ಚಿಕ್ಕಮಗಳೂರು: ಶ್ರೀರಾಮ ಸೇನೆ ವತಿಯಿಂದ ಈ ವರ್ಷದ ದತ್ತಮಾಲಾ ಅಭಿಯಾನವು ನ.13 ರಿಂದ 19ರ ವರೆಗೆ ನಡೆಯಲಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ವರ್ಷದ ದತ್ತಮಾಲಾ ಅಭಿಯಾನ ಇದಾಗಿದ್ದು, ನ.13ರಿಂದ ಮಾಲಾಧಾರಣೆ ಪ್ರಾರಂಭವಾಗಲಿದೆ. ನ.19ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಧರ್ಮಸಭೆ ನಡೆಯಲಿದೆ. ನಂತರ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆಯಲಾಗುವುದು. ಆ ನಂತರ ಅಲ್ಲಿ ಹೋಮ ಹವನ ಪೂಜಾ ವಿಧಿ ವಿಧಾನಗಳ ನಂತರ ಧರ್ಮಸಭೆ ನಡೆಯಲಿದೆ ಎಂದರು.
ದತ್ತಮಾಲಾ ಅಭಿಯಾನದ ಕೊನೆಯ ದಿನದ ಕಾರ್ಯಕ್ರಮಗಳಲ್ಲಿ ಸುಮಾರು 50 ಜನ ನಾಗಾಸಾಧುಗಳು ಹಾಗೂ ರಾಜ್ಯದ ಬೇರೆ ಬೇರೆ ಮಠಗಳ 10 ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ದತ್ತಪೀಠದಲ್ಲಿ ನಡೆಯುವ ಧರ್ಮಸಭೆಯಲ್ಲಿ ದತ್ತಾತ್ರೇಯ ಪೀಠವನ್ನು ಹಿಂದೂಗಳಿಗೆ ನೀಡುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ತಿಳಿಸಿದರು.
ದತ್ತಪೀಠ ವಿವಾದವನ್ನು ಎರಡೂ ಸಮುದಾಯಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಸೌಹಾರ್ದತೆಯಿಂದ ಸಮಸ್ಯೆ ಬಗೆಹರಿಸುವಂತೆ 2015ರಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ. ಆದರೆ ರಾಜ್ಯ ಸರ್ಕಾರ ಇದ್ಯಾವುದನ್ನೂ ಮಾಡದೆ ಬಾಯಿಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗಾಸಾಧುಗಳಿಗೆ ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಈಗಲೆ ಮನವಿ ಮಾಡಲಾಗುವುದು. ಕಳೆದ ವರ್ಷ ನಾಗಾಸಾಧುಗಳಿಗೆ ಪೂಜೆಗೆ ಅವಕಾಶ ನೀಡದೆ ಅವಮಾನಿಸಲಾಗಿದೆ. ಮತ್ತೆ ಅಂತಹುದೇ ಘಟನೆ ಮರುಕಳಿಸಬಾರದು ಎಂದರು.