Advertisement

ಸರಕಾರಕ್ಕೆ ರಹಸ್ಯ ಸಡ್ಡು; ಚೀನದಲ್ಲಿ ಡೇಟಿಂಗ್‌ ಆ್ಯಪ್‌, ವಿಚಾಟ್‌ನಲ್ಲಿ ಪ್ರತಿಭಟನೆ

12:35 AM Nov 30, 2022 | Team Udayavani |

ಬೀಜಿಂಗ್‌: ಚೀನದಲ್ಲಿ ಕೊರೊನಾ ಸೋಂಕು ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಜಾಲತಾಣಗಳಲ್ಲಿ ವೀಡಿಯೋ, ಫೋಟೋ ಅಪ್‌ಲೋಡ್‌ ಮಾಡದಂತೆ ಸರಕಾರ ಸೆನ್ಸಾರ್‌ ಮಾಡಿದೆ. ಆದರೆ ಸರಕಾರಕ್ಕಿಂತ ನಾವೇ ಬುದ್ಧಿವಂತರು ಎಂದು ಸಡ್ಡು ಹೊಡೆದಿದ್ದಾರೆ.

Advertisement

ಸೋಂಕು ಪ್ರತಿಬಂಧಕ ನಿಯಮಗಳ ವಿರುದ್ಧ ಈಗ ಚೀನದಲ್ಲಿ ಡೇಟಿಂಗ್‌ ಆ್ಯಪ್‌ಗ್ಳ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ತಮ್ಮ ದೇಶದ ಹೊರಗಿನ ಭಾಗದಲ್ಲಿ ಇರುವ ಜಾಲತಾಣಗಳ ಮೂಲಕ ಅಧ್ಯಕ್ಷ ಜಿನ್‌ಪಿಂಗ್‌ ಸರಕಾರದ ನಿಲುವುಗಳ ಬಗ್ಗೆ ಕಟುವಾಗಿ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಸರಿ ಸುಮಾರು ಮೂರು ವರ್ಷಗಳಿಂದ ಒಂದಲ್ಲ ಒಂದು ರೀತಿಯಲ್ಲಿ ನಿಯಮಗಳಿಂದ ಜನರು ಬಸವಳಿದಿದ್ದಾರೆ. ಉರುಮ್‌ಕಿ ನಗರದ ಅಪಾರ್ಟ್‌ ಮೆಂಟ್‌ನಲ್ಲಿ ಬೆಂಕಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದವರನ್ನು ರಕ್ಷಿಸಲು ಕಾನೂನು ಅಡ್ಡಿಯಾಯಿತು. ಹೀಗಾಗಿ 10 ಮಂದಿ ಸಾವನ್ನಪ್ಪಿದ್ದಾರೆ ಎಂಬ ವಾದಗಳನ್ನು ಅಲ್ಲಿನ ಸರಕಾರ ಸಾರಾಸಗಟಾಗಿ ತಿರಸ್ಕರಿಸಿದೆ.

ಸೆನ್ಸಾರ್‌ ನಡುವೆ ಪ್ರತಿಭಟನೆ: ಡೇಟಿಂಗ್‌ ಆ್ಯಪ್‌ಗ್ಳ ನಡುವೆ ಪ್ರತಿಭಟನೆ, ಆಕ್ರೋಶ ವ್ಯಕ್ತಪಡಿಸುತ್ತಿರುವುದು ಒಂದೆಡೆಯಾದರೆ ಸರಕಾರಿ ಸ್ವಾಮ್ಯದ ವಿಚಾಟ್‌ನಲ್ಲಿಯೇ ಕೋಡ್‌ವರ್ಡ್‌ ಮೂಲಕ ಸರಕಾರದ ನಿಯಮಗಳ ವಿರುದ್ಧ ಕೋಪ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಗುಪ್ತವಾಗಿ, ಸಂಕೇತ ಭಾಷೆಗಳಲ್ಲಿ ಅಭಿಪ್ರಾಯಗಳನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ. ಹೀಗಾಗಿ ಚೀನದ ಪೊಲೀಸರಿಗೆ ಪೋಸ್ಟ್‌ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಅಸಾಧ್ಯವಾಗದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆ್ಯಪ್‌ ಗಳ ಜತೆಗೆ ಟೆಲಿಗ್ರಾಂ ಆ್ಯಪ್‌ ಗಳ ಮೂಲಕ ಪ್ರತಿಭಟನೆ ನಡೆಸಲು ಸರಕಾರದ ನೀತಿಗಳನ್ನು ಪ್ರಶ್ನಿಸುವ ವಿಚಾರಗಳನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ. ಇದಲ್ಲದೆ ಟ್ವಿಟರ್‌ನಲ್ಲಿ ಕೂಡ ನಕಲಿ ಖಾತೆಗಳ ಮೂಲಕ ಸರಕಾರವನ್ನು ಟೀಕಿಸಲಾಗುತ್ತಿದೆ.

Advertisement

ಸಡಿಲಿಕೆಗೆ ಚಿಂತನೆ: ಮತ್ತೊಂದೆಡೆ ಪ್ರತಿಭಟನೆ ಯಿಂದ ಕಂಗೆಟ್ಟ ಚೀನ ಕಠಿನ ನಿಲುವು ಸಡಿಲಗೊಳಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ನೀತಿಯನ್ನು ಸಮರ್ಥಿಸಿಕೊಂಡಿರುವ ಚೀನ ವಿದೇಶಾಂಗ ಸಚಿವಾಲಯ ಬದಲಾಗುತ್ತಿರುವ ಸೋಂಕಿನ ಪರಿಸ್ಥಿತಿಗೆ ಅನುಗುಣವಾಗಿ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದು ಹೇಳಿಕೊಂಡಿದೆ.

ಮತ್ತೆ ಲಸಿಕೆ: ಇದೇ ವೇಳೆ ದೇಶದಲ್ಲಿ ಮತ್ತೆ ಸೋಂಕು ಹೆಚ್ಚಾಗಿರುವುದರಿಂದ ಹಿರಿಯ ನಾಗರಿಕರಿಗೆ ಲಸಿಕೆ ಹಾಕಿಸಲು ಜಿನ್‌ಪಿಂಗ್‌ ಸರಕಾರ ಆದೇಶ ನೀಡಿದೆ.

ಮನೆಗೆ ತೆರಳಲು ವಿದ್ಯಾರ್ಥಿಗಳಿಗೆ ಸೂಚನೆ
ವಿ.ವಿ.ಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲಾರಂಭಿಸಿದ್ದರಿಂದ ಅವರನ್ನು ಮನೆಗೆ ತೆರಳಲು ಸೂಚಿಸಲಾಗಿದೆ. ವಿವಿಗಳ ವತಿಯಿಂದಲೇ ರೈಲು ಮತ್ತು ಬಸ್‌ ನಿಲ್ದಾಣಕ್ಕೆ ವಾಹನಗಳ ಮೂಲಕ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಬೀಜಿಂಗ್‌, ಶಾಂಘೈ ಮತ್ತು ಇತರ ನಗರಗಳಲ್ಲಿ ದಮನಕಾರಿ ನೀತಿಗಳನ್ನು ಅನುಷ್ಠಾನಗೊಳಿಸಲು ಪೊಲೀಸರಿಗೆ ಸೂಚಿಸಲಾಗಿದೆ. ಹೀಗಾಗಿ ಮಂಗಳವಾರ ಪ್ರತಿಭಟನೆ ನಡೆದಿಲ್ಲ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next