ಮೂಡುಬಿದಿರೆ: ಕೆನಡಾದ ವ್ಯಾಂಕೋವರ್‌ನ ಜೈನ್ ಸೆಂಟರ್‌ನಲ್ಲಿ ಸೆ. 19ರಿಂದ 29ರ ವರೆಗೆ ಮೂಡುಬಿದಿರೆಯ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ “ದಶಲಕ್ಷಣ ಪರ್ವ” ಆಚರಿಸಲಾಯಿತು.
ಹತ್ತು ದಿನಗಳಲ್ಲಿ ನಿತ್ಯ ಬೆಳಗ್ಗೆ 3 ಗಂಟೆಗೆ ಅಭಿಷೇಕ ಪೂಜೆ, ದಶ ಮಂಡಲ ಆರಾಧನೆ, ಸಂಜೆ ಆರತಿ, ಪ್ರವಚನ ನಡೆದವು. ಭಟ್ಟಾರಕರು ತತ್ತ್ವಾರ್ಥದ ಸೂತ್ರದ ಒಂದೊಂದು ಅಧ್ಯಾಯ ಪಠಿಸಿ ಅರ್ಥ ಹೇಳಿದರು.
ಮುನ್ನೂರಕ್ಕೂ ಅಧಿಕ ಶ್ರಾವಕ ಶ್ರಾವಿಕೆಯರಿರುವ ಈ ತಾಣದಲ್ಲಿ ಉತ್ತಮ ಕ್ಷಮಾ, ಉತ್ತಮ ಮಾರ್ಧವ, ಉತ್ತಮ ಅರ್ಜವ, ಉತ್ತಮ ಶೌಚ , ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಅಕಿಂಚನ್ಯ, ಉತ್ತಮ ಬ್ರಹ್ಮ ಚರ್ಯ ಹೀಗೆ ದಶಧರ್ಮ ಆಚರಣೆ ನಡೆಯಿತು ಹಾಗೂ ಅನಂತ ಚತುರ್ದಶಿ ಆಚರಿಸಲಾಯಿತು.
ಸೆ. 29ರಂದು ಭಾರತಕ್ಕೆ ಮರಳಿದ ಭಟ್ಟಾರಕರು ಸೆ.30ರಂದು ಕೊಟ್ಟಾಯಂನಲ್ಲಿ ಏಷ್ಯಾ ಕ್ರೈಸ್ತ ಸಮಾವೇಶ, ಅಂತಾರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದರು.