Advertisement

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

10:09 PM May 15, 2024 | Team Udayavani |

ದಾವಣಗೆರೆ: ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ಕೆರೆಗೆ ಕೆಲವು ದುಷ್ಕರ್ಮಿಗಳು ವಿಷವಿಕ್ಕಿದ ಪರಿಣಾಮ ಸಾವಿರಾರು ಮೀನುಗಳು ಸತ್ತಿರುವ ಘಟನೆ ನಡೆದಿದೆ.

Advertisement

ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ಹೊರ ವಲಯದ ಎಲೆಬೇತೂರು ಗ್ರಾಮಕ್ಕೆ ಹೊಂದಿ ಕೊಂಡಿರುವ ಭದ್ರಾ ಕಾಲುವೆ ಆಶ್ರಿತವಾಗಿರುವ ಸುಮಾರು 126 ಎಕರೆ ವಿಸ್ತೀರ್ಣದ ಬೇತೂರು ಕೆರೆಯಲ್ಲಿ ಈ ಬರದಲ್ಲಿ ಸುಮಾರು 60 ಎಕರೆಯಷ್ಟು ನೀರು ಸಂಗ್ರಹವಿದ್ದು, ಕೆರೆ ಅಂಗಳದಲ್ಲಿ ಸುಮಾರು 20 ಅಡಿಗಳಷ್ಟು ಆಳದ ಗುಂಡಿಗಳಲ್ಲಿ 8-10 ಕೆಜಿ ತೂಕದ ಭಾರೀ ಮೀನುಗಳ ಮಾರಣ ಹೋಮ ನಡೆಸಲಾಗಿದೆ.

ಎಲೆಬೇತೂರು ಗ್ರಾಮದ ಮಂಜಪ್ಪ ಬಾರಿಕೇರ, ಸಿದ್ದಪ್ಪ ಬಾರಿಕರ, ಹನುಮಂತಪ್ಪ ಜಕ್ಕಾವರು ಸೇರಿಕೊಂಡು ಮೀನುಗಾರಿಕೆ ಇಲಾಖೆಯಿಂದ ಟೆಂಡರ್ ಪಡೆದು, ಸುಮಾರು 8 ಲಕ್ಷ ಮೀನು ಮರಿಗಳನ್ನು ಬಿಟ್ಟಿದ್ದರು. 5 ವರ್ಷಗಳ ಹಿಂದೆ ಬಿಟ್ಟಿದ್ದ ಮೀನುಗಳ ಸಂತತಿ ಹೆಚ್ಚಾಗಿತ್ತು. ರವೂ, ಕಾಟ್ಲಾ, ಗೌರಿ, ಮಿರಗಲ್‌, ಬ್ಲಾಕ್ ಶಾರ್ಪ್‌ ಹೀಗೆ ನಾನಾ ಮೀನುಗಳ ಮರಿಗಳನ್ನು ಬಿಡಲಾಗಿತ್ತು.

ಎಲೆಬೇತೂರು ಕೆರೆಯ 126 ಎಕರೆ ಪೈಕಿ ಅರ್ಧದಷ್ಟು ನೀರು ಸಂಗ್ರಹ ಇತ್ತು. ಸಹಜವಾಗಿಯೇ ಮೀನುಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿತ್ತು. ಬುಧವಾರ ಬೆಳಿಗ್ಗೆಯಿಂದಲೇ ಗ್ರಾಮಸ್ಥರು, ಸುತ್ತಮುತ್ತಲಿನ ಊರಿನವರು ಮೀನುಗಳನ್ನು ಹಿಡಿದುಕೊಂಡು ಹೋದ ಸುದ್ದಿ ಗೊತ್ತಾಗಿ ಮಂಜಪ್ಪ, ಹನುಮಂತಪ್ಪ, ಸಿದ್ದಪ್ಪ ಕೆರೆ ಬಳಿ ಬಂದಿದ್ದರು. ಸುಮಾರು 3 ಕ್ವಿಂಟಾಲ್ ಮೀನುಗಳನ್ನು ಹಿಡಿದು, 100 ರು.ಗೆ ಕೆಜಿಯಂತೆ ಮಾರಿದರೂ ಮೀನುಗಳ ಮಾರಣ ಹೋಮ ಮಾತ್ರ ತಡೆಯಲಾಗಿಲ್ಲ.

ಬೇತೂರು ಕೆರೆಯಲ್ಲಿ ಮೀನುಗಳು ಸತ್ತು ತೇಲುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಎಲೆಬೇತೂರು, ನಾಗರಕಟ್ಟೆ, ಬಿ.ಚಿತ್ತಾನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಜಮಾಯಿಸಿದರು.

Advertisement

ಮೀನುಗಾರಿಕೆಗೆ ಟೆಂಡರ್ ಹಾಕಿದ್ದೆವು. ಈಗ ಇನ್ನೇನು ನಮ್ಮ ಬಾಯಿಗೆ ತುತ್ತು ಬರುತ್ತಿದೆಯೆಂಬ ಕಾಲಕ್ಕೆ ಕಾಣದ ಕೈಗಳು ನಮ್ಮ ತುತ್ತಿಗೆ ವಿಷ ಇಕ್ಕಿವೆ. ನಮ್ಮ ಅನ್ನಕ್ಕೆ ಯಾರು ಕಲ್ಲು ಹಾಕಿದ್ದಾರೋ ಗೊತ್ತಾಗುತ್ತಿಲ್ಲ. ಯಾರೋ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿರುವ ಸಾಧ್ಯತೆ ಇದೆ. ಕೆರೆ ಬಳಿ ವಿಷದ ಬಾಟಲು ಪತ್ತೆಯಾಗಿದೆ. ಸುಮಾರು 5 ಟನ್‌ನಷ್ಟು ಮೀನುಗಳು ಸಾವನ್ನಪ್ಪಿವೆ. 2ರಿಂದ 10 ಕೆಜಿವರೆಗಿನ ಮೀನು ಸತ್ತಿವೆ ಎಂದು ತಿಳಿಸಿದರು.

ಕಳೆದ 5 ವರ್ಷದಿಂದ ಸಾಕಿದ್ದ ವಿವಿಧ ಜಾತಿಯ ಸುಮಾರು 5 ಟನ್ ಮೀನುಗಳು ಸಾಮೂಹಿಕವಾಗಿ ಸಾವನ್ನಪ್ಪಿವೆ. ವಿಷ ಪ್ರಾಶನದಿಂದ ಮೀನುಗಳು ಸಾಯುತ್ತಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Fraud Case ಕೆನರಾ ಬ್ಯಾಂಕ್‌ ಹೆಸರಲ್ಲಿ ಸಂದೇಶ ಕಳುಹಿಸಿ 3.27 ಲಕ್ಷ ರೂ. ವಂಚನೆ

Advertisement

Udayavani is now on Telegram. Click here to join our channel and stay updated with the latest news.

Next