Advertisement

ಚಿಣ್ಣರನ್ನೂ ಬಿಡದ ಮಹಾಮಾರಿ

09:30 PM May 27, 2021 | Team Udayavani |

ದಾವಣಗೆರೆ: ಕೊರೊನಾ ಮೂರನೇ ಅಲೆ ಮಕ್ಕಳನ್ನು ಕಾಡಲಿದೆ ಎಂದು ಕೆಲವು ತಜ್ಞರು ಹೇಳುತ್ತಿದ್ದರೆ, ಮತ್ತೆ ಕೆಲವು ತಜ್ಞರು ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳುತ್ತಿದ್ದಾರೆ.

Advertisement

ಈ ನಡುವೆ ಎರಡನೇ ಅಲೆಯೇ ಬಹು ದೊಡ್ಡ ಸಂಖ್ಯೆಯಲ್ಲಿ ಮಕ್ಕಳನ್ನು ವಕ್ಕರಿಸಿ ಚಿಣ್ಣರ ಜೀವ ಹಿಂಡುತ್ತಿದೆ! ಹೌದು, ದಾವಣಗೆರೆ ಜಿಲ್ಲೆಯಲ್ಲಿ ಕೇವಲ ಎರಡೇ ತಿಂಗಳಲ್ಲಿ (ಏಪ್ರಿಲ್‌, ಮೇ) 500ಕ್ಕೂ ಹೆಚ್ಚು ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗಿರುವುದೇ ಇದಕ್ಕೆ ಸಾಕ್ಷಿ. ಪ್ರಸ್ತುತ ತಾಂಡವಾಡುತ್ತಿರುವ ಕೊರೊನಾ ಎರಡನೇ ಅಲೆ ಮಕ್ಕಳನ್ನೂ ಬಿಡದೇ ಕಾಡುತ್ತಿದೆ. ಸಮಾಧಾನಕರ ಸಂಗತಿಯೆಂದರೆ ಸೋಂಕಿತ ಎಲ್ಲ ಮಕ್ಕಳು ಈವರೆಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಏಪ್ರಿಲ್‌ ಹಾಗೂ ಮೇ (ಏಪ್ರಿಲ್‌ 1ರಿಂದ ಮೇ 25 ರವರೆಗಿನ ವರದಿ) ಈ ಎರಡು ತಿಂಗಳಲ್ಲಿ ಒಂದರಿಂದ ಹತ್ತು ವರ್ಷದೊಳಗಿನ 546 ಮಕ್ಕಳು ಕೊರೊನಾ ಸೋಂಕಿಗೊಳಗಾಗಿದ್ದಾರೆ. ಇನ್ನು 11 ರಿಂದ 20 ವರ್ಷದೊಳಗಿನ ಬರೋಬ್ಬರಿ 1409 ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಹೆಚ್ಚಿನ ಮಕ್ಕಳು ಕೊರೊನಾ ಸೊಂಕಿಗೆ ಒಳಗಾಗಿರಲಿಲ್ಲ. ಆದರೆ, ಈ ಎರಡನೇ ಅಲೆಯಲ್ಲಿ 1-10ವರ್ಷದೊಳಗಿನ ಮಕ್ಕಳೂ ಸಿಲುಕಿಕೊಂಡಿದ್ದಾರೆ. ಮೊದಲ ಅಲೆ ಸಂದರ್ಭದಲ್ಲಿ ಸೋಂಕು ಸಮುದಾಯಕ್ಕೆ ಹರಡುವುದನ್ನು ತಡೆಯುವ ಪ್ರಯತ್ನ ಮಾಡಲಾಗಿತ್ತು. ಆದರೆ ಈ ಬಾರಿ ಎರಡನೇ ಅಲೆ ಸಮುದಾಯಕ್ಕೂ ಹರಡಿರುವುದರಿಂದ ಮಕ್ಕಳಲ್ಲಿಯೂ ಸೋಂಕು ಗಣನೀಯವಾಗಿ ಹೆಚ್ಚಾಗುತ್ತಿದೆ.

ನಿರ್ವಹಣೆಯೇ ಕಷ್ಟ: ಸೋಂಕಿತ ಮಕ್ಕಳ ನಿರ್ವಹಣೆಯೇ ಪಾಲಕರಿಗೆ ದೊಡ್ಡ ಸವಾಲಾಗಿದೆ. ಮಕ್ಕಳಿಗೆ ನಿರಂತರ ಮಾಸ್ಕ್ ಹಾಕುವುದು, ಅವರನ್ನು ಇತರ ಮಕ್ಕಳೊಂದಿಗೆ ಬೆರೆಯುವುದನ್ನು ತಡೆಯುವುದು ಕಷ್ಟದ ಕೆಲಸ. ಹೀಗಾಗಿ ಮಕ್ಕಳಿಂದ ಮಕ್ಕಳಿಗೆ ಬಹು ಬೇಗ ಸೋಂಕು ಹರಡುವ ಭೀತಿ ಪೋಷಕರನ್ನು ಕಾಡುತ್ತಿದೆ. ಬಹುತೇಕ ಎಲ್ಲ ಸೋಂಕಿತ ಮಕ್ಕಳನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿಟ್ಟು ಪೋಷಕರು ವಿಶೇಷ ಕಾಳಜಿ ವಹಿಸಿ ಮಕ್ಕಳನ್ನು ಕೊರೊನಾದಿಂದ ರಕ್ಷಿಸಿಕೊಳ್ಳುತ್ತಿದ್ದಾರೆ.

Advertisement

55 ದಿನಗಳಲ್ಲಿ 68 ಸಾವು

ಕೊರೊನಾ ಎರಡನೇ ಅಲೆ ಆರಂಭವಾದ ಏಪ್ರಿಲ್‌ನಿಂದ ಇಲ್ಲಿಯವರೆಗೆ (ಮೇ 25 ರವರೆಗೆ) ಜಿಲ್ಲೆಯಲ್ಲಿ 68 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಇವರಲ್ಲಿ 60 ವರ್ಷ ಮೇಲ್ಪಟ್ಟವರು 33, 45-60 ವರ್ಷದವರು 18, 30-45 ವರ್ಷದವರು 11, 18-30 ವರ್ಷದವರು ಆರು ಜನರು ಇದ್ದಾರೆ. ಮಕ್ಕಳು ಪ್ರಾಣಾಪಾಯದಿಂದ ಪಾರಾಗಿರುವುದು ಸಮಾಧಾನದ ಸಂಗತಿ.

ಕೊರೊನಾ ಪಾಸಿಟಿವ್‌ ಬಂದ ಮಕ್ಕಳ ಚಿಕಿತ್ಸೆಗೆ ವಿಶೇಷ ಗಮನ ನೀಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರ ಮೂಲಕ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತಿದೆ. ಈವರೆಗೆ ಪಾಸಿಟಿವ್‌ ಬಂದಿರುವ ಮಕ್ಕಳಲ್ಲಿ ಯಾವುದೇ ಗಂಭೀರ ತೊಂದರೆಯಾಗಿಲ್ಲ.

ಡಾ| ಜಿ.ಡಿ. ರಾಘವನ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ

ಕೊರೊನಾ ಎರಡನೇ ಅಲೆಯಲ್ಲಿಯೇ ಬಹಳಷ್ಟು ಮಕ್ಕಳು ಸೋಂಕು ತಗುಲಿ ತೊಂದರೆಗೊಳಗಾಗುತ್ತಿದ್ದಾರೆ. ಮುಂದೆ ಮೂರನೇ ಅಲೆಯೂ ಬರುವ ಬಗ್ಗೆ ತಜ್ಞರು ಹೇಳುತ್ತಿದ್ದು ಸರ್ಕಾರ ಕೂಡಲೇ ಮಕ್ಕಳಿಗೆ ಯೋಗ್ಯ ಲಸಿಕೆ ಕೊಡುವ ಕೆಲಸವನ್ನು ಆದ್ಯತೆ ಮೇಲೆ ಮಾಡಬೇಕಾಗಿದೆ.

ಅರುಣಕುಮಾರ್‌, ನಾಗರಿಕ, ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next