Advertisement
ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚಾಗಿ ಶಾಲೆಗಳಲ್ಲಿ ಭೌತಿಕ ತರಗತಿ ನಡೆಸಲು ಸಾಧ್ಯವಾಗದೇ ಇದ್ದರೆ ಶಿಕ್ಷಕರು ತಂತ್ರಜ್ಞಾನದೊಂದಿಗೆ ಬಹುಮಾಧ್ಯಮಗಳನ್ನು ಬಳಸಿಕೊಂಡು ಮಕ್ಕಳ ನಿರಂತರ ಕಲಿಕೆಗೆ ಶ್ರಮಿಸಲು ಪೂರಕವಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವಿವಿಧ ಚಟುವಟಿಕೆ ರೂಪಿಸಿಕೊಂಡಿದೆ.
Related Articles
Advertisement
ಕರೆ ಮೂಲಕ ಸಂಪರ್ಕ: ಶಾಲೆಗಳಲ್ಲಿ ಶಿಕ್ಷಕರವಾರು ಹಂಚಿಕೆಮಾಡಲಾದ ದತ್ತು ಮಕ್ಕಳಿಗೆ ದೂರವಾಣಿಯ ಮೂಲಕ ಪ್ರತಿದಿನ ಶಿಕ್ಷಕರು ಕರೆ ಮಾಡುವ ಮೂಲಕ ಸಂಪರ್ಕ ಸಾಧಿಸಬೇಕು. ಶಾಲೆಗಳಲ್ಲಿರುವ ದೈಹಿಕ ಶಿಕ್ಷಣ ಹಾಗೂ ವೃತ್ತಿ ಶಿಕ್ಷಕರ ಸೇವೆಯನ್ನು ಬಳಸಿಕೊಂಡು ಅವರೂ ಸಹ ಪ್ರತಿ ಎರಡುಗಳಿಗೆ ಒಂದು ಸಲ ರೊಟೇಶನ್ ಆಧಾರದ ಮೇಲೆ ಬೆಳಿಗ್ಗೆ ಅಥವಾ ಸಾಯಂಕಾಲ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ದೂರವಾಣಿ ಕರೆ ಮಾಡುವ ಮೂಲಕ ನಿರಂತರ ಸಂಪರ್ಕ ಸಾಧಿಸಬೇಕು. ಇದು ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಜಾಗ್ರತೆಯನ್ನು ಮೂಡಿಸಲು ಸಹಕಾರಿಯಾಗುತ್ತದೆ . ದೂರವಾಣಿಯ ಮೂಲಕ ಆಗಿಂದಾಗ್ಗೆ ಪಾಲಕರನ್ನು ಸಂಪರ್ಕಿಸಿ ಮಕ್ಕಳ ಕಲಿಕೆಯ ಬಗ್ಗೆ ಹಿಮ್ಮಾಹಿತಿ ಪಡೆದು ಅಗತ್ಯವಿದ್ದಲ್ಲಿ ಸಲಹೆಗಳನ್ನು ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ.
ಎಲ್ಲ ಮುಖ್ಯ ಶಿಕ್ಷಕರು ವಿಷಯವಾರು ಶಿಕ್ಷಕರೊಂದಿಗೆ ನಿಯಮಿತವಾಗಿ ವರ್ಚುಯಲ್ ಸಭೆಗಳನ್ನು ನಡೆಸಿ ಪರಸ್ಪರ ಸಮಾಲೋಚನೆ ನಡೆಸಬೇಕು. ಅವರಿಂದ ಹಿಮ್ಮಾಹಿತಿ ಪಡೆದು ಮಕ್ಕಳ ಕಲಿಕೆಗೆ ಪೂರಕವಾದ ನಾವೀನ್ಯತೆಯಿಂದ ಕೂಡಿದ ಉಪಕ್ರಮಗಳನ್ನು ನಿರ್ವಹಿಸಲು ಸೂಕ್ತ ಸಲಹೆ ನೀಡಬೇಕು. ಈ ವಿಷಯವಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ಆರೂ ವಿಷಯಗಳ ಶಿಕ್ಷಕರಿಗೆ ಮಾರ್ಗದರ್ಶನ ಮಾಡಲಾಗಿದೆ.
ವಾಟ್ಸ್‌ಆ್ಯಪ್‌ನಲ್ಲೇ ಸ್ಪರ್ಧೆ: ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರ ಲೇಖನ ಐದು ಅಂಕಗಳಿಗೆ ಮತು ಪ್ರಬಂಧ ನಾಲ್ಕು ಅಂಕಗಳಿಗೆ ನಿಗದಿಯಾಗಿದ್ದು ಸ್ಪರ್ಧೆಗಳನ್ನು ವಾಟ್ಸ್ ಆ್ಯಪ್ ಗ್ರೂಪ್ ಮೂಲಕ ಏರ್ಪಡಿಸಲು ಯೋಜಿಸಬಹುದಾಗಿದೆ. ಪೂರ್ವಸಿದ್ಧತೆಗಾಗಿ ಗೃಹಾಧಾರಿತ ಆನ್‌ಲೈನ್ ಕ್ವಿಜ್ ಪರೀಕ್ಷೆಗಳನ್ನು ನಡೆಸಬೇಕು. ಇದರಿಂದ ಮಕ್ಕಳಲ್ಲಿ ಕಲಿಕಾ ಏಕತಾನತೆಯನ್ನು ಹೋಗಲಾಡಿಸಿ ಕಲಿಕೆಯಲ್ಲಿ ಆಸಕ್ತಿ ಮೂಡಿಸಬಹುದೆಂದು ನಿರೀಕ್ಷಿಸಲಾಗಿದೆ. ಅಲ್ಲದೆ ತಂತ್ರಜ್ಞಾನ ಬಳಕೆಯಲ್ಲಿ ಪರಿಣಿತಿ ಹೊಂದಿರುವ ಹಾಗೂ ಉತ್ಸಾಹಿ ಶಿಕ್ಷಕರು ತಂಡಗಳಲ್ಲಿ ಸಂಪನ್ಮೂಲವನ್ನು ಹಂಚಿಕೊಳ್ಳುವ ಮೂಲಕ ಶಿಕ್ಷಕರು ತಮ್ಮ ಶಾಲಾ ಮಕ್ಕಳೊಂದಿಗೆ ನಿರಂತರ ಸಂಪರ್ಕ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನಗಳು ನಿರಂತರವಾಗಿ ನಡೆಯುವಂತೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.