Advertisement

ಸೃಜನಾತ್ಮಕತೆ-ಕ್ರಿಯಾಶೀಲತೆ ಜೀವಂತಿಕೆಯ ಪ್ರತೀಕ

11:26 AM Nov 18, 2019 | Naveen |

ದಾವಣಗೆರೆ: ಸೃಜನಾತ್ಮಕತೆ ಮತ್ತು ಕ್ರಿಯಾಶೀಲತೆ ಪ್ರತಿಯೊಬ್ಬರ ಜೀವಂತಿಕೆಯ ಪ್ರತೀಕ ಎಂದು ಶಿವಮೊಗ್ಗದ ಸಾಹಿತಿ ಡಾ| ಶುಭ ಮರವಂತೆ ಪ್ರತಿಪಾದಿಸಿದರು.

Advertisement

ಭಾನುವಾರ ಡಿಸಿಎಂ ಟೌನ್‌ಶಿಪ್‌ನ ಶ್ರೀಮತಿ ಯುಮುನಾಬಾಯಿ ಶ್ರೀ ಬಿ.ಎನ್‌. ಶಾಂತರಾಂ ಸಭಾಭವನದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಡಿಸಿಎಂ ಶಾಖೆ, ಕಾವ್ಯಗಾನ ಸಂಭ್ರಮ… ಅಂತರ್ಜಾಲ ಯೂಟ್ಯೂಬ್‌ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕ್ರಿಯಾಶೀಲತೆಯಿಂದ ಕೂಡಿರುವುದು ಜೀವಂತಿಕೆಯ ಲಕ್ಷಣ. ಹಾಗಾಗಿ ಸದಾ ಕ್ರಿಯಾಶೀಲತೆಯಿಂದ ಇರುವುದನ್ನು ರೂಢಿಸಿಕೊಳ್ಳಬೇಕು ಎಂದರು.

ನಾಡಿನ ಖ್ಯಾತ ವಿಮರ್ಶಕರಾಗಿದ್ದ ಡಾ| ಎಂ.ಎಂ. ಕಲ್ಬುರ್ಗಿಯವರು ತಮ್ಮ ಶಿಷ್ಯರನ್ನು ಕಂಡಾಗ ಜೀವಂತ ಇದಿಯೋ ಇಲ್ಲ ಸತ್ತಿದಿಯೋ… ಎಂದೇ ಕೇಳುತ್ತಿದ್ದರು. ಅವರ ಅರ್ಥದಲ್ಲಿ ಕ್ರಿಯಾಶೀಲತೆಯಿಂದ ದೂರ ಇರುವುದು ಸತ್ತಂತೆ. ದಿನದ 24 ಗಂಟೆ ಒಂದಿಲ್ಲ ಒಂದು ಚಟುವಟಿಕೆಯಲ್ಲಿ ಕ್ರಿಯಾಶೀಲತೆಯಿಂದ ಇರುವುದು ಬದುಕಿರುವಂತೆ ಎಂದಾಗಿತ್ತು. ಜೀವಂತಿಕೆ ಪ್ರತೀಕವಾದ ಕ್ರಿಯಾಶೀಲತೆಯ ಮೂಲಕ ನಾಡು, ನುಡಿ, ಸಂಸ್ಕೃತಿ ರಕ್ಷಣೆಯ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕ್ರಿಯಾಶೀಲತೆ ಎಂಬುದು ಪ್ರೀತಿ, ಕಾಳಜಿ, ಮಾನವೀಯತೆಯ ನೈಜತೆಯ ಬದುಕನ್ನ ಕಟ್ಟಿಕೊಡುತ್ತದೆ. ಕ್ರಿಯಾಶೀಲತೆಯೊಟ್ಟಿಗೆ ಜೀವನ ಸಾಗಿಸುವಂತಾಗಬೇಕು. ಸ್ವಾಮಿ ವಿವೇಕಾನಂದರು ಸಹ ಕ್ರಿಯಾಶೀಲತೆ ನಮ್ಮ ಜೀವಂತಿಕೆಯ ಲಕ್ಷಣ ಎಂದೇ ಹೇಳುತ್ತಿದ್ದರು. ನಮ್ಮ ಹತ್ತಾರು ಸಮಸ್ಯೆಗಳ ನಡುವೆಯೂ ಕ್ರಿಯಾಶೀಲತೆಯಿಂದ ಇರಬೇಕು ಎಂದು ತಿಳಿಸಿದರು.

ಜಗತ್ತಿನಲ್ಲಿ ಮಹಿಳೆಯರಷ್ಟು ಕ್ರಿಯಾಶೀಲತೆಯಿಂದ ಇರುವರು ಬೇರೆ ಯಾರೂ ಇಲ್ಲ. 24×7 ಮಾದರಿ ಸದಾ ಕ್ರಿಯಾಶೀಲತೆಯಿಂದ ಕೆಲಸ-ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ನಿತ್ಯ ಜೀವಂತಿಕೆಯ ಕ್ರಿಯಾಶೀಲತೆಯ ಮೂಲಕ ಸುಂದರ ಸಮಾಜದ ನಮ್ಮ ಬದುಕನ್ನೂ ಕಟ್ಟಿಕೊಳ್ಳಬೇಕು. ಹಿಂದಿನ ಕಾಲದಂತೆ ಮಹಿಳೆಯರು ಇಲ್ಲ. ಕಾಲಕ್ಕೆ ಅನುಗುಣವಾಗಿ ಬದಲಾವಣೆ ಕಂಡುಕೊಂಡಿದ್ದಾರೆ ಎಂದು ತಿಳಿಸಿದರು.

Advertisement

ಜಗತ್ತಿನಲ್ಲಿ ಸಮಸ್ಯೆ, ತೊಂದರೆ, ಆತಂಕ ಇಲ್ಲದವರು ಯಾರೂ ಇಲ್ಲ. ಒಬ್ಬಬ್ಬರಿಗೆ ಒಂದೊಂದು ತೆರನಾದ ಸಮಸ್ಯೆ, ತೊಂದರೆ, ಆತಂಕ ಇದ್ದೇ ಇರುತ್ತವೆ. ಅದರ ನಡುವೆಯೂ ನಮ್ಮ ನೋವು ನುಂಗಿಕೊಂಡು ಸಮಾಜ ಕಟ್ಟುವ ಕೆಲಸ ಮಾಡಬೇಕು. ಮಹಿಳೆಯರು ತಮ್ಮಧೀಶಕ್ತ ಮೂಲಕ ಒಳ್ಳೆಯ ಸಾಂಸ್ಕೃತಿಕ ಸಮಾಜ ನಿರ್ಮಾಣ ಕಾರ್ಯದಲ್ಲಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದಿನ ಆಧುನಿಕ ಯುಗದ ಕಾಲಘಟ್ಟದಲ್ಲಿ ಮಾನವೀಯತೆ, ಪ್ರೀತಿ, ವಿಶ್ವಾಸ, ಬಾಂಧವ್ಯದ ಕೊರತೆ ಹೆಚ್ಚಾಗಿಯೇ ಕಂಡು ಬರುತ್ತಿದೆ. ಪ್ರೀತಿ, ವಿಶ್ವಾಸ, ಬಾಂಧವ್ಯದಿಂದ ಬದುಕುವುದೇ ನಿಜವಾದ ಸ್ವರ್ಗ ಎಂದರಿತು ಎಲ್ಲರೊಟ್ಟಿಗೆ ಒಂದಾಗಿ ಸಂಘಟನೆ ಮಾಡಬೇಕು. ಇಂದಿನ ಕಾಲದಲ್ಲಿ ಸಂಘಟನೆ ಮಾಡುವುದು ಸುಲಭ ಅಲ್ಲ. ಸಂಘಟನೆ ಎಂದಾಕ್ಷಣ ಲಾಭದ… ಬಗ್ಗೆಯೇ ಲೆಕ್ಕಾಚಾರ ಮಾಡಲಾಗುತ್ತದೆ.

ಅಂತದ್ದರ ನಡುವೆಯೂ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕಳೆದ 25 ವರ್ಷದಿಂದ ಸಕ್ರಿಯತೆ, ಕ್ರಿಯಾಶೀಲತೆಯ ಚಟುವಟಿಕೆಯೊಂದಿಗೆ ಮುನ್ನಡೆಯುವ ಮೂಲಕ ಇಡೀ ನಾಡಿಗೆ ಮಾದರಿ ಸಂಘಟನೆ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕನ್ನಡ ಎನ್ನುವುದು ಸ್ತ್ರೀತ್ವದ ಪ್ರತೀಕ. ನವೆಂಬರ್‌ ಮಾತ್ರವಲ್ಲ, ಪ್ರತಿ ದಿನ, ಪ್ರತಿ ಕ್ಷಣ ಕನ್ನಡತನವನ್ನು ತೋರಿಸುವ ಕೆಲಸ ಆಗಬೇಕು. ಕನ್ನಡ ನಾಡು, ನುಡಿ, ಸಂಸ್ಕೃತಿಯ ತಾಯಿಗೆ.. ಪ್ರತಿಯೊಬ್ಬ ಕನ್ನಡಿಗರು ಹೆಚ್ಚಿನ ಪ್ರಾಶ್ಯಸ್ತ ನೀಡಬೇಕು. ಕನ್ನಡತನವ ಮೇಳೈಸಲಿ ಎಂದು ಆಶಿಸಿದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಾಲಿಗ್ರಾಮ ಗಣೇಶ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಎಸ್‌.ಟಿ. ವೀರೇಶ್‌, ಆರ್‌. ವಿಜಯ್‌ಕುಮಾರ್‌, ಕೆ. ನಾಗರಾಜ್‌, ಶಾರದಾ ಮೂಡಲಗಿರಿಯಪ್ಪ, ಕೆ.ಎಚ್‌.ಮಂಜುನಾಥ್‌, ಹೇಮಾ ಶಾಂತಪ್ಪ ಪೂಜಾರಿ ಇತರರು ಇದ್ದರು. ಅನ್ನಪೂರ್ಣ ಪಾಟೀಲ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next