Advertisement

ಸೋಂಕಿತರಿಗೆ ಉಚಿತ ಊಟೋಪಹಾರ ವ್ಯವಸ್ಥೆ

05:27 PM May 12, 2021 | Team Udayavani |

ದಾವಣಗೆರೆ: ಕೋವಿಡ್‌ ಸೋಂಕಿಗೆ ತುತ್ತಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವರ ಮನೆ ಬಾಗಿಲಿಗೆ ಉಚಿತವಾಗಿ ಊಟ, ಉಪಹಾರ ಪೂರೈಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೇಯರ್‌ ಎಸ್‌.ಟಿ. ವೀರೇಶ್‌ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೀಮಿತವಾಗಿ ಪ್ರೇರಣ ಯುವ ಸಂಸ್ಥೆ, ಜಿಲ್ಲಾ ಖಾಸಗಿ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ, ಸೇವಾ ಭಾರತಿ ಮತ್ತು ಭಾರತ ವಿಕಾಸ ಪರಿಷತ್ತು ಸಹಕಾರದಲ್ಲಿ ಈ ಸೇವಾ ಕಾರ್ಯ ನಡೆಸಲಾಗುವುದು ಎಂದರು.

ಸೋಂಕಿತ ಕುಟುಂಬದವರು ಎಸ್‌ಆರ್‌ ಎಫ್‌ ಸಂಖ್ಯೆ ಮತ್ತು ವಿಳಾಸವನ್ನೊಳಗೊಂಡ ಸಂದೇಶವನ್ನು ಮೊ: 99459-77433ಗೆ ಕಳುಹಿಸಬೇಕು ಅಥವಾ ಕರೆ ಸಹ ಮಾಡಬಹುದು. ಬೆಳಗಿನ ಉಪಹಾರಕ್ಕಾಗಿ ಹಿಂದಿನ ದಿನ ರಾತ್ರಿ 7 ರಿಂದ 9:30 ರವರೆಗೆ, ಮಧ್ಯಾಹ್ನದ ಭೋಜನಕ್ಕಾಗಿ ಅದೇ ದಿನ ಬೆಳಗ್ಗೆ 9 ರಿಂದ 11ರವರೆಗೆ, ರಾತ್ರಿ ಊಟಕ್ಕಾಗಿ ಸಂಜೆ 4 ರಿಂದ 6ರ ಒಳಗೆ ಮಾಹಿತಿ ನೀಡಬೇಕು. “ಅನ್ನ ಪರಬ್ರಹ್ಮಂ ಸ್ವರೂಪಂ, ಸೇವೆಯೇ ಮನುಜ ಧರ್ಮ’ ಎಂಬ ಸಂದೇಶದೊಂದಿಗೆ ಕೊರೊನಾ ಸೋಂಕಿಗೆ ಒಳಗಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರಿಗೆ ಸಕಾಲಕ್ಕೆ ಪೌಷ್ಟಿಕ ಆಹಾರವನ್ನು ಮನೆಬಾಗಿಲಿಗೆ ತಲುಪಿಸಲಾಗುವುದು. ಮುಂದಿನ ದಿನಗಳಲ್ಲಿ ಅಗತ್ಯ ದಿನಸಿ ಪದಾರ್ಥಗಳ ಪೂರೈಕೆಯ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಈ ಸತ್ಕಾರ್ಯದಲ್ಲಿ ಕೈ ಜೋಡಿಸುವ ಆಸಕ್ತರು ಮೊ: 99459-77433, 94481-78087 ಸಂಪರ್ಕಿಸಬಹುದು. 10 ಸ್ವಯಂ ಸೇವಕರ ತಂಡ ಸೋಂಕಿತರ ಮನೆ ಬಾಗಿಲಿಗೆ ತಿಂಡಿ, ಊಟ ತಲುಪಿಸಲಿದ್ದಾರೆ. ಕೊರೊನಾದಿಂದ ಆರೋಗ್ಯ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ. ಸ್ವಯಂಸೇವಾ ಸಂಸ್ಥೆಗಳು ಅಗತ್ಯ ನೆರವಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಮಹಾನಗರ ಪಾಲಿಕೆ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌ .ಡಿ. ಗೋಣೆಪ್ಪ, ಜಿಲ್ಲಾ ಖಾಸಗಿ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ ಸಂಘಟನಾ ಕಾರ್ಯದರ್ಶಿ ವೈ.ವಿ. ವಿನಯ್‌, ಪ್ರೇರಣ ಯುವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಹೇಶ್‌ ಶೆಟ್ಟಿ, ಜಯಪ್ರಕಾಶ್‌, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next