ಬಳ್ಳಾರಿ: ವಾರದ ಹಿಂದಷ್ಟೇ ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರು, ಗೋವಿಗೆ ಪೂಜೆ ಸಲ್ಲಿಸುವ ಮೂಲಕ ರಾಜಕೀಯ ಅಖಾಡಕ್ಕೆ ಧುಮುಕಿದ ಬೆನ್ನಲ್ಲೇ ಇದೀಗ ರೆಡ್ಡಿ ಪುತ್ರಿ ಬ್ರಾಹ್ಮಿಣಿ ತನ್ನ ತಂದೆಯ ಜನ್ಮದಿನ ಜ.11ರಂದು ರಾಜಕೀಯ ರಂಗ ಪ್ರವೇಶ ಮಾಡಿದ್ದಾರೆ.
ಜನಾರ್ದನ ರೆಡ್ಡಿ ಜನ್ಮದಿನದ ಹಿನ್ನೆಲೆಯಲ್ಲಿ ಅವರ ನಿವಾಸದ ಎದುರಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಬ್ರಾಹ್ಮಿಣಿ, ತಮ್ಮ ತಂದೆ ಓರ್ವ ಕನಸುಗಾರ. ಇಡೀ ರಾಜ್ಯದ ಕಲ್ಯಾಣದ ಕನಸು ಅವರದ್ದು. ಅಂಥವರು ಕೆಲ ದಿನಗಳ ಹಿಂದೆ ನಾನು ಒಬ್ಬಂಟಿ ಎಂದು ಹೇಳಿಕೊಂಡಿದ್ದಾರೆ. ಇದರಿಂದ ನಾನು ವಿಚಲಿತಳಾಗಿದ್ದೇನೆ. ಇದೇ ಕಾರಣಕ್ಕೆ ತಂದೆ ಜನ್ಮದಿನದಂದು ನಾನು ನಿಮ್ಮ ಮುಂದೆ ಬಂದಿದ್ದೇನೆ. ಸಾವಿರಾರು ಕಾರ್ಯಕರ್ತರ ಜತೆ ನಮ್ಮ ತಂದೆಗೆ ನೀವು ಒಂಟಿ ಅಲ್ಲ; ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ ಎಂದು ಸಾರಲಿದ್ದೇನೆ ಎಂದರು.
ಇದನ್ನೂ ಓದಿ:ಏಳು ವರ್ಷ ಹಿಂದಿನ ಕೊಲೆ ಪ್ರಕರಣದಲ್ಲಿ ಆಮ್ರಪಾಲಿ ಗ್ರೂಪ್ ಎಂ.ಡಿ ಅನಿಲ್ ಶರ್ಮಾ ಹೆಸರು
ಬಳ್ಳಾರಿಯ ಸರ್ವತೋಮುಖ ಅಭಿವೃದ್ಧಿಗೆ ಜನಾರ್ದನ ರೆಡ್ಡಿ ರಾಜಕೀಯದಲ್ಲಿ ಗೆಲ್ಲಲೇಬೇಕು ಎಂದು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರ ಬಾಯಲ್ಲಿ ಕೂಗಿಸಿದ ಬ್ರಾಹ್ಮಿಣಿ, ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ತಂದೆಯನ್ನು ಬೆಂಬಲಿಸಿ ಎಂದು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡುವೆ ಎಂದು ಘೋಷಿಸಿದರು.
ಈ ವೇಳೆ ಕಲ್ಯಾಣಶ್ರೀ ಸೇರಿದಂತೆ ವಿವಿಧ ಧರ್ಮಗಳ ಶ್ರೀಗಳು, ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ, ಮುಖಂಡರಾದ ಶ್ರೀನಿವಾಸ ರೆಡ್ಡಿ, ದಮ್ಮೂರು ಶೇಖರ್, ಅಲಿಖಾನ್, ಸಂಜಯ್ ಬೆಟ ಗೇರಿ, ಸಿರುಗುಪ್ಪದ ಧರಪ್ಪ ನಾಯಕ ಇದ್ದರು