Advertisement

ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ

06:33 PM Aug 08, 2021 | Team Udayavani |

ದಾವಣಗೆರೆ: ಕೋವಿಡ್‌-19 ಸಾಂಕ್ರಾಮಿಕ ಸೋಂಕು ನಿಯಂತ್ರಣಕ್ಕಾಗಿ ಮತ್ತು ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಜನಜಂಗುಳಿ ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಪ್ರತಿ ದಿನ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.

Advertisement

2021ರ ಜುಲೈ 3 ಹಾಗೂ 18ರಂದು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಈ ಅವಧಿಯಲ್ಲಿ ಅನುಮತಿಸಿದ ಚಟುವಟಿಕೆಗೆ ಮಾತ್ರ ಅವಕಾಶವಿರುತ್ತದೆ. ಈ ಆದೇಶ ಆ. 16 ರವರೆಗೆ ಅನ್ವಯವಾಗಲಿದೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಿಂದ ಬರುವ ವ್ಯಕ್ತಿಗಳ ಮೇಲೆ ವಿಶೇಷ ಕಣ್ಗಾವಲು ಕ್ರಮಗಳಿಗೆ ಸಂಬಂಧಿಸಿದಂತೆ ಆದೇಶಗಳು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

ದೇವಾಲಯ ಪ್ರವೇಶಕ್ಕೆ ನಿರ್ಬಂಧ: ಕೋವಿಡ್‌ -19 ಸಂಭಾವ್ಯ ಮೂರನೇ ಅಲೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಆ. 31 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಜಿಲ್ಲೆಯ ಎಲ್ಲ ಮುಂಜರಾಯಿ ದೇವಲಾಯಗಳು ಮತ್ತು ಖಾಸಗಿ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ಶನಿವಾರ ಮತ್ತು ಭಾನುವಾರಗಳಂದು ಭಕ್ತಾದಿಗಳ ದೇಗುಲ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಎಲ್ಲ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಇತರೆ ಜನದಟ್ಟಣೆಯಿಂದ ಕೂಡಿದ ಕಾರ್ಯಕ್ರಮಗಳು ಹಾಗೂ ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಮುಂಬರುವ ಹಬ್ಬದ ದಿನಗಳಲ್ಲಿ ಜಿಲ್ಲೆಯಲ್ಲಿ ಎಲ್ಲ ದೇವಾಲಯಗಳಲ್ಲಿ ಜನದಟ್ಟಣೆಯನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ದೇವಸ್ಥಾನಗಳಿಗೆ ತೆರಳುವವರು ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಕೋವಿಡ್‌ ನಿಯಂತ್ರಣ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.

ಭಕ್ತಾದಿಗಳಿಗೆ ದೇವಾಲಯದ ಪ್ರವೇಶ ಹಾಗೂ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಜಾತ್ರೆ, ಮೆರವಣಿಗೆ, ದೇವಾಲಯಗಳಲ್ಲಿ ಉತ್ಸವ, ಸೇವೆ, ಮಡಿ, ಪ್ರಸಾದ, ದಾಸೋಹ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಯಾವುದೇ ವ್ಯಕ್ತಿ ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಸಾಂಕ್ರಾಮಿಕ ಕಾಯ್ದೆಗಳನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next