Advertisement

ಬಹುಮತದ ಸರ್ಕಸ್‌ ಸರ್ಕಸ್‌!

11:38 AM Nov 20, 2019 | |

ಎನ್‌.ಆರ್‌.ನಟರಾಜ್‌
ದಾವಣಗೆರೆ:
ಅತಂತ್ರ ಫಲಿತಾಂಶದಿಂದಾಗಿ ದಾವಣಗೆರೆ ಮಹಾನಗರಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯಲು ನಡೆಯುತ್ತಿದ್ದ ಕಸರತ್ತಲ್ಲಿ ಸದ್ಯ ಕೈ ಪಡೆ ಮೇಲಾಗಿದ್ದು, ಪಕ್ಷೇತರ ಸದಸ್ಯ ಎಚ್‌. ಉದಯಕುಮಾರ್‌ ಬೆಂಬಲದಿಂದಾಗಿ ಕಾಂಗ್ರೆಸ್‌ನ ಸಂಖ್ಯಾಬಲ 23ಕ್ಕೇರಲಿದೆ.

Advertisement

ಮಹಾನಗರಪಾಲಿಕೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶದಿಂದಾಗಿ ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳೂ ಅಗತ್ಯವಿರುವ ಸರಳ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದವು. ವಾರ್ಡ್‌ಗಳ ಪುನರ್‌ ವಿಂಗಡನೆಯಿಂದಾಗಿ 41ರಿಂದ 45ಕ್ಕೇರಿದ್ದ ಸದಸ್ಯ ಬಲದ ಮಹಾನಗರಪಾಲಿಕೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಯಾವುದೇ ಪಕ್ಷ ಕನಿಷ್ಠ 23 ಸದಸ್ಯರ ಸಂಖ್ಯೆಯನ್ನು ಹೊಂದಬೇಕಿತ್ತು. ಆದರೆ, ಈ ಚುನಾವಣೆಯಲ್ಲಿ ದಾವಣಗೆರೆ ನಗರದ ಮತದಾರರು ಯಾರಿಗೂ ಸ್ಪಷ್ಟ ಒಲವು ವ್ಯಕ್ತಪಡಿಸಿರಲಿಲ್ಲ.

ಕಳೆದ ಅವಧಿಯಲ್ಲಿ 39 ಸದಸ್ಯರನ್ನು ಹೊಂದಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ 22 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿ, ಅಧಿಕಾರಕ್ಕೆ ಓರ್ವ ಸದಸ್ಯನ ಕೊರತೆ ಎದುರಿಸುತ್ತಿತ್ತು. ಕಳೆದ ಬಾರಿ ಕೇವಲ ಒಂದು ವಾರ್ಡ್‌ನಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ 17 ಸದಸ್ಯರನ್ನು ಗೆಲ್ಲಿಸಿಕೊಂಡಿದ್ದರೂ ಅಧಿಕಾರ ಗದ್ದುಗೆ ಏರಲು ಇನ್ನೂ 6 ಮಂದಿ ಬೇಕಿತ್ತು. ಉಭಯ ಪಕ್ಷಗಳಿಂದ ಟಿಕೆಟ್‌ ಸಿಗದೇ ಪಕ್ಷೇತರರಾಗಿ ಜಯಗಳಿಸಿದ್ದ ಐವರನ್ನು ಸೆಳೆಯಲು ಮೂರ್‍ನಾಲ್ಕು ದಿನಗಳಿಂದ ಕೈ ಹಾಗೂ ಕಮಲ ಪಡೆಯಲ್ಲಿ ತೀವ್ರ ಕಸರತ್ತು ನಡೆಯುತ್ತಿತ್ತು. ಈ ಪ್ರಯತ್ನದಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದ್ದು, 45ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯ ಪತಾಕೆ ಹಾರಿಸಿದ್ದ ಎಚ್‌.ಉದಯಕುಮಾರ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ನಿವಾಸದಲ್ಲಿ ಪಕ್ಷದ ಮುಖಂಡರ ಸಮ್ಮುಖದಲ್ಲಿ ಉದಯಮುಕಾರ್‌ ಮರಳಿಗೂಡಿಗೆ ಬಂದಿದ್ದಾರೆ. ಹಾಗಾಗಿ ಅಧಿಕಾರ ಚುಕ್ಕಾಣಿ ಹಿಡಿಯಲು ಬೇಕಿದ್ದ ಮ್ಯಾಜಿಕ್‌ ನಂಬರ್‌ 23 ಕಾಂಗ್ರೆಸ್‌ಗೆ ದಕ್ಕಿಂತಾಗಿದೆ. ಐವರೂ ಪಕ್ಷೇತರ ಸದಸ್ಯರನ್ನು ಸೆಳೆದು ಈ ಬಾರಿ ಪಾಲಿಕೆ ಅಧಿಕಾರವನ್ನು ಕೈ ವಶ ಮಾಡಿಕೊಳ್ಳಲೇ ಬೇಕೆಂಬ ಪ್ರಯತ್ನದಲ್ಲಿದ್ದ ಬಿಜೆಪಿಗೆ ಈಗ ಹಿನ್ನೆಡೆಯಾಗಿದೆ.

ಬಾಕಿ ನಾಲ್ವರು ಪಕ್ಷೇತರ ಸದಸ್ಯರೂ ಸದ್ಯ ಯಾವ ಪಕ್ಷಕ್ಕೂ ತಮ್ಮ ಬೆಂಬಲ ವ್ಯಕ್ತಪಡಿಸಿಲ್ಲ. ಅವರು ಬಿಜೆಪಿ ಟಿಕೆಟ್‌ ಸಿಗದೇ ಬಂಡಾಯವಾಗಿ ಸ್ಪರ್ಧಿಸಿ, ಗೆದ್ದವರೇ. ಆ ನಾಲ್ವರೂ ಬಿಜೆಪಿ ಬೆಂಬಲಿಸಿದರೂ ಕಮಲ ಪಡೆ ಸದಸ್ಯ ಬಲ 21ಕ್ಕೇರಲಿದೆ. ಹಾಗಾಗಿ ಆ ಪಕ್ಷಕ್ಕೆ ಪಾಲಿಕೆ ಅಧಿಕಾರ ದೂರವಾದಂತಾಗಿದೆ. ಇನ್ನು ಸಂಸದ ಜಿ.ಎಂ. ಸಿದ್ದೇಶ್ವರ್‌ ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ.ರವೀಂದ್ರನಾಥ್‌ ಮತ ಸೇರಿ ಬಿಜೆಪಿ ಬಲ 23 ಆಗಲಿದೆ. ಅದರಂತೆ ಕಾಂಗ್ರೆಸ್‌ಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಟಾರ್‌ ಮತ ದೊರೆಯುವುದರಿಂದ ಕೈ ಪಡೆ ಬಲ 25ಕ್ಕೇರಲಿದೆ. ಇನ್ನು ಪಾಲಿಕೆಯಲ್ಲಿ ಓರ್ವ ಮಹಿಳಾ ಸದಸ್ಯೆಯನ್ನು ಹೊಂದಿರುವ ಜೆಡಿಎಸ್‌ ಬೆಂಬಲ ಯಾರಿಗೆಂದು ಇನ್ನೂ ಸ್ಪಷ್ಟವಾಗಿಲ್ಲ.

Advertisement

ಏನಾದರೂ ಹೊಸ ಬೆಳವಣಿಗೆಯಾದಲ್ಲಿ ಮಾತ್ರ ಜೆಡಿಎಸ್‌ ಸದಸ್ಯೆ ಪಾತ್ರ ನಿರ್ಣಾಯಕವಾಗಬಹುದು. ಸದ್ಯ ಮ್ಯಾಜಿಕ್‌ ನಂಬರ್‌ ಪಡೆಯುವಲ್ಲಿ ಸಕ್ಸಸ್‌ ಆಗಿರುವ ಕೈ ಪಡೆಯಲ್ಲಿ ಉತ್ಸಾಹ ಕಾಣುತ್ತಿದೆ. ಆದರೆ, ರಾಜಕೀಯ ಚದುರಂಗದಾಟ ಹೇಳಲು ಬರುವುದಿಲ್ಲ. ಏನೇ ಆಗಲಿ ಪಾಲಿಕೆ ಅಧಿಕಾರ ಹಿಡಿಯಲೇಬೇಕೆಂಬ ಹಠಕ್ಕೆ ಬಿಜೆಪಿ ಮುಂದಾದಲ್ಲಿ ಆ ಪಕ್ಷದವರು ಮತ್ಯಾವ ತಂತ್ರಕ್ಕೆ ಮೊರೆ ಹೋಗಲಿದ್ದಾರೋ ಎಂಬುದನ್ನ ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next