ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿವೆ ಎಂಂದು ಆರೋಪಿಸಿ ಭಾನುವಾರ ಮಾಯಕೊಂಡ ಹಾಗೂ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಸಾಗರಪೇಟೆಯ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ| ವೈ. ರಾಮಪ್ಪ ಮಾತನಾಡಿ, ಕೊರೊನಾ, ಲಾಕ್ ಡೌನ್‌ನಂತಹ ಸಂಕಷ್ಟದ ಸಂದರ್ಭವಿದು. ಇದರ ನಡುವೆಯೂ ಜನರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ, ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ವಿದ್ಯುತ್ ಬೆಲೆ ಏರಿಕೆಯ ವಿರುದ್ಧ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯುಪಿಎ ಸರ್ಕಾರದ ಅವ ಧಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಒಂದರೆಡು ರೂಪಾಯಿ ಜಾಸ್ತಿಯಾದಾಗ ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದರು. ಆದರೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 42ಕ್ಕೂ ಹೆಚ್ಚು ಬಾರಿ ಬೆಲೆ ಏರಿಕೆ ಮಾಡಿದೆ. ಇಂಧನ ಬೆಲೆಯನ್ನು ಹೆಚ್ಚಿಸಿ 21 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ.
ಕೇಂದ್ರ ಸರ್ಕಾರ ತನ್ನ ಅದಾಯ ಹೆಚ್ಚಿಸಿಕೊಳ್ಳಲು ಜನರು ಬಳಸುವ ದೈನಂದಿನ ಪದಾರ್ಥಗಳ ಬೆಲೆಯನ್ನು ಹೆಚ್ಚಿಸುತ್ತಾ, ಜನರ ರಕ್ತ ಹೀರುವ ಕೃತ್ಯಕ್ಕೆ ಮುಂದಾಗಿದೆ ಎಂದು ದೂರಿದರು. ಇಡೀ ದೇಶಾದ್ಯಂತ ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿರುವ ಕಾರಣ ಇಂಧನ ಬೆಲೆ ಏರಿಕೆಯಾಗುತ್ತಿದೆ ಎಂಬ ಕೇಂದ್ರ ಸರ್ಕಾರದ ಸಮರ್ಥನೆ ಅತ್ಯಂತ ಖಂಡನೀಯ. ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ಕೊಟ್ಟು ಜನಸಾಮಾನ್ಯನ ಬದುಕು ಹಸನಗೊಳಿಸಿದಂತಹ ಕಾಂಗ್ರೆಸ್ ಪಕ್ಷದ ಸರ್ಕಾರ ಇಂತಹ ಹೀನ ಕೃತ್ಯಗಳಿಗೆ ಕೈಹಾಕಿರಲಿಲ್ಲ ಎಂದರು.
ಅಂದಿನ ಪ್ರಧಾನಮಂತ್ರಿ ಡಾ| ಮನಮೋಹನ್ ಸಿಂಗ್ ಅÊಧಿಯಲ್ಲಿ ಜಾರಿಗೆ ಬಂದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜನರು ಹಾಗೂ ವಲಸೆ ಕಾರ್ಮಿಕರಿಗೆ ಜೀವ ಸೆಲೆಯಾಗಿ ಮಾರ್ಪಟ್ಟಿತು. ಈ ಯೋಜನೆಯನ್ನು ಗುಜರಾತಿನ ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಶ್ಲಾಘಿ ಸಿದ್ದಾರೆ ಎಂಬುದನ್ನು ಕೇಂದ್ರ ಸರ್ಕಾರ ನೆನಪಿಟ್ಟುಕೊಳ್ಳಬೇಕೆಂದು ತಿಳಿಸಿದರು.
ಕೋವಿಡ್ ನಿರ್ವಹಣೆಯಲ್ಲಿ ಭಾರತದಲ್ಲಿ ನಾಯಕತ್ವದ ಬಿಕ್ಕಟ್ಟು ಮತ್ತು ಪ್ರಧಾನಮಂತ್ರಿಯ ಆಡಳಿತದ ಅಸಮರ್ಥತೆಯನ್ನು ಇಡೀ ಜಗತ್ತು ಕಂಡಿದೆ. ಜಗತ್ತಿನ ಆರೋಗ್ಯ ತಜ್ಞರು ಕೊರೊನಾ ಎಚ್ಚರಿಕೆಯ ಸಂದೇಶ ನೀಡಿದ್ದರೂ ಸಹ ವರದಿ ಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದೆ.
ಮಾರಣಹೋಮದ ಮೂಲಕ ಶೋಷಣೆಯ ಶೃಂಗಾರವನ್ನು ಸೃಷ್ಟಿಸಿದಂತಹ ಏಕೈಕ ಸರ್ಕಾರ ನರೇಂದ್ರ ಮೋದಿಯವರ ಸರ್ಕಾರ ಎಂದು ಕುಟುಕಿದರು. ಆನಗೋಡು ಕ್ಷೇತ್ರದ ಜಿಪಂ ಸದಸ್ಯ ಕೆ.ಎಸ್. ಬಸವಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್, ಹೂವಿನಮಾಡು ಚನ್ನಬಸಪ್ಪ, ಜಹೀರ್ ಪಾಟೀಲ್, ಸೈಯದ್, ರಮೇಶ್, ಓಂಕಾರ ನಾಯ್ಕ, ಹಾಲೇಶ್, ಚಂದ್ರಪ್ಪ ಇತರರು ಇದ್ದರು.