ಬೆಂಗಳೂರು : ‘ಭಾರತ ಮತ್ತು ಫ್ರಾನ್ಸ್ ನಡುವೆ ಏರ್ಪಟ್ಟಿರುವ ರಫೇಲ್ ಫೈಟರ್ ಜೆಟ್ ವ್ಯವಹಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ’ ಎಂದು ರಫೇಲ್ ಪೂರೈಕೆದಾರ ಸಂಸ್ಥೆ ಡಸಾಲ್ಟ್ ಏವಿಯೇಶನ್ ಸಿಇಓ ಎರಿಕ್ ಟ್ರ್ಯಾಪಿಯರ್ ಪುನರುಚ್ಚರಿಸಿದ್ದಾರೆ.
2019ರ ಏರೋ ಇಂಡಿಯಾ ಶೋ ದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವ ಟ್ರ್ಯಾಪಿಯರ್, ‘ಭಾರತ ಸರಕಾರ 36 ರಫೇಲ್ ಫೈಟರ್ ಜೆಟ್‌ಗಳ ಪೂರೈಕೆಯನ್ನು ಆದೇಶಿಸಿರುವ ಪ್ರಕಾರ ಡಸಾಲ್ಟ್ ಕಂಪೆನಿಯು ಆದನ್ನು ಸರಿಯಾದ ಸಮಯದೊಳಗೆ ಪೂರೈಸಲಿದೆ’ ಎಂದು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
‘ಭಾರತ ಸರಕಾರಕ್ಕೆ ಒಂದೊಮ್ಮೆ ಇನ್ನೂ ಹೆಚ್ಚಿನ ಸಂಖ್ಯೆಯ ರಫೇಲ್ ಫೈಟರ್ ಜೆಟ್ ಗಳು ಬೇಕೆಂದಾದರೆ ಅವುಗಳನ್ನು ಕೂಡ ನಿಗದಿತ ಕಾಲಮಿತಿಯೊಳಗೆ ಪೂರೈಸಲು ಕಂಪೆನಿ ಸಂತಸಪಡುತ್ತದೆ’ ಎಂದು ಟ್ರ್ಯಾಪಿಯರ್ ಹೇಳಿದರು.
‘ಭಾರತ – ಫ್ರಾನ್ಸ್ ಒಪ್ಪಂದದ ಪ್ರಕಾರ 2019ರ ಸೆಪ್ಟಂಬರ್ ನಲ್ಲಿ ಭಾರತೀಯ ವಾಯು ಪಡೆಯು ಮೊದಲ ರಫೇಲ್ ಫೈಟರ್ ಜೆಟ್ ಪಡೆಯಲಿದೆ ಮತ್ತು ಇದು ನಿಗದಿತ ಕಾಲಮಿತಿಗೆ ಅನುಗುಣವಾಗಿಯೇ ಇದೆ’ ಎಂದು ಟ್ರ್ಯಾಪಿಯರ್ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿರುವಂತೆ ಡಸಾಲ್ಟ್ – ರಿಲಯನ್ಸ್ ಜಂಟಿ ಉದ್ಯಮದಲ್ಲಿ ಯಾರಿಗೂ ಯಾವುದೇ ರೀತಿಯ ಕಿಕ್ ಬ್ಯಾಕ್ ಸಂದಿಲ್ಲ ಎಂದು ಟ್ರ್ಯಾಪಿಯರ್ ಪುನರುಚ್ಚರಿಸಿದರು.