Advertisement

ಜನ-ವಾಹನ ಸಂಚಾರ ಮತ್ತೆ ಜೋರು

05:09 PM May 12, 2021 | Team Udayavani |

ದಾವಣಗೆರೆ: ಕೊರೊನಾ ವೈರಸ್‌ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೊರೊನಾ ಕರ್ಫ್ಯೂದ ಎರಡನೇ ದಿನವಾದ ಮಂಗಳವಾರ ದಾವಣಗೆರೆ ನಗರ ಒಳಗೊಂಡಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಎಂದಿನಂತೆ ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಸಮಯದಲ್ಲಿ ಏನು ಬೇಕೋ ಎಲ್ಲವನ್ನೂ ಜನರು ಖರೀದಿ ಮಾಡಿದರು.

Advertisement

ಕೆಲವೆಡೆ ನಿಗದಿತ ಸಮಯಕ್ಕೂ ಮುನ್ನವೇ ಅಂಗಡಿ, ಹೋಟೆಲ್‌, ಗ್ಯಾರೇಜ್‌, ಸಲೂನ್‌, ಸ್ಪಾ, ಬ್ಯೂಟಿಪಾರ್ಲರ್‌, ಎಲೆಕ್ಟ್ರಿಕಲ್‌ ಶಾಪ್‌ ಮುಚ್ಚಲಾಯಿತು. ಔಷಧಿ ಅಂಗಡಿ, ಹಾಲಿನ ಅಂಗಡಿಗಳು ತೆರೆದಿದ್ದವು. ಕೊರೊನಾ ಕರ್ಫ್ಯೂನ ಮೊದಲ ದಿನ ಅಗತ್ಯ ವಸ್ತುಗಳ ಖರೀದಿಗೆಂದು ದೂರದ ಪ್ರದೇಶಗಳಿಗೆ ವಾಹನಗಳನ್ನು ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿತ್ತು, ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ, ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಎರಡನೇ ದಿನ ಸಡಿಲಿಕೆ ನೀಡಿದ್ದರ ಪರಿಣಾಮ ಕೆ.ಆರ್‌. ಮಾರ್ಕೆಟ್‌ ಇತರೆ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಕಂಡು ಬಂದವು. ಗ್ರಾಮೀಣ ಭಾಗದಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಜನರು ನಗರ ಪ್ರದೇಶಕ್ಕೆ ದೌಡಾಯಿಸಿದ್ದರು.

ಕೆ.ಆರ್‌. ಮಾರ್ಕೆಟ್‌ನಲ್ಲಿ ಸಾಮಾನ್ಯ ದಿನಗಳಂತೆ ತರಕಾರಿ, ಹೂವು, ಹಣ್ಣು ಇತರೆ ಅಗತ್ಯ ವಸ್ತುಗಳ ಖರೀದಿ ಭರ್ಜರಿಯಾಗಿ ಇತ್ತು. ಎತ್ತ ನೋಡಿದರೂ ಜನರೋ ಜನ. ಸಾಮಾಜಿಕ ಅಂತರ ಎಂಬುದೇ ಇರಲಿಲ್ಲ. ಕೊರೊನಾದ ಭಯ ಒಂದಿನಿತೂ ಕಾಣಲಿಲ್ಲ. ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ಜನರು ತಲ್ಲೀನರಾಗಿದ್ದರು.

ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಸಮಯ ಮುಗಿದ ನಂತರ ದಾವಣಗೆರೆ ನಗರದ ರಸ್ತೆಗಳಲ್ಲಿ ವಾಹನ, ಜನರ ದಂಡೇ ಕಂಡು ಬಂತು. ಪ್ರತಿ ದಿನದಂತೆ ವಾಹನಗಳ ಸಂಚಾರ ಇತ್ತು. ಕೆಲವು ಕಡೆ ಟ್ರಾμಕ್‌ ಜಾಮ್‌ ಸಹ ಉಂಟಾಯಿತು. ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಸಮಯ ಮುಗಿಯುತ್ತಿದ್ದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಅಂಗಡಿ, ಹೋಟೆಲ್‌ಗ‌ಳ ಬಾಗಿಲು ಮುಚ್ಚುವ ಮೂಲಕ ಕೊರೊನಾ ಕರ್ಫ್ಯೂಗೆ ಸಹಕರಿಸಬೇಕು. ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು. ಮನೆಯಿಂದ ಹೊರ ಬರದೆ ಮನೆಯಲ್ಲಿ ಸುರಕ್ಷಿತವಾಗಿ ಇರಬೇಕು ಎಂದು ಮನವಿ ಮಾಡಿದರು.

ಜಯದೇವ ವೃತ್ತ, ಅಂಬೇಡ್ಕರ್‌ ವೃತ್ತ, ವಸಂತ ಚಿತ್ರಮಂದಿರ ರಸ್ತೆ, ಗಡಿಯಾರ ಕಂಬದ ರಸ್ತೆ, ಮಂಡಿಪೇಟೆ, ವಿಜಯಲಕ್ಷ್ಮೀ ರಸ್ತೆ, ಚೌಕಿಪೇಟೆ, ಚಾಮರಾಜಪೇಟೆ, ದೊಡ್ಡಪೇಟೆ, ಗುಂಡಿ ಮಹದೇವಪ್ಪ ವೃತ್ತ ಒಳಗೊಂಡಂತೆ ಅನೇಕ ಭಾಗದಲ್ಲಿ ಕೆಲ ಕಾಲ ಪೊಲೀಸರು ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದರು.

Advertisement

ಸಕಾರಣ ಇಲ್ಲದೆ ಬಂದವರಿಗೆ ದಂಡ ವಿಧಿಸಿದರು. ವಾಹನಗಳನ್ನು ವಶಕ್ಕೆ ಪಡೆದು ಜಿಲ್ಲಾ ಕವಾಯತ್‌ ಮೈದಾನಕ್ಕೆ ರವಾನಿಸಿದರು. ಅನಗತ್ಯವಾಗಿ ಸಂಚರಿಸುತ್ತಿದ್ದವರಿಗೆ ಎಚ್ಚರಿಕೆ ನೀಡಿದರು. ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ನೀರವ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನದ ವೇಳೆಯಲ್ಲಂತೂ ಅನೇಕ ರಸ್ತೆಗಳು ಅಕ್ಷರಶಃ ಭಣಗುಟ್ಟುತ್ತಿದ್ದವು. ಕೆಲ ರಸ್ತೆಗಳಲ್ಲಿ ಯುವಕರು ಕ್ರಿಕೆಟ್‌, ಬ್ಯಾಡ್ಮಿಂಟನ್‌ ಆಡಿದರು.

ಸಂಜೆ ವೇಳೆಗೆ ಅಲ್ಲಲ್ಲಿ ಜನರ ಸಂಚಾರ ಕಂಡು ಬಂತು. ಪ್ರಮುಖ ರಸ್ತೆ, ವೃತ್ತಗಳನ್ನು ಹೊರತುಪಡಿಸಿದರೆ ವಿದ್ಯಾನಗರ, ಆಂಜನೇಯ ಬಡಾವಣೆ, ತರಳಬಾಳು ಬಡಾವಣೆ, ವಿವೇಕಾನಂದ ಬಡಾವಣೆ, ನಿಟುವಳ್ಳಿ, ಶಿವಕುಮಾರಸ್ವಾಮಿ ಬಡಾವಣೆ, ಜಯನಗರ, ಸರಸ್ವತಿ ನಗರ ಇತರೆ ಒಳ ಪ್ರದೇಶದಲ್ಲಿ ಎಂದಿನ ವಾತಾವರಣ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next