Advertisement

ದತ್ತ ಜಯಂತಿಗೆ ಶಾಂತಿಯುತ ತೆರೆ

08:05 PM Dec 08, 2022 | Team Udayavani |

ಚಿಕ್ಕಮಗಳೂರು: ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಶ್ರೀ ಗುರು ದತ್ತಾತ್ರೇಯ ಸ್ವಾಮಿ ಪಾದುಕೆಗಳಿಗೆ ಹಿಂದೂ ಅರ್ಚಕರಿಂದ ಪೂಜಾ ವಿಧಿ-ವಿಧಾನ ಹಾಗೂ ಗುಹೆ ಸಮೀಪದಲ್ಲಿನ ತುಳಸಿಕಟ್ಟೆ ಬಳಿ ಹೋಮ-ಹವನಗಳು ಶಾಸ್ತ್ರೋಕ್ತವಾಗಿ ನಡೆಯುವ ಮೂಲಕ ಈ ವರ್ಷದ ದತ್ತ ಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ಸಂಪನ್ನಗೊಂಡಿತು.

Advertisement

ದತ್ತ ಜಯಂತಿ ಹಿನ್ನೆಲೆಯಲ್ಲಿ ದತ್ತ ಪಾದುಕೆಗೆ ಪೂಜೆ ನೆರವೇರಿಸಲು ರಾಜ್ಯ ಸರ್ಕಾರ ಅರ್ಚಕರಾದ ಡಾ|ಸಂದೀಪ್‌ ಶರ್ಮ ಹಾಗೂ ಶೃಂಗೇರಿಯ ಕೆ.ಶ್ರೀಧರ್‌ ಅವರನ್ನು ತಾತ್ಕಾಲಿಕವಾಗಿ ನೇಮಿಸಿದ್ದು, ಗುರುವಾರ ಬೆಳಗ್ಗೆ ಅರ್ಚಕರು ದತ್ತ ಪಾದುಕೆಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದರು.

ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ದತ್ತಮಾಲೆ ಧರಿಸಿ ವೃತಾಚರಣೆಯಲ್ಲಿದ್ದ ಭಕ್ತರು ಇರುಮುಡಿ ಹೊತ್ತು ಆಗಮಿಸಿ ಹೊನ್ನಮ್ಮನಹಳ್ಳದಲ್ಲಿ ಸ್ನಾನ ಮಾಡಿ ಸರತಿ ಸಾಲಿನಲ್ಲಿ ನಿಂತು ದತ್ತಪಾದುಕೆ ದರ್ಶನ ಪಡೆದು ತೀರ್ಥಪ್ರಸಾದ ಸ್ವೀಕರಿಸಿದರು. ನಂತರ ಇರುಮುಡಿಯನ್ನು ದೇವರಿಗೆ ಅರ್ಪಿಸಿದರು.

ದತ್ತ ಜಯಂತಿ ಅಂಗವಾಗಿ ಪೀಠದಲ್ಲಿ ಹೋಮ-ಹವನಗಳು ನಡೆದವು. ದತ್ತಗುಹೆ ಸಮೀಪದಲ್ಲಿರುವ ತುಳಸಿಕಟ್ಟೆ ಆವರಣದಲ್ಲಿ ಪುರೋಹಿತರಾದ ಕಮ್ಮರಡಿಯ ಪ್ರದೀಪ್‌ ಭಟ್‌ ನೇತೃತ್ವದ ತಂಡ ರುದ್ರಹೋಮ ಮತ್ತು ದತ್ತಾತ್ರೇಯ ಹೋಮ ನೆರವೇರಿಸಿತು. ಉಸ್ತುವಾರಿ ಸಚಿವ ಭೈರತಿ ಬಸವರಾಜ್‌, ಶಾಸಕ ಸಿ.ಟಿ.ರವಿ, ಜಿಲ್ಲಾ ಧಿಕಾರಿ ಕೆ.ಎನ್‌.ರಮೇಶ್‌, ಜಿಪಂ ಸಿಇಒ ಜಿ.ಪ್ರಭು, ವಿಶ್ವ ಹಿಂದೂ ಪರಿಷತ್‌ ರಾಷ್ಟ್ರೀಯ ಕಾರ್ಯದರ್ಶಿ ಅಂಬರೀಶ್‌, ಭಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ ಹಾಗೂ ವಿವಿಧ ಮಠಗಳ ಸ್ವಾಮೀಜಿಗಳು ಸೇರಿ ಹಲವರು ಭಾಗಿಯಾಗಿ ಹೋಮಕ್ಕೆ ಪೂರ್ಣಾಹುತಿ ಸಮರ್ಪಿಸಿದರು.

ಬೆಳಗ್ಗೆಯಿಂದಲೇ ಭಕ್ತರು ವಾಹನಗಳಲ್ಲಿ ಪೀಠದತ್ತ ತೆರಳಿದರು. ಬೆಳಗ್ಗೆ ಭಕ್ತರ ಸಂಖ್ಯೆ ಕಡಿಮೆ ಇದ್ದು ಮಧ್ಯಾಹ್ನದ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಜಮಾಯಿಸಿದ್ದರು. ಭಾರೀ ಪ್ರಮಾಣದಲ್ಲಿ ಭಕ್ತರು ಏಕಕಾಲದಲ್ಲಿ ಜಮಾಯಿಸಿದ ಪರಿಣಾಮ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯಗೊಂಡಿತು. ಕಿಮೀಗಟ್ಟಲೆ ವಾಹನ ದಟ್ಟಣೆ ನಿರ್ಮಾಣವಾಗಿದ್ದು, ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

Advertisement

ಮಧ್ಯಾಹ್ನದ ವೇಳೆಗೆ 1095 ದ್ವಿಚಕ್ರ ವಾಹನ ಹಾಗೂ 1156 ನಾಲ್ಕು ಚಕ್ರದ ವಾಹನಗಳಲ್ಲಿ 14,784ಕ್ಕೂ ಅಧಿ ಕ ಭಕ್ತರು ದತ್ತಪೀಠಕ್ಕೆ ತೆರಳಿದ್ದರು. ಸಂಜೆ ವೇಳೆಗೆ 2930 ವಾಹನಗಳಲ್ಲಿ 19,330 ಜನರು ಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದರು. ದತ್ತಪೀಠ ಸುತ್ತಮುತ್ತಲಿನ ಆವರಣ ಸೇರಿ ದತ್ತಪೀಠಕ್ಕೆ ಸಾಗುವ ಮಾರ್ಗದಲ್ಲಿ ಪೊಲೀಸ್‌ ಕಟ್ಟೆಚ್ಚರ ವಹಿಸಲಾಗಿತ್ತು. ಕಾನೂನು ಮತ್ತು ಸುವವ್ಯಸ್ಥೆ ಎಡಿಜಿಪಿ ಅಲೋಕ್‌ಕುಮಾರ್‌ ಹಾಗೂ ಎಸ್ಪಿ ಉಮಾ ಪ್ರಶಾಂತ್‌ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next