ ಅಭಿವೃದ್ಧಿ ಗುರಿ ಹೊಂದಿದ ರಾಜ್ಯ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ವಿವಿಧ ಕಾಮಗಾರಿಗಳು ಈ ಸಾಲಿನಲ್ಲಿ ಅನುಷ್ಟಾನಗೊಳ್ಳಲಿವೆ. ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಅವರ ವಿಶೇಷ ಆಸಕ್ತಿಯಿಂದ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಯಾಗಲಿದ್ದು, ಹಲವಾರು ಕಾಮಗಾರಿಗಳು ಅನುಷ್ಟಾನಗೊಳ್ಳಲಿವೆ ಎಂದು ಅವರು ಹೇಳಿದರು.
ಪಾಲಿಕೆಗೆ ಸ್ವಂತ ಆದಾಯ ಸಂಪನ್ಮೂಲಗಳು ಸೀಮಿತವಾಗಿದ್ದು, ಇರುವ ಮೂಲಗಳನ್ನೇ ಬಲಪಡಿಸಿ, ಆದಾಯ ವೃದ್ಧಿಗೆ ಶ್ರಮಿಸಲಾಗುವುದು. ಈಗಾಗಲೇ ಜಾರಿಯಲ್ಲಿರುವ ಆಸ್ತಿ, ನೀರಿನ ಸಂಪರ್ಕಗಳ ದಾಖಲೆ ಗಣಕೀಕರಣ ಕಾರ್ಯ ಮುಂದಿನ ಸಾಲಿನಲ್ಲಿ ಪೂರ್ಣಗೊಳ್ಳಲಿದ್ದು, ಆಸ್ತಿ ಹಾಗೂ ನೀರಿನ ತೆರಿಗೆ ಸಂಗ್ರಹದಲ್ಲಿ ಗಣನೀಯ ಪ್ರಗತಿ ಸಾಧಿಸಲಾಗುವುದು ಎಂದರು.