Advertisement

ವರಾಹ ಶಾಲೆ ನಿರ್ಮಾಣಕ್ಕೆ ಅಗತ್ಯ ಕ್ರಮ

06:09 PM Jul 21, 2021 | Team Udayavani |

ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹಂದಿಗಳ ಹಾವಳಿ ನಿಯಂತ್ರಣ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಹಂದಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿ ಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಮಂಗಳವಾರ ಹಂದಿಗಳ ಸ್ಥಳಾಂತರಕ್ಕೆ ಸಂಬಂಧಿ  ಸಿದಂತೆ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ತೀವ್ರವಾಗಿರುವ ಹಂದಿಗಳ ಹಾವಳಿಯನ್ನು ಶೀಘ್ರ ನಿವಾರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದರು.

Advertisement

ಅಲ್ಲದೆ ಸಂಸದರು ಸೇರಿದಂತೆ ವಿವಿಧ ಜನಪ್ರತಿನಿಧಿ ಗಳಿಂದಲೂ ಒತ್ತಾಯ ಇದೆ. ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ ಹಂದಿಗಳ ಸ್ಥಳಾಂತರ ಮಾಡಬೇಕು. ಜಿಲ್ಲಾಡಳಿತದಿಂದ ಜಾಗ ಇತರೆ ಸೌಲಭ್ಯ ನೀಡಲಾಗುವುದು ಎಂದರು. ಹಂದಿ ಹಾವಳಿಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಸ್ತೆಗಳಲ್ಲಿ ಬಿಡಾಡಿ ಹಂದಿಗಳ ಓಡಾಟದಿಂದಾಗಿ ಸಾಕಷ್ಟು ಅಪಘಾತಗಳೂ ಸಂಭವಿಸಿವೆ. ಅಲ್ಲಲ್ಲಿ ಮಕ್ಕಳ ಮೇಲೂ ಹಂದಿಗಳು ದಾಳಿ ಮಾಡಿ ಗಾಯಗೊಳಿಸಿರುವ ಬಗ್ಗೆ ಸಾರ್ವಜನಿಕರಿಂದ ಬಹಳಷ್ಟು ದೂರುಗಳಿವೆ. ಹಂದಿಗಳ ಹಾವಳಿಯನ್ನು ತಪ್ಪಿಸಲು ವರಾಹ ಶಾಲೆ ನಿರ್ಮಾಣಕ್ಕೆ ಜಿಲ್ಲಾಡಳಿತ ಅಂತಿಮ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು. ವರಾಹ ಶಾಲೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಹಂದಿ ಮಾಲೀಕರ ಸಂಘದವರಿಗೆ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಅವರು ಬಂದಿಲ್ಲ. ಹೀಗಾಗಿ ಜಿಲ್ಲಾಡಳಿತದಿಂದಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ವರಾಹ ಶಾಲೆ ನಿರ್ಮಾಣಕ್ಕೆ ಕೆಲವೆಡೆ ಭೂಮಿ ಗುರುತಿಸಲಾಗಿದ್ದು, ಮಹಾನಗರಪಾಲಿಕೆಗೆ ಭೂಮಿ ಹಸ್ತಾಂತರಿಸುವ ಕಾರ್ಯವನ್ನು ತ್ವರಿತಗೊಳಿಸಲಾಗುವುದು.

ಮಹಾನಗರಪಾಲಿಕೆಯಿಂದ ಸುತ್ತಲೂ ಗುಣಮಟ್ಟದ ಕಾಂಪೌಂಡ್‌ ನಿರ್ಮಿಸಿ ನಗರದಲ್ಲಿ ಸಂಗ್ರಹಿಸಲಾಗುವ ಹಸಿ ಕಸವನ್ನು ವರಾಹಶಾಲೆಗೆ ಒದಗಿಸಲು ನಿರ್ಧರಿಸಲಾಗಿದೆ ಎಂದರು. ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಮಾತನಾಡಿ, ನಗರಪಾಲಿಕೆಗೆ ಕಸ ಸಾಗಾಣಿಕೆಗೆ ಸಂಬಂಧಿ ಸಿದ 13 ಹೊಸ ಆಟೋ ಟಿಪ್ಪರ್‌ ಖರೀದಿಸಲಾಗಿದೆ. ಹಸಿ ಕಸ ಸಾಗಾಟಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು. ವರಾಹ ಶಾಲೆಯ ಸುತ್ತಮುತ್ತಲಿನ ಜನ ಅಥವಾ ಹೊಲ, ಜಮೀನುಗಳಿಗೆ ಯಾವುದೇ ತೊಂದರೆ ಆಗದಂತೆ ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಂದಿ ಮಾಲೀಕರು ಜಿಲ್ಲಾಡಳಿತ ಕೈಗೊಳ್ಳುವ ನಿರ್ಧಾರಕ್ಕೆ ಸಹಕಾರ ನೀಡಬೇಕು. ವರಾಹ ಶಾಲೆ ನಿರ್ಮಿಸಿದ ಬಳಿಕ ಹಂದಿಗಳ ಸ್ಥಳಾಂತರಕ್ಕೆ ಮಾಲೀಕರಿಗೆ ಸಮಯ ನಿಗದಿಪಡಿಸಲಾಗುವುದು. ನಿಗದಿತ ಕಾಲಮಿತಿಯೊಳಗೆ ನಗರ ವ್ಯಾಪ್ತಿಯಲ್ಲಿನ ಎಲ್ಲ ಹಂದಿಗಳನ್ನು ವರಾಹಶಾಲೆಗೆ ಸ್ಥಳಾಂತರಿಸಬೇಕು. ಇಲ್ಲದಿದ್ದಲ್ಲಿ, ನಗರದಲ್ಲಿ ಕಂಡುಬರುವ ಹಂದಿಗಳನ್ನು ಮಹಾನಗರಪಾಲಿಕೆಯಿಂದಲೇ ಹಿಡಿದು, ಮಾರಾಟ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್‌ ಮಾತನಾಡಿ, ಹಂದಿಗಳ ಹಾವಳಿ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ನಗರದ ರಸ್ತೆಗಳಲ್ಲಿ ಹಂದಿಗಳ ಓಡಾಟದಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದು ಗಂಭೀರತೆಗೆ ನಿದರ್ಶನವಾಗಿದೆ. ವರಾಹ ಶಾಲೆ ನಿರ್ಮಿಸುವಾಗ ಕಾಂಪೌಂಡ್‌ ಕನಿಷ್ಠ 10 ಅಡಿ ಎತ್ತರವಿರಬೇಕು. ಗುಣಮಟ್ಟದ್ದಾಗಿರಬೇಕು. ಹಂದಿಗಳ ಓಡಾಟಕ್ಕೆ ಸಮರ್ಪಕವಾದ ಸ್ಥಳಾವಕಾಶ ಇರಬೇಕು.

ವರಾಹಶಾಲೆ ಬಳಿ ವಾಸನೆ ಬರುತ್ತದೆ ಎಂಬ ಬಗ್ಗೆ ಆಕ್ಷೇಪಣೆಗಳಿರುತ್ತವೆ. ಹಾಗಾಗಿ ಹಂದಿಗಳ ಸಾಕಾಣಿಕೆಯಲ್ಲಿ ವಾಸನೆ ಬಾರದಂತೆ ವಿದೇಶಗಳಲ್ಲಿ ಕೈಗೊಂಡಿರುವ ವಿಧಾನಗಳನ್ನು ಅರಿತು ಇಲ್ಲಿಯೂ ಅನುಸರಿಸಿದಲ್ಲಿ ವಾಸನೆಯ ಸಮಸ್ಯೆ ಪರಿಹಾರವಾಗಲಿದೆ ಎಂದು ತಿಳಿಸಿದರು. ಮಹಾನಗರ ಪಾಲಿಕೆ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಡಿ. ಗೋಣೆಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next