ದಾವಣಗೆರೆ: ದೇಶಕ್ಕೆ ಸ್ವಾತಂತ್ರ್ಯ ದೊರೆತು 7 ದಶಕಗಳಾದರೂ ದೇಶದ 90ರಷ್ಟು ಸಂಪತ್ತನ್ನು ಕೇವಲ 1ರಷ್ಟು ಶ್ರೀಮಂತ ವರ್ಗದವರು ನಿಯಂತ್ರಿಸುತ್ತಿದ್ದಾರೆ ಎಂದು ಮೆಡಿಕಲ್ ಸರ್ವೀಸ್ ಸೆಂಟರ್‌ನ ರಾಜ್ಯ ಕಾರ್ಯದರ್ಶಿ ಡಾ| ವಸುದೇಂದ್ರ ಹೇಳಿದ್ದಾರೆ.
ಭಗತ್‌ಸಿಂಗ್‌ರವರ 112ನೇ ಜನ್ಮ ದಿನದ ಅಂಗವಾಗಿ ಶನಿವಾರ ಆಲ್ ಡೆಮಾಕ್ರಟಿಕ್ ಯೂತ್, ಸ್ಟೂಡೆಂಟ್ ಹಾಗೂ ಮಹಿಳಾ ಸಾಂಸ್ಕೃತಿಕ ಸಂಘಟನೆ ಎ.ಐ.ಡಿ.ವೈ.ಓ., ಎ.ಐ.ಡಿ.ಎಸ್.ಒ., ಎ.ಐ.ಎಂ.ಎಸ್.ಎಸ್, ಸಂಘಟನೆಗಳ ವತಿಯಿಂದ ರೈಲ್ವೆ ಸ್ಟೇಷನ್ ಮುಂಭಾಗದಲ್ಲಿರುವ ಭಗತ್‌ಸಿಂಗ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, 20 ವರ್ಷಗಳಲ್ಲಿ ಸುಮಾರು ಮೂರುವರೆ ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷಾಂತರ ಕಾರ್ಮಿಕರು ಕೆಲಸವಿಲ್ಲದೇ ಭಿಕಾರಿಗಳಾಗಿದ್ದಾರೆ. ಸಮಾನತೆ, ಅನ್ಯಾಯದ ವಿರುದ್ಧ ಹೋರಾಟ ಕಟ್ಟುವುದು ನಮ್ಮ ಕರ್ತವ್ಯವಾಗಬೇಕು ಎಂದರು.
ಎ.ಐ.ಡಿ.ವೈ.ಓ.ನ ಯುವಜನ ಸಂಘಟನೆಯ ಪರಶುರಾಮ್ ಪಿ. ಮಾತನಾಡಿ, ಈ ದಿನ ಸ್ಮರಿಸಬೇಕಿರುವುದು ಎಷ್ಟೋ ವರ್ಷಗಳಿಂದ ನಡೆದು ಬಂದ ಸಂಪ್ರದಾಯದ ರೀತಿಯಿಂದಲ್ಲ. ತ್ಯಾಗ-ಬಲಿದಾನ, ಹೋರಾಟದಿಂದಾಗಿ ಅವರು ದೇಶಭಕ್ತರು, ನಮ್ಮ ನೆಚ್ಚಿನ ನಾಯಕರು ಎಂಬ ಕಾರಣಕ್ಕಾಗಿಯೂ ಅಲ್ಲ. ಜನ್ಮ ದಿನ ಆಚರಣೆಯಿಂದ ಹುತಾತ್ಮರಿಗೆ ಸೂಕ್ತ ಗೌರವ ಸಲ್ಲಿಸಲು ಸಾಧ್ಯವೂ ಆಗದು. ಯಾವ ಆದರ್ಶ, ಆಶಯಗಳಿಗೆ ಅವರು ತಮ್ಮ ಪ್ರಾಣತ್ಯಾಗ ಮಾಡಿದರೋ ಅವು ಪೂರ್ಣಗೊಂಡಿದೆಯೇ ಎಂದು ನಮ್ಮನ್ನು ಪ್ರಶ್ನಿಸಿಕೊಂಡು ಅವರ ವಿಚಾರಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಜನ್ಮ ದಿನ ಆಚರಿಸಬೇಕು ಎಂದರು.
ಇಂದು ಎಲ್ಲೆಡೆ ನಿರುದ್ಯೋಗ ಕಾಡುತ್ತಿದೆ. ಬೆಂಗಳೂರಿನ ಪೀಣ್ಯ ವಲಯದಲ್ಲಿ ಸಾವಿರಾರು ಕೈಗಾರಿಕೆಗಳು ಮುಚ್ಚಿ ಹೋಗುವ ಹಂತದಲ್ಲಿವೆ. ಈಗಾಗಲೇ 12 ರಿಂದ 13 ಲಕ್ಷ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇನ್ನೂ 16 ರಿಂದ 20 ಲಕ್ಷ ಯುವಕರು ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಹೀಗೆ ಭಾರತದಾದ್ಯಂತ ಅನೇಕ ಕಂಪನಿಗಳು ಮುಚ್ಚಿ ಯುವಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ.
ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ದೇಶದ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಕಟ್ಟುವುದು ಭಗತ್‌ಸಿಂಗ್‌ರವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದರು.
ಎ.ಐ.ಡಿ.ಎಸ್.ಓ ಅಧ್ಯಕ್ಷೆ ಸೌಮ್ಯ ಮಾತನಾಡಿ, ಇಂದು ದಿನೇ ದಿನೇ ಶಿಕ್ಷಣ, ಆರೋಗ್ಯ ಕ್ಷೇತ್ರ ಖಾಸಗೀಕರಣ, ವ್ಯಾಪಾರೀಕರಣವಾಗುತ್ತಿದೆ. ಕೇಂದ್ರ ಸರ್ಕಾರ ಎನ್.ಇ.ಪಿ.-2019 ಎಂಬ ಶಿಕ್ಷಣ ವಿರೋಧಿ
ನೀತಿ ತಂದು ವಿದ್ಯಾರ್ಥಿಗಳನ್ನು ಮೌಡ್ಯತೆ, ಅನಕ್ಷರತೆಯ ಸ್ಥಿತಿಗೆ ತಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎ.ಐ.ಎಂ.ಎಸ್.ಎಸ್ ಉಪಾಧ್ಯಕ್ಷೆ ಬನಶ್ರೀ, ಎ.ಐ.ಡಿ.ಎಸ್.ಓ.ನ ಜಿಲ್ಲಾ ಉಪಾಧ್ಯಕ್ಷೆ ನಾಗಜ್ಯೋತಿ, ಉಪಾಧ್ಯಕ್ಷ ಕಿರಣ್, ಜಂಟಿ ಕಾರ್ಯದರ್ಶಿ ಕಾವ್ಯ, ಸದಸ್ಯರಾದ ನಾಗಸ್ಮಿತ, ಪುಷ್ಪ, ಗುರು, ಹರಿಪ್ರಸಾದ್, ಭರತ್, ರೇಣುಕಾ, ಯತೀಂದ್ರ ಇತರರು ಇದ್ದರು.