Advertisement
ಮೈಸೂರು ರಾಜವಂಶಸ್ಥರು ಅರಮನೆಯಲ್ಲಿ ನಡೆಸುವ ನವರಾತ್ರಿ ದಸರಾ ಉತ್ಸವ ಸಂಪೂರ್ಣವಾಗಿ ಧಾರ್ಮಿಕ ಆಚರಣೆಗಳದ್ದಾಗಿರುತ್ತದೆ. ಸರ್ಕಾರ ನಡೆಸುವ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಧಾರ್ಮಿಕ ಆಚರಣೆಯ ಜೊತೆಗೆ ಬೇರೆ ಬೇರೆ ಆಯಾಮಗಳೂ ಬೆರತುಕೊಂಡಿವೆ. ಹತ್ತು ದಿನಗಳ ಕಾಲ ನಡೆಯುವ ನಾಡಹಬ್ಬ ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳುವುದೇ ಹಬ್ಬ.
Related Articles
Advertisement
ಸಾರಿಗೆ ವಹಿವಾಟು ಜೋರು: ಪಂಚತಾರಾ ಹೋಟೆಲ್‌ಗಳಿಂದ ಹಿಡಿದು ಮೈಸೂರಿನ ಹೋಟೆಲ್ ಮತ್ತು ವಸತಿಗೃಹಗಳಲ್ಲಿ ಸುಮಾರು 6 ಸಾವಿರ ಕೊಠಡಿಗಳಿವೆ. ಬಹುತೇಕ ಕೊಠಡಿಗಳನ್ನು ಪ್ರವಾಸಿಗರು ಈಗಾಗಲೇ ಕಾದಿರಿಸಿದ್ದಾರೆ. ಮೈಸೂರಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಿದ ಪ್ರವಾಸಿಗರು, ಪಕ್ಕದ ಕೊಡಗು, ಮಂಡ್ಯ, ಹಾಸನ ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ತೆರಳುವುದು ವಾಡಿಕೆ. ಬಹುತೇಕ ಪ್ರವಾಸಿಗರು ಟೂರ್ ಮತ್ತು ಟ್ರಾವೆಲ್ಸ್ ಏಜೆನ್ಸಿಗಳನ್ನು ಸಂಪರ್ಕಿಸಿ ಈಗಾಗಲೇ ವಾಹನಗಳನ್ನು ಮುಂಗಡ ಕಾದಿರಿಸಿದ್ದಾರೆ. ಜೊತೆಗೆ ಕೆಎಸ್ಸಾರ್ಟಿಸಿ ಕೂಡ ಗಿರಿದರ್ಶಿನಿ, ಜಲ ದರ್ಶಿನಿ, ದೇವ ದರ್ಶಿನಿ ಹೆಸರಿನಲ್ಲಿ ಪ್ಯಾಕೇಜ್ ಟೂರ್‌ಗಳನ್ನು ಆಯೋಜಿಸಿದೆ.
ಹೆಚ್ಚಿನ ಪ್ರವಾಸಿಗರು ಕುದುರೆಗಾಡಿಗಳಲ್ಲಿ ಕುಳಿತು ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಇಂಥವರಿ ಗಾಗಿಯೇ ಅರಮನೆಯ ಸುತ್ತಮುತ್ತ, ಗ್ರಾಮಾಂತರ ಬಸ್ ನಿಲ್ದಾಣದ ಎದುರು, ಅಗ್ರಹಾರ ವೃತ್ತ, ಕುಕ್ಕರಹಳ್ಳಿ ಕೆರೆ ಮುಖ್ಯದ್ವಾರದ ಎದುರು ಸೇರಿದಂತೆ ಹಲವು ಕಡೆಗಳಲ್ಲಿ ಟಾಂಗಾ ನಿಲ್ದಾಣಗಳನ್ನು ಕಟ್ಟಲಾಗಿದೆ. ಇಲ್ಲಿಂದ ಟಾಂಗಾ ಏರಿ ನಗರ ಸುತ್ತುವುದೇ ಹಬ್ಬ.
ನಗರದಾದ್ಯಂತ ಶಾಪಿಂಗ್ ಮೇಳ: ದಸರಾ ಮಹೋತ್ಸವ ಉದ್ಘಾಟನಾ ದಿನವೇ ಆರಂಭವಾಗಿ 90 ದಿನಗಳ ಕಾಲ ನಡೆಯುವ ದಸರಾ ವಸ್ತುಪ್ರದರ್ಶನ, ಪ್ರವಾಸಿಗರ ನೆಚ್ಚಿನ ಶಾಪಿಂಗ್ ತಾಣ. ಇಲ್ಲಿ ವಸ್ತುಗಳನ್ನು ಕೊಳ್ಳುವ ಜತೆಗೆ ಮನರಂಜನೆ ಕಾರ್ಯಕ್ರಮವೂ ನಡೆಯುತ್ತದೆ. ಅಂಬಾವಿಲಾಸ ಅರಮನೆ ಮುಂಭಾಗ ಸೇರಿದಂತೆ ನಗರದ ವಿವಿಧ ವೇದಿಕೆಗಳಲ್ಲಿ ನಡೆಯುವ ಖ್ಯಾತನಾಮ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗುವುದಲ್ಲದೆ, ದಸರಾ ಆಹಾರ ಮೇಳದಲ್ಲಿ ನಾಲಗೆ ರುಚಿಯನ್ನೂ ತಣಿಸಿಕೊಳ್ಳಬಹುದು. ಪುಸ್ತಕ ಓದುವ ಹವ್ಯಾಸ ಇರುವವರಿಗೆ ದಸರಾ ಪುಸ್ತಕ ಮೇಳ ಕೂಡ ಇರಲಿದೆ. ಒಟ್ಟಾರೆ, ಪ್ರವಾಸಿಗರಿಗೆ ದಸರಾ ಜಂಬೂಸವಾರಿ ಮಾತ್ರವಲ್ಲ; ಬಹು ಆಯಾಮಗಳಲ್ಲಿ ತೆರೆದುಕೊಂಡಿದೆ.
* ಗಿರೀಶ್ ಹುಣಸೂರು