ಚಿಕ್ಕಮಗಳೂರು: ಜಿಲ್ಲಾಡಳಿತದಿಂದ ಡಿ.22ರಿಂದ ಡಿ.26 ರವರೆಗೆ ದತ್ತಪೀಠದಲ್ಲಿ ದತ್ತ ಜಯಂತಿ ಆಯೋಜಿಸಿದ್ದು, ದತ್ತಭಕ್ತರು ಭಾನುವಾರ ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ದತ್ತಮಾಲೆ ಧರಿಸಿದರು.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು, ಮುಖಂಡರು ಹಾಗೂ ಮಾಜಿ ಶಾಸಕ ಸಿ.ಟಿ.ರವಿ ದತ್ತಮಾಲೆ ಧಾರಣೆ ಮಾಡಿದರು. ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ದತ್ತಭಕ್ತರು ಇಂದು ಅಧಿಕೃತವಾಗಿ ದತ್ತಮಾಲೆ ಧರಿಸುವುದರೊಂದಿಗೆ ದತ್ತ ಜಯಂತಿ ಕಾರ್ಯಕ್ರಮ ಚಾಲನೆ ಪಡೆದುಕೊಡಿತು. ಮೊದಲ ದಿನ ಜಿಲ್ಲಾದ್ಯಂತ ಅಂದಾಜು ನಾಲ್ಕು ಸಾವಿರಕ್ಕೂ ಅಧಿಕ ದತ್ತಭಕ್ತರು ದತ್ತ ಮಾಲಾಧಾರಣೆ ಮಾಡಿದರು.
ಇಂದಿನಿಂದ 10ದಿನಗಳ ಕಾಲ ದತ್ತ ಜಯಂತಿ ನಡೆಯಲಿದ್ದು ಡಿ.24ರಂದು ಅನುಸೂಯ ಜಯಂತಿ, ಡಿ.25ರಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ, ಡಿ.26ರಂದು ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ.
ದತ್ತಜಯಂತಿ ಹಿನ್ನಲೆ ಜಿಲ್ಲಾಡಳಿ ತ ಡಿ.22ರಿಂದ 26ರ ವರೆಗೆ ಈ ಭಾಗದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ನಿಷೇಧಿಸಿದೆ. ಪೊಲೀಸ್ ಇಲಾಖೆಯಿಂದ ಬೀಗಿ ಬಂದೋ ಬಸ್ತ್ ಕೈಗೊಳ್ಳಲಾಗಿದೆ.
ಮಾಜಿ ಶಾಸಕ ಸಿ. ಟಿ. ರವಿ ಸುದ್ದಿಗಾರ ಜೊತೆ ಮಾತನಾಡಿ, ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಅಬ್ಬಯ್ಯ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂದು ಪ್ರಸ್ತಾಪ ಮಾಡಿದ್ದಾರೆ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿರುವುದು ನಿಜ. ಅದೇ ರೀತಿ ಹಿಂದೂಗಳ ಮಾರಣಹೋಮ ಮಾಡಿದ್ದು ವಾಸ್ತವಿಕ ಸತ್ಯ. ಟಿಪ್ಪು ಮತ್ತು ಹೈದರಾಲಿ ಮೋಸದಿಂದ ಮೈಸೂರು ಅರಸರ ರಾಜಸ್ವತ್ತಿಗೆಯನ್ನು ಕಬಳಿಸುವ ಹುನ್ನಾರವು ಸತ್ಯ. ಮೈಸೂರು ಸಾಮ್ರಾಜ್ಯಕ್ಕೆ ಕೊಡುಗೆ ನೀಡಿದ್ದು ನಾಲ್ವಾಡಿ ಕೃಷ್ಣರಾಜ ಒಡೆಯರ್, ಕೆಆರ್ ಎಸ್ ಅಣೆಕಟ್ಟೆ, ಮೈಸೂರು ಬ್ಯಾಂಕ್, ಮೈಸೂರು ಮೈ ಶುಗರ್ ಕಂಪನಿ, ಮೈಸೂರು ಪೇಪರ್ ಮಿಲ್, ಮೈಸೂರು ಸಿಲ್ಕ್ ಕಾರ್ಖಾನೆ ಸ್ಥಾಪನೆ, ಮೈಸೂರು ವಿ.ವಿ ಕೀರ್ತಿ ನಾಲ್ವಾಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದರು.
ಟಿಪ್ಪು ಮಾಡಿದ್ದು, ಕೊಡವರ ಮಾರಣಹೋಮ, ದೇವಸ್ಥಾನ ಮಸೀದಿಯಾಗಿ ಪರಿವರ್ತನೆ ಮಾಡಿದ್ದು, ಮೇಲುಕೋಟೆ ಅಯ್ಯಂಗಾರ್ ಮೇಲೆ ದೌರ್ಜನ್ಯ ನಡೆಸಿದ್ದು, ದೌರ್ಜನ್ಯ ನಡೆಸಿದವರ ಹೆಸರನ್ನು ಯಾರು ಇಟ್ಟುಕೊಳ್ಳುವುದಿಲ್ಲ, ಅಬ್ಬಯ್ಯ ಅವರು ತಮ್ಮ ಮನೆಗೆ ಟಿಪ್ಪು ಹೆಸರು ಇಟ್ಟುಕೊಳ್ಳಲಿ, ಟಿಪ್ಪು ಮೇಲೆ ಅಷ್ಟು ಅಭಿಮಾನವಿದ್ದರೇ ಕಾಂಗ್ರೆಸ್ ಕಚೇರಿಗೆ ಟಿಪ್ಪು ಹೆಸರಿಟ್ಟುಕೊಳ್ಳಲಿ ಯಾರು ಬೇಡ ಎನ್ನುವುದಿಲ್ಲ ಎಂದ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಹೆಸರು ನಾಲ್ವಾಡಿ ಕೃಷ್ಣರಾಜ ಒಡೆಯರ್ ಹೆಸರು ಅವರ ಹೆಸರು ಇಡು ವಂತೆ ಆಗ್ರಹಿಸಿದರು.