ಹೊನ್ನಾಳಿ: ಗ್ರಾಮೀಣ ಭಾಗದಲ್ಲಿ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿತ್ತು. ಈ ಕನಸನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಾದ್ಯಂತ ಪಿಎಂಜಿಎಸ್‌ವೈ ಯೋಜನೆಯಡಿ ರಸ್ತೆ ಅಭಿವೃದ್ಧಿ ಮೂಲಕ ನನಸು ಮಾಡುತ್ತಿದ್ದಾರೆ ಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಹೇಳಿದರು. ತಾಲೂಕಿನ ದಿಡಗೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಗ್ರಾಮಗಳ ಸುಮಾರು 5.6 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನ್ಯಾಮತಿ ಮತ್ತು ಹೊನ್ನಾಳಿ ಅವಳಿ ತಾಲೂಕುಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 29 ಕೋಟಿ ರೂ. ಅನುದಾನದಲ್ಲಿ ಗ್ರಾಮೀಣ ಭಾಗಗಳ 40 ಕಿಮೀ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು. ಕೇಂದ್ರ ಸರ್ಕಾರ ಜಲಜೀವನ್ ಯೋಜನೆಯಡಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
ರಾಜ್ಯದ ಮುಖ್ಯಂತ್ರಿಯವರು ಬಸವ ಆಶ್ರಯ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ 50 ಮನೆಗಳು, ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್, ರೈತ ಸನ್ಮಾನ್ ಯೋಜನೆಯಡಿ ರೈತರ ಖಾತೆಗಳಿಗೆ 6 ಸಾವಿರ ರೂ. ಜಮಾ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.
ಇಡೀ ಜಿಲ್ಲೆಯಲ್ಲಿ ಸರ್ಕಾರದಿಂದ ಅತಿ ಹೆಚ್ಚು ಅನುದಾನ ತಂದ ಶಾಸಕರು ಎಂ.ಪಿ. ರೇಣುಕಾಚಾರ್ಯ ಅವರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿಯೂ ತಮ್ಮ ವಿಶಿಷ್ಟ ಜನಸೇವೆಯಿಂದ ಗುರುತಿಸಿಕೊಂಡು ಅಪರೂಪದ ಶಾಸಕ ಎನ್ನಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಅವಳಿ ತಾಲೂಕಿನಲ್ಲಿ 1.35 ಲಕ್ಷ ಜನರಿಗೆ ಲಸಿಕೆ ಹಾಕಿಸಲಾಗಿದೆ.
ಶನಿವಾರ ಒಂದೇ ದಿನ 12 ಸಾವಿರ ಕೋವಿಡ್ ಲಸಿಕೆ ಹಾಕಿಸುವ ಮೂಲಕ ಅವಳಿ ತಾಲೂಕಿನ ಜನ ಲಸಿಕೆಯಿಂದ ವಂಚಿತರಾಗದಂತೆ ಲಸಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅವಳಿ ತಾಲೂಕಿನಾದ್ಯಂತ ಉತ್ತಮ ಗ್ರಾಮೀಣ ರಸ್ತೆಗಳು ನಿರ್ಮಾಣವಾಗಿವೆ. ಗುತ್ತಿಗೆದಾರರು ಸಾರ್ವಜನಿಕರಿಂದ ದೂರು ಬಾರದಂತೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕೆಂದು ತಿಳಿಸಿದರು.
ದಿಡಗೂರು ಅಂಜನೇಯಸ್ವಾಮಿ ದೇವಸ್ಥಾನದ ಅಣ್ಣಪ್ಪ ಸ್ವಾಮಿ, ಗ್ರಾಪಂ ಉಪಾಧ್ಯಕ್ಷ ಹಾಲೇಶಪ್ಪ, ಕಸಬಾ ಸೊಸೈಟಿ ಮಾಜಿ ಅಧ್ಯಕ್ಷ ಗೋಪಾಲಪ್ಪ, ಪಿಎಸ್‌ಐ ಬಸವನಗೌಡ ಬಿರಾದಾರ್, ಇಂಜಿನಿಯರ್ ಚಂದ್ರಮೌಳಿ, ಗ್ರಾಮದ ಮುಖಂಡರು ಇದ್ದರು.