ದಾವಣಗೆರೆ: ರಾಜ್ಯ ಸರ್ಕಾರದ ಪ್ರಭಾವಿ ಸಚಿವರ ರಾಸಲೀಲೆಗೆ ಸಂಬಂಧಿಸಿದ ಸಿಡಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಸಿಡಿ ವಿಚಾರದ ತನಿಖೆಯನ್ನು ಬೇರೆ ಯಾವುದೇ ಸಂಸ್ಥೆ ವಹಿಸಿದರೂ ನೈಜ ಸಂಗತಿ ಹೊರಬರುವ ಸಾಧ್ಯತೆ ಕಡಿಮೆ ಇದೆ. ಆದ್ದರಿಂದ ಸರ್ಕಾರ ಈ ವಿಚಾರವನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ಕಾಲಮಿತಿಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿದ್ದ ಮೈತ್ರಿ ಸರ್ಕಾರವನ್ನು ಕೆಡವಿ, ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದ ಬಹುತೇಕ ಎಲ್ಲ ಶಾಸಕರು ಈಗ ಕಷ್ಟ ಪಡುತ್ತಿದ್ದಾರೆ. ಕೆಲವರು ತಮ್ಮ ವಿರುದ್ಧ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದ ಮೊರೆ ಹೋಗಿರುವುದು ನೋಡಿದರೆ ಅವರಲ್ಲಿ ಭಯ ಹುಟ್ಟಿರುವುದು ಗೊತ್ತಾಗುತ್ತದೆ. ಬಿಜೆಪಿಯೇ ಈ ರೀತಿಯ ಸಿಡಿಗಳನ್ನು ಮಾಡಿ ಶಾಸಕರನ್ನು ಬೆದರಿಸುವ ತಂತ್ರ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಭಯಗೊಂಡು ನ್ಯಾಯಾಲಯಕ್ಕೆ ಹೋದ ಸಚಿವರು ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ರಾಜ್ಯದಲ್ಲಿ ಪ್ರಸ್ತುತ ಅರಾಜಕತೆ ಸೃಷ್ಟಿಯಾಗಿದೆ. ಆರ್ಥಿಕ ಅಶಿಸ್ತು, ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನಪರ ಕೆಲಸ ಮರೆತಿರುವ ರಾಜ್ಯ ಸರ್ಕಾರ ಸಿಡಿ ಸರ್ಕಾರವಾಗಿದೆ ಎಂದು ಆರೋಪಿಸಿದರು. ಕೆಪಿಸಿಸಿ ಪದವೀಧರ ಪರಿಷತ್ ರಾಜ್ಯ ಅಧ್ಯಕ್ಷ ಆರ್.ಎಂ. ಕುಬೇರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ಪದವೀಧರ ಪರಿಷತ್ ಅಧ್ಯಕ್ಷ ಗಿರೀಶ್, ಮುಖರಾದ ಮಲ್ಲಿಕಾರ್ಜುನ್, ಸೈಯದ್ ನಜೀರ್, ಮಹಾಲಿಂಗಪ್ಪ, ಓ. ರಂಗಪ್ಪ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.