Advertisement

4 ತಿಂಗಳಾದ್ರೂ ಮಗಳು ಸಿಕ್ಕಿಲ್ಲ!

11:36 AM Dec 15, 2018 | |

ಮೈಸೂರು: ನನ್ನ ಮಗಳು ಈವರೆಗೆ ಸಿಕ್ಕಿಲ್ಲ…ಸರ್ಕಾರದವರು ಬಾಡಿ (ಮೃತದೇಹ) ಸಿಗಬೇಕು ಅಂತಿದ್ದಾರೆ. ನನ್ನ ಮಗಳ ಬಾಡಿ ಇನ್ನೆಲ್ಲಿ ಹುಡುಕಿ ಕೊಡ್ತಾರೋ ಗೊತ್ತಿಲ್ಲ, ಇದು ಕೊಡಗಿನಲ್ಲಿ ಸುರಿದ ಮಹಾ ಮಳೆ ದುರಂತದಲ್ಲಿ ಮಗಳನ್ನು ಕಳೆದುಕೊಂಡಿರುವ ಬೆಟ್ಟತ್ತೂರು ಗ್ರಾಮದ ಸೋಮಯ್ಯ ಅವರ ಮನಕಲಕುವ ನುಡಿ.

Advertisement

ಮೈಸೂರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಭಿರುಚಿ ಪ್ರಕಾಶನ ಹೊರತಂದಿರುವ ಪತ್ರಕರ್ತ ರವಿ ಪಾಂಡವಪುರ ಅವರ ಕಥೆ ಹೇಳುವೆ ನನ್ನ; ಕೊಡಗಿನ ನೊಂದ ಹೃದಯಗಳು.. ಮಿಡಿದ ಮನಗಳು ಪುಸ್ತಕವನ್ನು ಬಿಡುಗಡೆಗೊಳಿಸಿದ ಅವರು ಆಗಸ್ಟ್‌ ತಿಂಗಳಲ್ಲಿ ಸುರಿದ ಮಹಾಮಳೆಯಿಂದ ತಾವು ಎದುರಿಸಿದ ಸಂಕಷ್ಟವನ್ನು ಬಿಚ್ಚಿಟ್ಟರು.

ಕುಡಿಯ ಬುಡಕಟ್ಟು ಜನಾಂಗದ ನಾನು ಪತ್ನಿ ಜಯಂತಿ, ಮೂವರು ಗಂಡು ಮಕ್ಕಳು, ಕೊನೆಯ ಮಗಳು ಮಂಜುಳಾ ಜೊತೆಗೆ ಬೆಟ್ಟತ್ತೂರು ಗ್ರಾಮದಲ್ಲಿ ವಾಸವಿದ್ದೆವು. ಆ.17ರಂದು ಬೆಳಗ್ಗೆ 8.45ರ ಸುಮಾರಿಗೆ ಜೋಡುಪಾಲ ಗ್ರಾಮದಲ್ಲಿರುವ ಅಕ್ಕನ ಮನೆಯಿಂದ ಸಹೋದರ ಚೆಂಗಪ್ಪ, ನಮ್ಮ ಮನೆಗೆ ದೂರವಾಣಿ ಕರೆ ಮಾಡಿ ಭಾವ ಬಸಪ್ಪನ ಮೃತದೇಹ ಹೈವೇ ಬಳಿ ಬಿದ್ದಿದೆ ಎಂದು ತಿಳಿಸಿದರು. 

ಎಸ್ಸೆಸೆಲ್ಸಿ ಓದುತ್ತಿದ್ದ ನನ್ನ ಮಗಳು ಮಂಜುಳಾ ನಮ್ಮ ಮನೆಯಿಂದ ಶಾಲೆಗೆ ಹೋಗಬೇಕೆಂದರೆ ಒಂದು ಕಿ.ಮೀ. ಅರಣ್ಯದಲ್ಲಿ ಸೇರಿದಂತೆ ನಾಲ್ಕು ಕಿ.ಮೀ ನಡೆದು, ನಂತರ 10 ಕಿ.ಮೀ. ಬಸ್‌ನಲ್ಲಿ ಹೋಗಬೇಕಿತ್ತು. ಈ ಕಾರಣಕ್ಕೆ ನಾಲ್ಕೂವರೆ ತಿಂಗಳ ಹಿಂದೆ ಮಗಳನ್ನು ಅಕ್ಕನ ಮನೆಗೆ ಬಿಟ್ಟಿದ್ದೆ. ಮದೇನಾಡಿಂದ ಬೆಟ್ಟತ್ತೂರಿಗೆ ಸಂಪರ್ಕ ಕಡಿತ ಆಗಿದ್ದರಿಂದ ಬರಲಾಗಿಲ್ಲ. ನಾಲ್ಕು ದಿನಗಳ ನಂತರ ಭಾವ ಬಸಪ್ಪನ ಮಗಳ ಮೃತದೇಹ ಸಿಕ್ಕಿತು.

ಊರಿಗೆ ತರಲು ಸಂಪರ್ಕ ಸಾಧ್ಯವಿಲ್ಲದ್ದರಿಂದ ಸುಳ್ಯದಲ್ಲೇ ಅಂತ್ಯಕ್ರಿಯೆ ನಡೆಸಬೇಕಾಯಿತು. ಮಳೆ ಕಡಿಮೆಯಾದ ನಂತರ ಹೊಳೆ ಬದಿಯಲ್ಲೇ ನಡೆದು ಬಂದೆವಾದರೂ ಮನೆಯಲ್ಲಿದ್ದ ಒಂದೇ ಒಂದು ವಸ್ತು ನಮಗೆ ಸಿಗಲಿಲ್ಲ… ಆ.24ರಂದು ಹೊಳೆಯ ಮಧ್ಯೆ ಅಕ್ಕ ಗೌರಮ್ಮಳ ಮೃತದೇಹ ಸಿಕ್ಕಿತಾದರೂ ಹೊರ ತೆಗೆಯುವಾಗ ಒಂದು ಕಾಲು ಕಳಚಿಹೋಗಿತ್ತು. ಅವರ ಮನೆಯಲ್ಲೇ ಇದ್ದ ನನ್ನ ಮಗಳು ಮಂಜುಳಾ ಈವರೆಗೆ ಸಿಕ್ಕಿಲ್ಲ.

Advertisement

ಸಂಶಯ ಇರುವ ಜಾಗದಲ್ಲಿ ಹುಡುಕಿ ಎಂದು ಬೇಡಿಕೊಂಡಾಗ ಜೆಸಿಬಿ ಕಳಿಸುತ್ತೇವೆ ಎಂದು 15 ದಿನ ನಮ್ಮನ್ನು ರಸ್ತೆ ಬದಿ ಕಾಯಿಸಿದರೇ ಹೊರತು ಜೆಸಿಬಿ ಕಳಿಸಲಿಲ್ಲ. ಕೊನೆಗೆ ದೊರೆತ ಮೂಳೆಯೊಂದನ್ನು ಪರೀಕ್ಷೆಗೆ ಕಳುಹಿಸಿದಾಗ ಅದು ಪ್ರಾಣಿಯ ಮೂಳೆ ಎಂಬ ವರದಿ ಬಂತು ಕಣ್ಣೀರಾದರು ಮಗಳ ಫೋಟೋ ಇಟ್ಟು ಅಂತ್ಯಕ್ರಿಯೆ ನಡೆಸಿರುವ ಸೋಮಯ್ಯ.

ಕೊಡಗು ಜಿಲ್ಲೆ ಪೊಲೀಸ್‌ ವರಿಷ್ಠಾಧಿಕಾರಿ ಸುಮನ ಡಿ.ಪಣ್ಣೇಕರ್‌ ಮಾತನಾಡಿ, ಆ.16ರಂದು ಮಳೆ ಹೆಚ್ಚಾದಂತೆ ಸಂತ್ರಸ್ತರಿಂದ ದೂರವಾಣಿ ಕರೆಗಳು ಬರಲು ಆರಂಭವಾಯಿತು. ಎಲ್ಲಿ ಎಷ್ಟು ಜನ ಸಿಲುಕಿದ್ದಾರೆ ಎಂಬ ಮಾಹಿತಿ ಕಲೆ ಹಾಕಿ, ಜನರ ಸಹಕಾರದಿಂದ ಕೆಲಸ ಮಾಡಲು ಸಾಧ್ಯವಾಯಿತು.

ಮೊದಲ ಮೂರು ದಿನ ಬದುಕಿಸಿ ಹೊರತರಲು ಗಮನ ಹರಿಸಿದೆವು. ನಂತರ ಸೆ.3ರವರೆಗೂ ಮೃತದೇಹಗಳನ್ನು ಪತ್ತೆಹಚ್ಚಿ ಹೊರತರುವ ಕೆಲಸ ಮಾಡಿದೆವು. ಸೋಮಯ್ಯ ಅವರ ಮಗಳು ಮಂಜುಳಾ ಬದುಕುಳಿದಿಲ್ಲ, ಪರಿಹಾರ ನೀಡಿ ಎಂದು ಜಿಲ್ಲಾ ಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ವರದಿ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಪತ್ರಕರ್ತ ಅನಂತ ಚಿನಿವಾರ್‌ ಮಾತನಾಡಿ, ಮಹಾ ಮಳೆಯಿಂದ ಕೊಡಗು ನಲುಗಿ ನಾಲ್ಕೂ ತಿಂಗಳಾದರು ಕೊಡಗು ಮರು ನಿರ್ಮಾಣದ ಕೆಲಸ ಆಗಬೇಕಾದಷ್ಟು ಆಗಲಿಲ್ಲ. ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಜೊತೆಗೆ ಬದುಕು ಕಟ್ಟಿಕೊಡುವ ಕೆಲಸವೂ ಆಗಬೇಕಿದೆ ಎಂದು ಹೇಳಿದರು. ಕೊಡಗು ಪ್ರಸ್‌ಕ್ಲಬ್‌ ಅಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟಪ್ಪ ಅಧ್ಯಕ್ಷತೆವಹಿಸಿದ್ದರು. ಕೃತಿಕಾರ ರವಿ ಪಾಂಡವಪುರ, ಪ್ರಕಾಶಕ ಅಭಿರುಚಿ ಗಣೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next