Advertisement

ಕೊರೊನಾ ಕೊಡವಿ ಮೇಲೆದ್ದ ಅನ್ನ ದಾತರು

08:58 PM Jun 11, 2021 | Team Udayavani |

„ರಾ. ರವಿಬಾಬು

Advertisement

ದಾವಣಗೆರೆ: “ಮೆಕ್ಕೆಜೋಳ ಕಣಜ’ ಖ್ಯಾತಿಯ ದಾವಣಗೆರೆ ಜಿಲ್ಲೆಯಲ್ಲಿ ಈ ವರ್ಷ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಭರ್ಜರಿಯಾಗಿಯೇ ಪ್ರವೇಶ ನೀಡಿದೆ. ಈ ಹಿನ್ನೆಲೆಯಲ್ಲಿ ರೈತರು ಕೊರೊನಾ ಸಂಕಷ್ಟದ ನಡುವೆಯೂ ಕೃಷಿ ಚಟುವಟಿಕೆಗಳಲ್ಲಿ ಅತ್ಯುತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಜ.1 ರಿಂದ ಜೂ. 5 ರವರೆಗೆ ಜಿಲ್ಲೆಯಲ್ಲಿ 120 ಮಿಲಿ ಮೀಟರ್‌ ವಾಡಿಕೆ ಮಳೆ ಆಗಬೇಕಿತ್ತು.

203 ಮಿಲಿ ಮೀಟರ್‌ ಮಳೆಯಾಗಿದೆ. 70 ಮಿಮೀ ಹೆಚ್ಚು ಮಳೆಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಬಿತ್ತನೆಗೆ ಹೊಲಗಳನ್ನು ಸಿದ್ಧಪಡಿಸಿಕೊಂಡಿದ್ದವರು ಈಗಾಗಲೇ ಬಿತ್ತನೆ ಪ್ರಾರಂಭ ಮಾಡಿದ್ದಾರೆ. ಇನ್ನು ಕೆಲವೆಡೆ ಹೊಲಗಳನ್ನು ಹಸನು ಮಾಡಿಕೊಳ್ಳಲಾಗುತ್ತಿದೆ. ಮಳೆರಾಯನ ಕೃಪೆಯಿಂದ ಕೃಷಿ ಚಟುವಟಿಕೆ ಗರಿಗೆದರಿದೆ. ಜಿಲ್ಲೆಯಲ್ಲಿ ಒಟ್ಟು 88,646 ಹೆಕ್ಟೇರ್‌ ನೀರಾವರಿ, 1,55,234 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶ ಒಳಗೊಂಡಂತೆ 2,43,698 ಹೆಕ್ಟೇರ್‌ನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಗುರಿ ಇದೆ. ಮಳೆ ಚೆನ್ನಾಗಿ ಆಗಿರುವುದರಿಂದ ಈವರೆಗೆ 8,002 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಮಳೆಯಾಶ್ರಿತ 7618 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿರುವುದು ಗಮನಾರ್ಹ.

ನಿರೀಕ್ಷೆ ಮೀರಿ ಮೆಕ್ಕೆಜೋಳ ಬಿತ್ತನೆ ಸಾಧ್ಯತೆ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 1,22,108 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಇದೆ. ಈವರೆಗೆ 6,473 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ದಾವಣಗೆರೆ ತಾಲೂಕಿನಲ್ಲಿ 31,050 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಪೈಕಿ ಈವರೆಗೆ 1,628 ಹೆಕ್ಟೇರ್‌ನಲ್ಲಿ ಬಿತ್ತನೆ ಮುಗಿದಿದೆ. ಹರಿಹರದಲ್ಲಿ 7,623 ಹೆಕ್ಟೇರ್‌ ಗುರಿಯಲ್ಲಿ 256, ಜಗಳೂರಿನಲ್ಲಿ 33,460 ಹೆಕ್ಟೇರ್‌ ಗುರಿ ಪೈಕಿ 1,635, ಹೊನ್ನಾಳಿಯಲ್ಲಿ 12 ಸಾವಿರ ಹೆಕ್ಟೇರ್‌ ಗುರಿಯಲ್ಲಿ 628, ಚನ್ನಗಿರಿಯಲ್ಲಿ 24,585 ಹೆಕ್ಟೇರ್‌ ಗುರಿ ಪೈಕಿ 1,784, ನ್ಯಾಮತಿಯಲ್ಲಿ 13,650 ಹೆಕ್ಟೇರ್‌ ಗುರಿಯಲ್ಲಿ 542 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಮೆಕ್ಕೆಜೋಳ ಬಿತ್ತನೆಗೂ ಇನ್ನೂ ಕಾಲಾವಕಾಶ ಇರುವುದರಿಂದ ನಿಗದಿತ ಗುರಿಗಿಂತಲೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಲಿದೆ ಎಂದು ಅಂದಾಜಿಸಲಾಗಿದೆ.

ಭದ್ರಾ ಅಚ್ಚುಕಟ್ಟು ಹೊಂದಿರುವ ಜಿಲ್ಲೆಯಲ್ಲಿ ಭತ್ತ ಸಹ ಪ್ರಮುಖ ಬೆಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 65,847 ಹೆಕ್ಟೇರ್‌ನಲ್ಲಿ ಗುರಿ ಇದೆ. ಈಗ ರೈತರು ಬೇಸಿಗೆ ಹಂಗಾಮು ಮುಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಾಟಿ ಕಾರ್ಯ ಪ್ರಾರಂಭಿಸಲಿದ್ದಾರೆ. ಜಿಲ್ಲೆಯಲ್ಲಿ 2,400 ಹೆಕ್ಟೇರ್‌ನಲ್ಲಿ ಜೋಳ, 7,295 ಹೆಕ್ಟೇರ್‌ನಲ್ಲಿ ರಾಗಿ, 16 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ, 13,770 ಹೆಕ್ಟೇರ್‌ನಲ್ಲಿ ಶೇಂಗಾ, 5,692 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆ ಗುರಿ ಇದೆ. ಬಿತ್ತನೆ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ.

Advertisement

ಅಗತ್ಯ ದಾಸ್ತಾನು: ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಅಗತ್ಯ ದಾಸ್ತಾನಿದೆ. 15,105 ಕ್ವಿಂಟಲ್‌ ಭತ್ತದ ಬೀಜದ ಬೇಡಿಕೆ ಇದ್ದು, 16,750 ಕ್ವಿಂಟಲ್‌ ಭತ್ತದ ಬೀಜ ದಾಸ್ತಾನಿದೆ. 19,108 ಕ್ವಿಂಟಲ್‌ ಮೆಕ್ಕೆಜೋಳದ ಬೀಜದ ಬೇಡಿಕೆಗೆ 19,288 ಕ್ವಿಂಟಲ್‌ ದಾಸ್ತಾನಿದೆ. 4,999 ಕ್ವಿಂಟಲ್‌ ಶೇಂಗಾ ಬೀಜಕ್ಕೆ ಬೇಡಿಕೆಯಿದ್ದು, 5100 ಕ್ವಿಂಟಲ್‌ ದಾಸ್ತಾನಿದೆ. ರಾಗಿ, ಜೋಳ, ತೊಗರಿ, ಹೆಸರು, ಅಲಸಂದೆ, ಸೂರ್ಯಕಾಂತಿ, ಹತ್ತಿ ಸೇರಿದಂತೆ ಒಟ್ಟು 40,521 ಕ್ವಿಂಟಲ್‌ ಬಿತ್ತನೆ ಬೀಜ ಬೇಡಿಕೆಗೆ ಒಟ್ಟು 46,922 ಕ್ವಿಂಟಲ್‌ ಬಿತ್ತನೆ ಬೀಜಗಳ ದಾಸ್ತಾನು ಇದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 29,345 ಮೆಟ್ರಿಕ್‌ ಟನ್‌ ರಸಗೊಬ್ಬರ ವಿತರಿಸಲಾಗಿದೆ.

19,558 ಮೆಟ್ರಿಕ್‌ ಟನ್‌ ಯೂರಿಯಾ, 1604 ಮೆ.ಟನ್‌ ಡಿಎಪಿ, 17,162 ಮೆ. ಟನ್‌ ಎನ್‌ಪಿಕೆ ಕಾಂಪ್ಲೆಕ್ಸ್‌, 2,474 ಮೆ. ಟನ್‌ ಎಂಒಪಿಪಿ ಸೇರಿದಂತೆ ಒಟ್ಟು 40,798 ಮೆಟ್ರಿಕ್‌ ಟನ್‌ ರಸಗೊಬ್ಬರ ಸಂಗ್ರಹವಿದೆ. ಜೂನ್‌ ಮಾಹೆಯಲ್ಲಿ 13 ಸಾವಿರ ಮೆಟ್ರಿಕ್‌ ಟನ್‌ ಯೂರಿಯಾ, 3,850 ಮೆ.ಟನ್‌ ಡಿಎಪಿ, 1,200 ಮೆ.ಟನ್‌ ಎಂಒಪಿ, 14,025 ಮೆಟ್ರಿಕ್‌ ಟನ್‌ ಕಾಂಪ್ಲೆಕ್ಸ್‌ ರಸಗೊಬ್ಬರ ಜಿಲ್ಲೆಗೆ ಸರಬರಾಜು ಆಗಲಿದೆ.

30 ಕೇಂದ್ರಗಳಲ್ಲಿ ಬೀಜ-ಗೊಬ್ಬರ ಮಾರಾಟ: ಜಿಲ್ಲೆಯಲ್ಲಿ 20 ರೈತ ಸಂಪರ್ಕ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 10 ಹೆಚ್ಚುವರಿ ವಿತರಣಾ ಕೇಂದ್ರಗಳನ್ನು ಒಳಗೊಂಡಂತೆ 30 ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಪ್ರಾರಂಭಿಕ ಹಂತದಲ್ಲಿ ವರುಣನ ಕೃಪೆಯಾಗಿದೆ. ಇದರಿಂದ ಸಂತಸಗೊಂಡಿರುವ ರೈತರು ಖುಷಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಪತ್ತು ಪ್ರಾಧಿಕಾರ ರಚನೆ

ಜಿಲ್ಲೆಯ ಜೀವನದಿ ತುಂಗಭದ್ರೆ 100 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಹರಿಯುತ್ತದೆ. ಮಲೆನಾಡು, ಮಳೆಯಾಶ್ರಿತ ಪ್ರದೇಶ ಮತ್ತು ಭದ್ರಾ ಜಲಾಶಯಗಳಿಂದ ನೀರು ಹರಿಸಿದ ಸಂದರ್ಭದಲ್ಲಿ ಅಪಾಯದ ಮಟ್ಟ ಮೀರಿ ಹರಿಯುವ ತುಂಗಭದ್ರೆ ಭಾರೀ ಅಪಾಯ ಉಂಟು ಮಾಡಿರುವ ಉದಾಹರಣೆ ಇಲ್ಲ. ಹೊನ್ನಾಳಿಯ ಬಾಲರಾಜ್‌ ಘಾಟ್‌, ಹರಿಹರದ ಗಂಗಾನಗರ, ಗುತ್ತೂರು ಮುಂತಾದ ಪ್ರದೇಶಕ್ಕೆ ನೀರು ನುಗ್ಗುತ್ತದೆ. ಭಾರೀ ಪ್ರವಾಹ ತಲೆದೋರದೇ ಹೋದರೂ ಎದುರಾಗುವ ಅವಘಡಗಳ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ರಚಿಸಲಾಗಿದೆ. ವಿಪತ್ತು ಸಂದರ್ಭದಲ್ಲಿ ಅತೀ ಅಗತ್ಯ ಪರಿಹಾರ ಕಾರ್ಯಗಳ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 17.28 ಕೋಟಿ ರೂ. ಅನುದಾನ ಲಭ್ಯ ಇದೆ.

Advertisement

Udayavani is now on Telegram. Click here to join our channel and stay updated with the latest news.

Next