Advertisement

ಸೋಂಕಿತರ ಸಂಪರ್ಕಕ್ಕಿಲ್ಲ ಬ್ರೇಕ್‌; ಹೆಚ್ಚುತ್ತಿದೆ ಕೊರೊನಾ

08:42 PM May 30, 2021 | Team Udayavani |

„ಎಚ್‌.ಕೆ. ನಟರಾಜ

Advertisement

ದಾವಣಗೆರೆ: ಕೊರೊನಾ ಎರಡನೇ ಅಲೆಯ ಅಟ್ಟಹಾಸ ಮಟ್ಟ ಹಾಕಿ ಸೋಂಕು ಹರಡುವಿಕೆಯ ಸರಪಳಿ ಕತ್ತರಿಸಲು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಆದರೆ ಸೋಂಕು ಹರಡುವಿಕೆ ಮಾತ್ರ ನಿಲ್ಲದೇ ಇರುವುದು ಜನರಲ್ಲಿ ಆತಂಕ ಮೂಡಿಸಿದೆ.

ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕಳೆದ ಏಳು ದಿನಗಳಲ್ಲಿ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಸಂಖ್ಯೆ ಪ್ರತಿ ವ್ಯಕ್ತಿಗೆ ಸರಾಸರಿ 20ಕ್ಕೂ ಹೆಚ್ಚಿದೆ. ಕಳೆದ ಏಳು ದಿನಗಳಲ್ಲಿ ಈ ಸಂಖ್ಯೆ ಎಷ್ಟು ಹೆಚ್ಚಾಗಿದೆ ಎಂದರೆ ದಾವಣಗೆರೆ ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಯ ನಗರ- ಪಟ್ಟಣಗಳಲ್ಲಿ ಲಾಕ್‌ಡೌನ್‌ ಅನುಷ್ಠಾನ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು ಸೋಂಕು ಇಳಿಮುಖವಾಗುತ್ತಿದೆ.

ಸೋಂಕಿತರ ಸಂಪರ್ಕಿತರ ಸಂಖ್ಯೆಯೂ ಕಡಿಮೆಯಾಗಿದೆ. ಆದರೆ, ಗ್ರಾಮಾಂತರ ಭಾಗದಲ್ಲಿ ಮಾತ್ರ ಸೋಂಕು ಹೆಚ್ಚುತ್ತಲೇ ಇದೆ. ಗ್ರಾಮೀಣ ಪ್ರದೇಶದಲ್ಲಿ ಜನ ಸೋಂಕಿನ ಬಗ್ಗೆ ಈಗಲೂ ಉದಾಸೀನ ತೋರುತ್ತಿರುವುದೇ ಸಂಪರ್ಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಇದರ ಜತೆಗೆ ಒಂದೇ ಓಣಿಯಲ್ಲಿ ಸಾಲಾಗಿ ಒಟ್ಟೊಟ್ಟಿಗೆ ಇರುವ ಮನೆಗಳು, ದೈಹಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗದಷ್ಟು ಇರುವ ಕಿರಿದಾದ ಓಣಿಗಳು ಸಹ ಕೊರೊನಾ ಹರಡಲು ಸಾಥ್‌ ನೀಡುತ್ತಿವೆ. ಹೀಗಾಗಿ ಗ್ರಾಮಾಂತರ ಪ್ರದೇಶದಲ್ಲಿಯೇ ಸೋಂಕು ಹಾಗೂ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ.

ಸೋಂಕಿನ ಬಗ್ಗೆ ನಿರ್ಲಕ್ಷé: ಕೊರೊನಾ ಸೋಂಕಿನ ಲಕ್ಷಣಗಳಾದ ಶೀತ, ಕೆಮ್ಮು, ಜ್ವರವನ್ನು ಗ್ರಾಮೀಣ ಭಾಗದ ಜನ ಇನ್ನೂ ಸಾಮಾನ್ಯ ರೋಗ ಲಕ್ಷಣ ಎಂದೇ ಭಾವಿಸುತ್ತಿದ್ದು, ಇದರ ಬಗ್ಗೆ ಈಗಲೂ ನಿರ್ಲಕ್ಷé ತೋರುತ್ತಿದ್ದಾರೆ. ಹೀಗಾಗಿಯೇ ಅವರು ಕೊರೊನಾ ತಪಾಸಣೆಗೆ ಮುಂದಾಗುತ್ತಿಲ್ಲ. ತಪಾಸಣೆ ಮಾಡಿಸಿಕೊಂಡು ವರದಿ ಪಾಸಿಟಿವ್‌ ಬಂದರೆ ತಮ್ಮನ್ನು 14 ದಿನ ಕೋಣೆಯಲ್ಲಿ ಕೂಡಿ ಹಾಕುತ್ತಾರೆ.

Advertisement

ನಮ್ಮನ್ನು ನೋಡಲು, ಮಾತನಾಡಿಸಲು ಯಾರೂ ಬರಲ್ಲ ಎಂಬ ಕಾರಣಕ್ಕೂ ಬಹಳ ಜನ ಕೊರೊನಾ ತಪಾಸಣೆಗೆ ಮುಂದೆ ಬರುತ್ತಿಲ್ಲ. ಹೀಗಾಗಿ ಸೋಂಕು ತಗುಲಿದ್ದರೂ ತಪಾಸಣೆ ಮಾಡಿಸಿಕೊಳ್ಳದೆ ಎಲ್ಲೆಡೆ ಓಡಾಡಿ ಸೋಂಕು ಹರಡುತ್ತಲೇ ಇದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಕೃಷಿ ಚಟುವಟಿಕೆಗೆ ಯಾವುದೇ ಅಡ್ಡಿ ಇಲ್ಲದೇ ಇರುವುದರಿಂದ ಸೋಂಕಿತರು ಎಲ್ಲೆಡೆ ಎಗ್ಗಿಲ್ಲದೇ ಓಡಾಡುತ್ತಿದ್ದು ಸೋಂಕು ಒಬ್ಬರಿಂದ ಮತ್ತೂಬ್ಬರಿಗೆ ಹಬ್ಬುತ್ತಲೇ ಇದೆ.

ತಪಾಸಣೆಗೆ ಬಂದರೆ ಓಡ್ತಾರೆ: ಕೊರೊನಾ ಲಕ್ಷಣಗಳಿರುವವರನ್ನು ಹೋಂ ಐಸೋಲೇಷನ್‌ನಲ್ಲಿಡದೆ ಕಡ್ಡಾಯವಾಗಿ ಆರೈಕೆ ಕೇಂದ್ರಗಳಿಗೆ ದಾಖಲಿಸಲು ಸರ್ಕಾರ ಸೂಚಿಸಿದೆ. ಆದರೆ ಹಳ್ಳಿಗಳಲ್ಲಿ ಕೊರೊನಾ ತಪಾಸಣೆಗೆ ಕಾರ್ಯಪಡೆ ತಂಡ ಬಂದಾಗ ಮನೆಯಲ್ಲಿರದೆ ಹೊರಗೆ ಓಡಿ ಹೋಗುತ್ತಿರುವ ಪ್ರಕರಣಗಳೂ ನಡೆದಿವೆ. ಇನ್ನು ಕೆಲವರನ್ನು ಬಲವಂತದಿಂದ ಎಳೆದು ಆರೈಕೆ ಕೇಂದ್ರ ಇಲ್ಲವೇ ಆಸ್ಪತ್ರೆಗೆ ದಾಖಲಿಸಿದ ಉದಾಹರಣೆಗಳೂ ಇವೆ. ಒಟ್ಟಾರೆ ಗ್ರಾಮೀಣ ಪ್ರದೇಶದಲ್ಲಿ ಜನ ತಪಾಸಣೆಗೆ ಮುಂದಾಗದೇ ಇರುವುದು, ಒಟ್ಟೊಟ್ಟಿಗೆ ವಾಸವಾಗಿರುವುದು, ಆರೈಕೆ ಕೇಂದ್ರಗಳಿಗೆ ಹೋಗಲು ನಿರಾಕರಿಸುತ್ತಿರುವುದು ಹಾಗೂ ಸೋಂಕಿತರು ಎಗ್ಗಿಲ್ಲದೇ ಆರೋಗ್ಯವಂತರ ಸಂಪರ್ಕಕ್ಕೆ ಬರುತ್ತಿರುವುದು ಇವೆಲ್ಲದರಿಂದ ಸೋಂಕು ದಿನೇ ದಿನೇ ಕ್ಷಿಪ್ರ ಗತಿಯಲ್ಲಿ ಹೆಚ್ಚುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next