Advertisement

ಉಚಿತ ಲಸಿಕೆ ವಿತರಣೆಗೆ ಅಪಸ್ವರ ಏಕೆ?

09:46 PM Jul 05, 2021 | Team Udayavani |

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕೊರೊನಾ ಲಸಿಕೆ ಕಾರ್ಯಕ್ರಮ ನಡೆಸುತ್ತಿರುವುದನ್ನು ಸಹಿಸಲಾಗದೆ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌ .ಬಿ. ಮಂಜಪ್ಪ ದೂರಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ 4 ಕೋಟಿ ರೂ. ವೆಚ್ಚದಲ್ಲಿ 60 ಸಾವಿರ ಡೋಸ್‌ ಲಸಿಕೆ ತರಿಸಿ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿಯವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ.

ಸಂಸದ ಜಿ.ಎಂ. ಸಿದ್ದೇಶ್ವರ ಸ್ವಂತ ಖರ್ಚಿನಲ್ಲಿ ಲಸಿಕೆ ತರಿಸಿ ನೀಡಲಿ. ಅದನ್ನು ಕಾಂಗ್ರೆಸ್‌ ಸ್ವಾಗತಿಸುತ್ತದೆ ಎಂದರು. ಸಂಸದರ ಹೇಳಿಕೆಯನ್ನೇ ಸವಾಲಾಗಿ ಸ್ವೀಕರಿಸಿ ಲಸಿಕೆ ತರಿಸಿ ಎಲ್ಲ ವಾರ್ಡ್‌ಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. 90ರ ವಯಸ್ಸಿನಲ್ಲೂ ಶಾಮನೂರು ಶಿವಶಂಕರಪ್ಪನವರೇ ಪ್ರತಿ ವಾರ್ಡ್‌ಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಸಂಸದ ಜಿ.ಎಂ. ಸಿದ್ದೇಶ್ವರ ಅವರು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೇಳುತ್ತಾರೆಯೇ ಹೊರತು ತಮ್ಮ ಸ್ವಂತ ಸಾಧನೆ ಬಗ್ಗೆ ಏನ್ನೂ ಹೇಳುವುದಿಲ್ಲ. ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಲಸಿಕೆ ತಂದು ಜನರಿಗೆ ಕೊಡಲಿ ಎಂದು ಆಗ್ರಹಿಸಿದರು. ಶಾಮನೂರು ಶಿವಶಂಕರಪ್ಪ ಅವರಿಗೆ ಕೆಟ್ಟ ಹೆಸರು ತರುವ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಸಂಸದರ ಬಗ್ಗೆ ಶಾಸಕರು ಹಗುರವಾಗಿ ಮಾತನಾಡಿಲ್ಲ. ಸಂಸದರಾಗಿ ಮಾಡಬೇಕಾದ ಕೆಲಸಗಳ ಬಗ್ಗೆ ಹೇಳಿದ್ದಾರೆ.

ಸಿದ್ದೇಶ್ವರ ಅವರನ್ನು ಅರ್ಧಕ್ಕೆ ಸಚಿವ ಸ್ಥಾನದಿಂದ ಏಕೆ ತೆಗೆದು ಹಾಕಲಾಯಿತು ಎಂಬುದನ್ನು ಹೇಳಬೇಕಾಗಿಲ್ಲ ಎಂದು ಕುಟುಕಿದರು. ಕೆಪಿಸಿಸಿ ಸದಸ್ಯ ಬಿ. ದುಗ್ಗಪ್ಪ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು 1969ರಲ್ಲೇ ದಾವಣಗೆರೆಯ ಗಾಂಧಿನಗರದ ಬಳಿ 25 ಎಕರೆ, ಆಲೂರು ಬಳಿ ನೂರಾರು ಎಕರೆ ಜಮೀನು ಹೊಂದಿದ್ದರು. ಯಶವಂತರಾವ್‌ ಜಾಧವ್‌ಗೆ ಈ ವಿಚಾರ ಗೊತ್ತಿಲ್ಲದೆ ಸುಳ್ಳು ಆರೋಪ ಮಾಡುತ್ತಿದ್ದಾರೆ.

Advertisement

ಐದು ಬಾರಿ ಸೋತು ದಾದಾಗಿರಿ, ಗೂಂಡಾಗಿರಿ ಮಾಡುವವರಿಗೆ ಬಿಜೆಪಿಯವರು ಸ್ಥಾನಮಾನ ನೀಡುತ್ತಿದ್ದಾರೆ. ಲಸಿಕೆ ನೀಡುವ ಬಗ್ಗೆ ಹೊಟ್ಟೆಉರಿಯಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ದಾವಣಗೆರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆಗುವುದನ್ನು ಮೊದಲಿಗೆ ಸ್ವಾಗತಿಸಿದವರೇ ಶಾಮನೂರು ಶಿವಶಂಕರಪ್ಪನವರು. ಸರ್ಕಾರಿ ವೈದ್ಯಕೀಯ ಕಾಲೇಜು ಆಗುವುದರಿಂದ ಅವರಿಗೆ 80 ಕೋಟಿ ನಷ್ಟವೇನೂ ಆಗುವುದಿಲ್ಲ ಎಂದರು. ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌ ಮಾತನಾಡಿ, ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು “ಭೀಮಸಮುದ್ರದ ಭೀಮ’ ಎನ್ನಲಾಗುತ್ತದೆ.

ನಮ್ಮ ಪ್ರಕಾರ ಅವರು ಭೀಮ ಅಲ್ಲ, ಧುರ್ಯೋಧನ. ಭೀಮ ಆಗಿದ್ದರೆ ನಕುಲ, ಸಹದೇವರಂತೆ ಬೇರೆಯವರ ಮೂಲಕ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಸುಳ್ಳು ಆರೋಪ ಮಾಡಿಸುತ್ತಿರಲಿಲ್ಲ. ಮಾಡುವುದಿದ್ದರೆ ಅವರೇ ನೇರವಾಗಿ ಆರೋಪ ಮಾಡಲಿ ಎಂದು ತಾಕೀತು ಮಾಡಿದರು. 25 ವರ್ಷಗಳಿಂದ ಸಂಸದರಾಗಿರುವ ಅವರಿಂದ ಜಿಲ್ಲೆಗೆ ಹೆಜ್ಜೆಗುರುತಿನಂತೆ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. 6 ಕೋಟಿ ರೂ. ಖರ್ಚು ಮಾಡಿ 60 ಸಾವಿರ ಲಸಿಕೆ ತರಿಸಿ ಜನರಿಗೆ ಕೊಡಲಿ.

ಲಸಿಕೆ ಕೊಡಿಸುವುದರಲ್ಲಿ ಪೈಪೋಟಿ ಮಾಡಲಿ. ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುವುದನ್ನು ಬಿಡಲಿ. ಯಶವಂತರಾವ್‌ ಜಾಧವ್‌ ಬಳಿ ಹಗರಣಗಳ ಬಗ್ಗೆ ದಾಖಲೆ, ಆಧಾರಗಳಿದ್ದರೆ ಸೋಮವಾರವೇ ಬಿಡುಗಡೆ ಮಾಡಲಿ. ನಾವು ಎಲ್ಲವನ್ನೂ ಎದುರಿಸಲಿಕ್ಕೆ ಸಿದ್ಧ ಎಂದು ಸವಾಲು ಹಾಕಿದರು. ದೂಡಾ ಮಾಜಿ ಅಧ್ಯಕ್ಷ ಮಾಲತೇಶ್‌ ಜಾಧವ್‌ ಮಾತನಾಡಿ, ಸಂಸದ ಸಿದ್ದೇಶ್ವರ್‌ ಬಗ್ಗೆ ಮಾತನಾಡಿದದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಯಶವಂತರಾವ್‌ ಜಾಧವ್‌ ಹೇಳಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಮಾತನಾಡಿದರೆ ಡಬ್ಬಲ್‌ ಪ್ರಮಾಣದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ಎ. ನಾಗರಾಜ್‌, ಬಿ.ಎಚ್‌. ಉದಯಕುಮಾರ್‌, ವಿನಾಯಕ ಪೈಲ್ವಾನ್‌, ಕೆ.ಜಿ. ಶಿವಕುಮಾರ್‌, ಸೀಮೆಎಣ್ಣೆ ಮಲ್ಲೇಶ್‌, ಅಯೂಬ್‌ ಪೈಲ್ವಾನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next