ಪಲ್ಲೆಕೆಲೆ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋಲು ಅವಮಾನ ಅನುಭವಿಸಿದ್ದ ಶ್ರೀಲಂಕಾ ಕೊನೆಯ ಟಿ20 ಪಂದ್ಯದಲ್ಲಿ ತಿರುಗಿ ಬಿದ್ದಿದೆ. ನಾಯಕ ದಾಸುನ್ ಶನಕ ಅದ್ಭುತ ಬ್ಯಾಟಿಂಗ್ ಕಾರಣದಿಂದ ಲಂಕಾ ತಂಡ ಆಸೀಸ್ ನಿಂದ ಜಯ ಕಸಿದಿದೆ.
ಪಲ್ಲೆಕೆಲೆ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಲಂಕಾ ಒಂದು ಎಸೆತ ಬಾಕಿ ಇರುವಂತೆ ಜಯ ಸಾಧಿಸಿದೆ.
ಮೊದಲೆರಡು ಪಂದ್ಯದಂತೆ ಮೂರನೇ ಪಂದ್ಯದಲ್ಲೂ ಲಂಕಾ ತಂಡ ಬ್ಯಾಟಿಂಗ್ ಕುಸಿತ ಅನುಭವಿಸಿತ್ತು. ಕೊನೆಯ ಮೂರು ಓವರ್ ನಲ್ಲಿ ತಂಡಕ್ಕೆ 59 ರನ್ ಅಗತ್ಯವಿತ್ತು. ಈ ವೇಳೆ ಸಿಡಿದು ನಿಂತ ನಾಯಕ ಶನಕ, ಹ್ಯಾಜಲ್ ವುಡ್ ರ ಒಂದೇ ಓವರ್ ನಲ್ಲಿ 22 ರನ್ ಚಚ್ಚಿದರು. ಎರಡು ಓವರ್ ಗೆ 37 ರನ್, ಕೊನೆಯ ಓವರ್ ಗೆ 19 ರನ್ ತೆಗೆಯಬೇಕಾದ ಸವಾಲನ್ನು ಮೆಟ್ಟಿ ನಿಂತ ಶನಕ ತಂಡಕ್ಕೆ ಅದ್ಭುತ ಜಯ ಒದಗಿಸಿಕೊಟ್ಟರು.
ಇದನ್ನೂ ಓದಿ:ಕಟಕ್‌ನಲ್ಲಿ ಒಲಿದೀತೇ ಗೆಲುವು? ಇಂದು ದ.ಆಫ್ರಿಕಾ ವಿರುದ್ಧ ದ್ವಿತೀಯ ಟಿ20 ಪಂದ್ಯ
ಕೇವಲ 25 ಎಸೆತ ಎದುರಿಸಿದ ಶನಕ ನಾಲ್ಕು ಸಿಕ್ಸರ್ ಮತ್ತು ಐದು ಬೌಂಡರಿ ನೆರವಿನಿಂದ ಅಜೇಯ 54 ರನ್ ಸಿಡಿಸಿದರು. ಏಳನೇ ವಿಕೆಟ್ ಗೆ ಚಾಮಿಕ ಕರುಣರತ್ನೆ ಜೊತೆ ಅಜೇಯ 69 ರನ್ ಜೊತೆಯಾಟವಾಡಿದರು.
ಮೊದಲ ಮೂರು ಓವರ್ ಗಳಲ್ಲಿ ಕೇವಲ ಮೂರು ರನ್ ಬಿಟ್ಟುಕೊಟ್ಟಿದ್ದ ಜೋಶ್ ಹ್ಯಾಜಲ್ ವುಡ್ ಅಂತಿಮವಾಗಿ ನಾಲ್ಕು ಓವರ್ ನಲ್ಲಿ 25 ರನ್ ನೀಡಿದರು. ಇದು ಶನಕ ಬ್ಯಾಟಿಂಗ್ ವೈಭವಕ್ಕೆ ಸಾಕ್ಷಿ.
ಸರಣಿಯನ್ನು ಆಸೀಸ್ 2-1 ಅಂತರದಿಂದ ಗೆದ್ದುಕೊಂಡಿತು. ಶನಕ ಪಂದ್ಯಶ್ರೇಷ್ಠರಾದರೆ, ಅರೋನ್ ಫಿಂಚ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.