Advertisement

ಸಿಆರ್‌ಸಿ ಕೇಂದ್ರ ನಿರ್ಮಾಣಕ್ಕೆ ಶೀಘ್ರ ಚಾಲನೆ: ನಾರಾಯಣಸ್ವಾಮಿ

06:35 PM Aug 20, 2021 | Team Udayavani |

ದಾವಣಗೆರೆ: ತಾಲೂಕಿನ ವಡ್ಡಿನಹಳ್ಳಿ ಬಳಿ ಇನ್ನೆರಡು ತಿಂಗಳಲ್ಲಿ ದಿವ್ಯಾಂಗ ವ್ಯಕ್ತಿಗಳ ಕೌಶಲ್ಯಾಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣ ಸಂಯುಕ್ತ ಪ್ರಾದೇಶಿಕ ಕೇಂದ್ರದ (ಸಿಆರ್‌ಸಿ) ಭೂಮಿಪೂಜೆ ನೆರವೇರಿಸಲಾಗುವುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

Advertisement

ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಸಿಆರ್‌ಸಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಸಂಸದ ಡಾ| ಜಿ.ಎಂ.ಸಿದ್ದೇಶ್ವರ ಅವರ ಸತತ ಹೋರಾಟದ ಫಲವಾಗಿ ದಾವಣಗೆರೆಯಲ್ಲಿ ಸಿಆರ್‌ಸಿ ಕೇಂದ್ರ ಪ್ರಾರಂಭವಾಗಿದೆ. ರಾಜ್ಯ ಸರ್ಕಾರದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿದೆ. ದಾವಣಗೆರೆ ತಾಲೂಕಿನ ವಡ್ಡಿನಹಳ್ಳಿ ಬಳಿ ಸಿಆರ್‌ಸಿ ಕೇಂದ್ರಕ್ಕೆ 12 ಎಕರೆ ಜಾಗ ಗುರುತಿಸಲಾಗಿದೆ.

36 ಕೋಟಿ ರೂ. ವೆಚ್ಚದ ಡಿಪಿಆರ್‌ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಹಣ ಬಿಡುಗಡೆ ಮಾಡಲಾಗುವುದು. ಇನ್ನೆರಡು ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ದಕ್ಷಿಣಭಾರತದಲ್ಲಿ ಸಿಕಂದ್ರಾಬಾದ್‌ ಹೊರತುಪಡಿ ಸಿದರೆ ಕರ್ನಾಟಕ ಮತ್ತು ಗೋವಾಕ್ಕೆ ಅನುಕೂಲ ಆಗುವಂತೆ ದಾವಣಗೆರೆಯಲ್ಲಿ ಸಿಆರ್‌ಸಿ ಕೇಂದ್ರ ಇದೆ. ದಾವಣಗೆರೆಯ ಸಿಆರ್‌ಸಿ ಕೇಂದ್ರಕ್ಕೆ ಸ್ವಂತ ಕಟ್ಟಡವಾದಲ್ಲಿ ದಿವ್ಯಾಂಗರ ಶಿಕ್ಷಣ, ತರಬೇತಿ, ಸಂಶೋಧನೆ ಎಲ್ಲವೂ ಅನುಕೂಲ ಆಗುತ್ತದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ದಿವ್ಯಾಂಗರ ಅನುಕೂಲಕ್ಕಾಗಿ ಗಾಲಿ ಕುರ್ಚಿ, ಊರುಗೋಲು, ಶ್ರವಣ ಯಂತ್ರ, ಕಿಟ್‌ ಒಳಗೊಂಡಂತೆ ಅನೇಕ ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಇಲ್ಲ. ಅಧಿಕಾರಿಗಳಿಗೆ ಹೆಚ್ಚಿನ ಪ್ರಚಾರ ನೀಡುವಂತೆ ಸೂಚನೆ ನೀಡಲಾಗಿದೆ. ಅರ್ಹರು ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ದಿವ್ಯಾಂಗರು ಬಳಸುವ ಗಾಲಿ ಕುರ್ಚಿ, ಊರುಗೋಲು, ಶ್ರವಣಯಂತ್ರ ಒಳಗೊಂಡಂತೆ ಎಲ್ಲ ಉಪಕರಣಗಳ ತಯಾರಿಕಾ ಘಟಕವನ್ನು ಚಿತ್ರದುರ್ಗದಲ್ಲಿ ಪ್ರಾರಂಭ ಮಾಡಲಾಗುವುದು. ಬೆಳಗಾವಿಯಲ್ಲಿ ಮುಂದಿನ ದಿನಗಳಲ್ಲಿ 1.50 ಕೋಟಿ ರೂ. ಮೌಲ್ಯದ ಗಾಲಿ ಕುರ್ಚಿ, ಊರುಗೋಲು, ಶ್ರವಣ ಯಂತ್ರ, ಕಿಟ್‌ ಒಳಗೊಂಡಂತೆ ವಿವಿಧ ಸಲಕರಣೆ, ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

Advertisement

ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕ ಪ್ರೊ|ಎನ್‌. ಲಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ್‌ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ್‌, ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ಕಾರ್ಯದರ್ಶಿ ಕೆ.ಎಸ್‌.ನವೀನ್‌, ಸಿಆರ್‌ಸಿ ಸೆಂಟರ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next