ಹೊನ್ನಾಳಿ: ನನ್ನ ಬಳಿ ಇರುವುದು ಯಾವುದೋ ಕಾಮಗಾರಿಗಳಿಗೆ ಸಹಿ ಮಾಡಿಸಿದ ಪತ್ರವಲ್ಲ, ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುವಂತೆ 65ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿದ ಪತ್ರ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಿ ಸಂಗ್ರಹದ ಬಗ್ಗೆ ಹುಲಿವೇಷ ಎಂದೆಲ್ಲ ಮಾತನಾಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಚುನಾವಣಾ ಪೂರ್ವದಲ್ಲಿ ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ನನ್ನನ್ನು ಯಡಿಯೂರಪ್ಪ ವಿರುದ್ಧ ಎತ್ತಿ ಕಟ್ಟಲು ಪ್ರಯತ್ನಿಸಿದ್ದು ನಾನಿನ್ನೂ ಮರೆತಿಲ್ಲ. ಆಡಳಿತ ಪಕ್ಷದ ಸಚಿವರಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಯಾವ ಕಾರಣಕ್ಕೆ? ನಾವು ಏನಾದರೂ ಮಾತನಾಡಿದರೆ ವರಿಷ್ಠರು ಸಹಿಸಲ್ಲ ಎಂದು ಹೇಳಿದ್ದೀರಿ.
ನಮಗೊಂದು ನ್ಯಾಯ, ನಿಮಗೊಂದು ನ್ಯಾಯಾನಾ? ವಿನಾಕಾರಣ ಹುಲಿಯಾಟ, ಅರಿವೆ ಹಾವು, ದೊಂಬರಾಟ ಎಂದೆಲ್ಲಾ ಹೇಳುತ್ತೀರಲ್ಲಾ, ನನ್ನ ಬಳಿ 65ಕ್ಕೂ ಹೆಚ್ಚು ಜನ ಶಾಸಕರು ಸಹಿ ಮಾಡಿರೋ ಪತ್ರ ಇದೆ. ಶಾಸಕ ಅರವಿಂದ ಬೆಲ್ಲದ ಅವರಿಗೆ ಬೇಕಾದರೆ ಕಳುಹಿಸಿಕೊಡುತ್ತೇನೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನ ತಡೆ ಹಿಡಿದಾಗಲೇ ಯಡಿಯೂರಪ್ಪ ಪರ ಶಾಸಕರು ಸಹಿ ಮಾಡಿದ ಪತ್ರ ಆಗಲೇ ನೀಡಿದ್ದೇನೆ. ಹಾಗಾಗಿ ಈಗ ಅದನ್ನು ತೋರಿಸುವ ಅಗತ್ಯ ಇಲ್ಲ. ಯಡಿಯೂರಪ್ಪ ಪರವಾಗಿ ಶಾಸಕರು ಸಹಿ ಮಾಡಿದ ಪತ್ರವೇ ನನ್ನ ಬಳಿ ಇರೋದು. ಈ ಪತ್ರಕ್ಕೆ ಯಾವ ಸಚಿವರೂ ಸಹಿ ಮಾಡಿಲ್ಲ. ಆದರೆ ಇನ್ನೂ ಸಾಕಷ್ಟು ಜನ ಶಾಸಕರು ಸಹಿ ಮಾಡುವುದಾಗಿ ಹೇಳಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟಾಧ್ಯಕ್ಷರು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಕಳುಹಿಸಲು ಪತ್ರ ಸಿದ್ಧಪಡಿಸಿದ್ದೆವು. ಆದರೆ ರಾಜ್ಯಾಧ್ಯಕ್ಷರು ಈ ಬಗ್ಗೆ ಯಾರೂ ಪ್ರತಿಕ್ರಿಯೆ ನೀಡದಂತೆ ಸೂಚಿಸಿರುವುದರಿಂದ ನಾನು ಪತ್ರವನ್ನು ಯಾರಿಗೂ ತೋರಿಸಿಲ್ಲ ಎಂದರು.