Advertisement

ಸೀಲ್‌ಡೌನ್‌ ಪ್ರದೇಶದಲ್ಲಿ ಡ್ರೋನ್‌ ಸೀನ್‌

11:53 AM May 07, 2020 | Naveen |

ದಾವಣಗೆರೆ: ಕೋವಿಡ್ ವೈರಸ್‌ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ 5 ಕಂಟೇನ್ಮೆಂಟ್‌ ಝೋನ್‌ಗಳನ್ನು ಈಗಾಗಲೇ ಸೀಲ್‌ ಡೌನ್‌ ಮಾಡಲಾಗಿದ್ದು, ಅಲ್ಲಿನ ಜನರ ಸ್ಥಿತಿಗತಿ ಪರಿಶೀಲಿಸಲು ಡ್ರೋನ್‌ ಬಳಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Advertisement

ಬುಧವಾರ ಅಧಿಕಾರಿಗಳ ತಂಡದೊಂದಿಗೆ ಸೀಲ್‌ಡೌನ್‌ ಪ್ರದೇಶ ಜಾಲಿನಗರದಲ್ಲಿ ಡ್ರೋನ್‌ ಪರಿವೀಕ್ಷಣೆ ಮತ್ತು ಸರ್ವೇಕ್ಷಣಾ ತಂಡದ ತಪಾಸಣೆ ಕಾರ್ಯ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ಹಾಗೂ ಅವರಿಗೆ ಎಚ್ಚರಿಸಲು ಡ್ರೋನ್‌ ಬಳಸಲಾಗಿದೆ. ಜನರು ತಮ್ಮ ಮನೆಗಳಲ್ಲಿ ಇದ್ದಾರಾ? ಅಥವಾ ರಸ್ತೆಯಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದಾರಾ?, ಸಾಮಾಜಿಕ ಅಂತರ ಕಾಯ್ದುಕೊಂಡಿರುವುದರ ಬಗ್ಗೆ ಪರಿಶೀಲಿಸಲು ಡ್ರೋನ್‌ ಕ್ಯಾಮೆರಾದ ನೆರವು ಪಡೆಯಲಿದ್ದೇವೆ ಎಂದರು.

ಅತ್ಯಂತ ಹೆಚ್ಚಿನ ರೆಸಲ್ಯೂಷನ್‌ ಹೊಂದಿದ ಡ್ರೋನ್‌ ಕ್ಯಾಮೆರಾದ ಸಹಾಯದಿಂದ ಇಲ್ಲಿಯೇ ನಿಂತು ಎಲ್ಲೆಡೆ ಏನೇನು ನಡೆಯುತ್ತಿದೆ ಎಂದು ತಿಳಿಯಬಹುದು. ಉನ್ನತ ಮಟ್ಟದ ತಂತ್ರಜ್ಞಾನ ಹಾಗೂ ಮಾನವ ಸಂಪನ್ಮೂಲ ಬಳಸಿಕೊಳ್ಳುವ ಮೂಲಕ ಹಾಗೂ ಜಿಲ್ಲೆಯಲ್ಲಿ ಇರುವಂತಹ ವೈದ್ಯಕೀಯ ಸೌಲಭ್ಯದೊಂದಿಗೆ ವ್ಯವಸ್ಥಿತವಾಗಿ ಕೋವಿಡ್ ನಿಯಂತ್ರಣ ಮಾಡುವ ವಿಶ್ವಾಸ ನಮ್ಮಲಿದೆ ಎಂದು ಹೇಳಿದರು. ಮಂಗಳವಾರ ಕೋವಿಡ್ ಸೋಂಕಿನ 12 ಪಾಸಿಟಿವ್‌ ಕೇಸ್‌ ಬಂದಿದೆ. ಅದರಲ್ಲಿ ಹೆಚ್ಚಿನವು ಜಾಲಿನಗರಕ್ಕೆ ಸಂಬಂಧಪಟ್ಟಿವೆ. ಇನ್ನೊಂದು ಪ್ರಕರಣ ಕೆಟಿಜೆ ನಗರಕ್ಕೆ ಸಂಬಂಧಿಸಿದ್ದಾಗಿದ್ದು ಅಲ್ಲಿಯೂ ಕಂಟೇನ್ಮೆಂಟ್‌ ಝೋನ್‌ ನಿರ್ಮಿಸಲಾಗಿದೆ. ಜಾಲಿನಗರದ ಎಲ್ಲಾ ಪ್ರಕರಣಗಳು ರೋಗಿ-556ಕ್ಕೆ ಸಂಪರ್ಕ ಹೊಂದಿವೆ. ಹಾಗಾಗಿ ತಪಾಸಣೆಯಲ್ಲಿ ಆಶಾ ಕಾರ್ಯಕರ್ತೆಯರ ಜತೆ ಆರೋಗ್ಯಾಧಿಕಾರಿಗಳನ್ನು ನೇಮಿಸಲಾಗಿದ್ದು, ಅವರು ಪಿಪಿಇ ಕಿಟ್‌ ಧರಿಸಿ ಎಲ್ಲ ಮನೆಗಳ ಪ್ರತಿ ಸದಸ್ಯರ ಆರೋಗ್ಯ ತಪಾಸಣೆ ಮಾಡುತ್ತಾರೆ. ಆರೋಗ್ಯಾಧಿಕಾರಿಗೆ ನಿವಾಸಿಗಳ ಆರೋಗ್ಯದ ಕುರಿತು ಖಚಿತ ಮಾಹಿತಿ ತಿಳಿಯಲಿದೆ. ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಅಂತಹವರನ್ನು ಕರೆದೊಯ್ಯಲು ಆಂಬ್ಯುಲೆನ್ಸ್‌, ಬಸ್‌ ಜತೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಒಂದು ಸಲ ಎಲ್ಲರನ್ನೂ ಆರೋಗ್ಯ ತಪಾ‌ಸಣೆಗೆ ಒಳಪಡಿಸುವುದು ಜಿಲ್ಲಾಡಳಿತ ಉದ್ದೇಶವಾಗಿದೆ ಎಂದು ಹೇಳಿದರು.

ಎಸ್‌.ಎಂ.ಕೃಷ್ಣ ನಗರದ ಅರ್ಬನ್‌ ಹೆಲ್ತ್‌ ಸೆಂಟರ್‌ನಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಬಹಳಷ್ಟು ದೂರ ಹೋಗುವ ಅವಶ್ಯಕತೆ ಇಲ್ಲ. ಗರಿಷ್ಠ ಮಟ್ಟದಲ್ಲಿ ಸ್ಯಾಂಪಲ್‌ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸುವ ಮೂಲಕ ಸೋಂಕು ಹೆಚ್ಚಿನ ರೀತಿ ಹರಡದಂತೆ ತಡೆಗಟ್ಟುವ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಈಗಾಗಲೇ 5 ಕಂಟೇನ್ಮೆಂಟ್‌ ಝೋನ್‌ಗಳನ್ನು ಸೀಲ್‌ಡೌನ್
ಮಾಡಲಾಗಿದೆ. ಕಂಟೇನ್ಮೆಂಟ್‌ ಝೋನ್‌ಗೆ ಐವರು ಕಮಾಂಡರ್‌ ಮತ್ತು ಇನ್‌ಸ್ಪೆಕ್ಟರ್‌ ನೇಮಿಸಲಾಗಿದೆ. ಇನ್‌ಸ್ಪೆಕ್ಟರ್‌ಗಳು ಆ ಏರಿಯಾದಲ್ಲಿ ಬಿಗಿ ಬಂದೋಬಸ್ತ್ ಮಾಡಿಕೊಳ್ಳುತ್ತಾರೆ. ಏರಿಯಾಕ್ಕೆ ಹೋಗಲು ಮತ್ತು ಬರಲು ಒಂದೇ ಗೇಟ್‌ ತೆರೆಯಲಾಗಿದ್ದು, ಅಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಜನರಿಗೆ ಬೇಕಾದಂತಹ ಎಲ್ಲಾ ಅಗತ್ಯ ವಸ್ತು ಹಾಗೂ ಔಷಧಗಳನ್ನು ಅಲ್ಲಿಯೇ ಸರಬರಾಜಿಗೆ ವ್ಯವಸ್ಥೆ ಮಾಡಲಾಗುವುದೆಂದರು.

Advertisement

ಎಲ್ಲರ ಆರೋಗ್ಯ ತಪಾಸಣೆ: ಆರೋಗ್ಯ ತಪಾಸಣೆಗಾಗಿ ಮನೆ ಮನೆಗೆ ಭೇಟಿ ಸರ್ವೇಕ್ಷಣಾ ತಂಡದವರಿಗೆ ಬಹಳಷ್ಟು ಜನರು ತಮಗೆ ಇದ್ದಂತಹ ಜ್ವರ, ಕೆಮ್ಮು, ನೆಗಡಿ ಬಗ್ಗೆ ಮುಚ್ಚಿಡುತ್ತಿದ್ದರು. ವಿಷಯ ತಿಳಿಸಿದಲ್ಲಿ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಲ್ಲದೆ, ಕ್ವಾರಂಟೈನ್‌ಲ್ಲಿ ಇಡುತ್ತಾರೆ ಎನ್ನುವ ದೃಷ್ಟಿಯಿಂದ ಮರೆ ಮಾಚುತ್ತಿದ್ದರು. ಯಾರೂ ಮುಚ್ಚಿಡಲು ಬರುವುದಿಲ್ಲ ಎಂದರು.

ಕೋವಿಡ್ ಸೋಂಕಿನ ಅತಿ ಹೆಚ್ಚು ಪ್ರಕರಣದ ಜಾಲಿನಗರವನ್ನು ಸಂಪೂರ್ಣ ಸ್ವತ್ಛ ಮಾಡಬೇಕಾಗಿದೆ. ಈ ಪ್ರದೇಶದ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕೆಂಬ ಉದ್ದೇಶದಿಂದ ಒಂದು ಯೋಜನೆ ತಯಾರಿಸಲಾಗಿದೆ. ಆರೋಗ್ಯ ತಪಾಸಣೆಗಾಗಿ 20 ತಂಡ ರಚಿಸಲಾಗಿದೆ. ಪ್ರತಿ ತಂಡಕ್ಕೆ ವಿಶೇಷ ಆರೋಗ್ಯಾಧಿಕಾರಿ ನೇಮಿಸಲಾಗಿದೆ. ತಂಡದವರು ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ. ಈ ಏರಿಯಾದೊಳಗೆ ಇರುವಂತಹ 2000 ಮನೆಗಳ ಸದಸ್ಯರನ್ನು ತಪಾಸಣೆ ನಡೆಸುವರು. ಎರಡು ದಿನದಲ್ಲಿ ತಪಾಸಣೆ ಮುಗಿಸುವ ಯೋಜನೆ ಇದೆ.
ಮಹಾಂತೇಶ ಬೀಳಗಿ,
ಜಿಲ್ಲಾಧಿಕಾರಿ

ದಾವಣಗೆರೆಯಲ್ಲಿ ಹರಡಿರುವ ಕೋವಿಡ್ ಸೋಂಕಿನ ಮೂಲದ ಕುರಿತು ಮುಖ್ಯವಾಗಿ ಹಾಸನ, ಚಿತ್ರದುರ್ಗ, ಬಳ್ಳಾರಿ ಹಾಗೂ ಬಾಗಲಕೋಟೆಗೆ ಗೂಡ್ಸ್‌ ವಾಹನದಲ್ಲಿ ಹೋಗಿ ಬಂದಂತಹವರ ಮಾಹಿತಿ ಸಿಕ್ಕಿದೆ. ಈರುಳ್ಳಿ ತುಂಬಿದ ಲಾರಿಗಳಲ್ಲಿ ಹೋಗಿ ಬಂದವರಿಗೆ ಲಕ್ಷಣ ಕಂಡು ಬಂದಿದೆ. ಆ ಬಗ್ಗೆ ಕೂಲಂಕ‚ಷವಾಗಿ ಪರಿಶೀಲಿಸಲಾಗುತ್ತಿದೆ. ಇನ್ನೂ ಸ್ಪಲ್ಪ ಸಮಯ ಬೇಕಿದೆ. ವೈದ್ಯಾಧಿಕಾರಿಗಳ ಸಹಾಯದಿಂದ ವಿಚಾರಣೆ ಮಾಡಿ ಕೂಡಲೇ ಪತ್ತೆ ಹಚ್ಚಲಾಗುವುದು.
ಹನುಮಂತರಾಯ,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next