ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲೇ ಗೆದ್ದೇ ಗೆಲ್ಲುತ್ತೇನೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ, ನಾಡೋಜ ಡಾ| ಮಹೇಶ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ 21 ಜನರು ಸ್ಪರ್ಧೆಯಲ್ಲಿದ್ದಾರೆ. ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತೇನೆ. ಎಷ್ಟು ಅಂತದಿಂದ ಎನ್ನುವುದೇ ಬಹಳ ಮುಖ್ಯವಾಗಿ ಉಳಿದಿರುವ ವಿಷಯವಷ್ಟೇ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿ ಮಾಡಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ಕನ್ನಡವನ್ನು ಅನ್ನದ ಭಾಷೆ ಆಗಿಸಲು ಶ್ರಮಿಸುತ್ತೇನೆ. ನೂತನ ಕೈಗಾರಿಕೆಗಳು ಆರಂಭವಾದಲ್ಲಿ ಸ್ಥಳೀಯ ಕನ್ನಡಿಗರಿಗೆ ದೊರೆಯುವಂತಾಗಬೇಕು. ಅದಕ್ಕಾಗಿ ಎಲ್ಲ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು. ಕನ್ನಡವನ್ನುಉಳಿಸಿ ಬೆಳೆಸುತ್ತಿರುವುದೇ ಕನ್ನಡ ಶಾಲೆಗಳು. ಹಾಗಾಗಿ ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ. ತಮಿಳುನಾಡಿನಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ಗಳನ್ನು ತಮಿಳು ಭಾಷೆಯಲ್ಲೇ ಬೋಧನೆ ಮಾಡುವಂತೆ ಕರ್ನಾಟಕದಲ್ಲೂ ಕನ್ನಡದಲ್ಲೇ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ ಬೋಧನಾ ವಿಧಾನ ಅಳವಡಿಕೆಗೆ ಗಮನ ನೀಡಲಾಗುವುದು ಎಂದು ಹೇಳಿದರು.
ನಾನು ಅಧ್ಯಕ್ಷನಾದ ನಂತರ ಮತದಾರರು ಮತ್ತು ಸದಸ್ಯತ್ವ ಪರಿಷ್ಕರಣೆ ಗಮನ ನೀಡಲಾಗುವುದು. ಈಗಿನ ನಿಕಟಪೂರ್ವ ಅಧ್ಯಕ್ಷರ ವಿಳಾಸಕ್ಕೆ ನಾನು ಕಳಿಸಿದಂತಹ ಪ್ರಣಾಳಿಕೆ ಪತ್ರ ವಿಳಾಸ ಬದಲಾವಣೆ ಕಾರಣಕ್ಕೆ ವಾಪಾಸ್ಸು ಬಂದಿದೆ. ಇಂತಹ ಹಲವಾರು ಉದಾಹರಣೆಗಳಿವೆ. ಹಾಗಾಗಿ ಹೊಸದಾಗಿ ಆ್ಯಪ್ ಸಿದ್ಧಪಡಿಸಲಾಗುವುದು. ಆ್ಯಪ್ ಮೂಲಕ ಮತದಾರರು, ಸದಸ್ಯತ್ವ ನೋಂದಣಿಯಾದಿಯಾಗಿ ಪ್ರತಿ ಚಟುವಟಿಕೆಯನ್ನ ಮನೆಯಲ್ಲೇ ಕುಳಿತುಕೊಂಡು ವೀಕ್ಷಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
1915 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಾರಂಭಿಸಿರುವ ಪರಿಷತ್ತಿನಲ್ಲಿ ಈಗಲೂ ಅದೇ ನಿಯಮಾವಳಿ ಇವೆ. ಕಾಲದ ಬೇಡಿಕೆ ಅನುಗುಣವಾಗಿ ನಿಯಮಾವಳಿಗಳನ್ನು ಸಂಪೂರ್ಣ ಪರಿಷ್ಕರಣೆ ಮಾಡಲಾಗುವುದು. ಅದಕ್ಕಾಗಿಯೇ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಲಾಗುವುದು. ಯುವ ಸಮೂಹ ಒಳಗೊಂಡಂತೆ ಎಲ್ಲ 26 ಕ್ಷೇತ್ರಗಳಿಗೆ ಕಾರ್ಯಕಾರಿಣಿಯಲ್ಲಿ ಸ್ಥಾನ ನೀಡಲಾಗುವುದು. ರಾಜ್ಯ, ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರ ನೇಮಕ ಮಾಡುತ್ತಾರೆ. ಅದು ಒಂದು ರೀತಿ ತುಘಲಕ್ ದರ್ಬಾರ್‌ನಂತಾಗಿದೆ.
ತಾಲೂಕು, ಹೋಬಳಿ ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಸಲಾಗುವುದು. ತಾಲೂಕು, ಹೋಬಳಿ ಕೇಂದ್ರದಲ್ಲೂ ಕನ್ನಡ ಭವನ ನಿರ್ಮಾಣ ಒಳಗೊಂಡಂತೆ ಹತ್ತು ಹಲವಾರು ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ವಿವರಿಸಿದರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಕೆ. ರಾಘವೇಂದ್ರ ನಾಯರಿ, ಸಾಲಿಗ್ರಾಮ ಗಣೇಶ ಶೆಣೈ, ಸುಭಾಶ್ಚಂದ್ರ, ಜಿ.ಎಚ್. ರಾಜಶೇಖರ್ ಗುಂಡಗಟ್ಟಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.