Advertisement

ದಸರಾ ಒಗ್ಗರಣೆ

06:00 AM Oct 17, 2018 | |

ಕರ್ಪೂರ, ಊದುಬತ್ತಿಯ ಘಮ ಹೆಚ್ಚೋ? ಅಡುಗೆಮನೆಯ ಒಗ್ಗರಣೆಯ ಪರಿಮಳ ಹೆಚ್ಚೋ? ಇವೆರಡು ದ್ವಂದ್ವ ಪ್ರತಿ ಹಬ್ಬದಲ್ಲೂ ಇಣುಕುವಂಥದ್ದು. ಹಾಗೆ ನೋಡಿದರೆ, ಹಬ್ಬದ ಅದ್ಧೂರಿತನ ಜಾಹೀರುಗೊಳ್ಳುವುದೇ ಅಡುಗೆ ಖಾದ್ಯಗಳಿಂದ. ಒಂಬತ್ತು ದಿನಗಳಿಂದ ದೇವಿಯ ಮುಂದೆ ನವರಾತ್ರಿಯ ನಾನಾ ನೈವೇದ್ಯವನ್ನಿಟ್ಟು, ಈಗ ನಮ್ಮ ಪಾಲಿಗೆ ಏನುಂಟು? ಅಂತ ಚಿಂತೆಗೀಡಾಗುವುದು ಬೇಡ. ದಸರಾ ಪಾಕ ಕೊಡುಗೆಯೆಂಬಂತೆ “ಅವಳು’ ನಿಮ್ಮ ಮುಂದೆ ವಿಶಿಷ್ಟ ರುಚಿಯ, ವಿನೂತನ ಖಾದ್ಯಗಳನ್ನು ಮುಂದಿಟ್ಟಿದೆ…

Advertisement

ಬಿಸ್ಕೆಟ್‌ ಹೋಳಿಗೆ
ಬೇಕಾಗುವ ಸಾಮಗ್ರಿ:
ಚಾಕೊಲೇಟ್‌ ಕ್ರೀಮ್‌ ಬಿಸ್ಕೇಟ್‌- 1 ಪ್ಯಾಕೆಟ್‌, ಆರೇಂಜ್‌ ಕ್ರೀಮ್‌ ಬಿಸ್ಕೇಟ್‌- 1 ಪ್ಯಾಕೆಟ್‌, ಕಂಡೆನ್ಸ್‌ಡ್‌ ಮಿಲ್ಕ್- 3 ಲೀ. ದೊಡ್ಡ ಚಮಚ ಪ್ರತಿ ಪ್ಯಾಕೆಟ್‌ಗೆ, ಹೋಳಿಗೆ ಹಚ್ಚಲು ಎಣ್ಣೆ – 1 ಚಮಚ ಪ್ರತಿ ಹೋಳಿಗೆಗೆ, ಗೋಧಿ ಹಿಟ್ಟು- 1 ಬಟ್ಟಲು (ಮೈದಾ ಹಿಟ್ಟನ್ನೂ ಬಳಸಬಹುದು), ಚಿಟಿಕೆ ಉಪ್ಪು, ಎಣ್ಣೆ- 1 ಸಣ್ಣ ಚಮಚ. 

ಮಾಡುವ ವಿಧಾನ: ಗೋಧಿ ಹಿಟ್ಟು, ಚಿಟಿಕೆ ಉಪ್ಪು ಮತ್ತು ಎಣ್ಣೆಯನ್ನು ಸ್ವಲ್ಪ ನೀರು ಹಾಕಿ ಮೆತ್ತಗೆ ನಾದಿ 15 ನಿಮಿಷ ನೆನೆಯಲು ಬಿಡಿ. ಅದು ನೆನೆಯುವವರೆಗೂ ಹೂರಣವನ್ನು ಸಿದ್ಧಪಡಿಸೋಣ. ಮೊದಲು ಚಾಕೊಲೇಟ್‌ ಕ್ರೀಮ್‌ ಬಿಸ್ಕೆಟನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಆರೇಂಜ್‌ ಕ್ರೀಮ್‌ ಬಿಸ್ಕೆಟ್‌ ಅನ್ನು ಕೂಡ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಎರಡನ್ನೂ ಬೇರೆ ಬೇರೆ ತಟ್ಟೆ ಅಥವಾ ಪಾತ್ರೆಯಲ್ಲಿ ಹಾಕಿಕೊಳ್ಳಿ. ಎರಡಕ್ಕೂ ಕಂಡೆನ್ಸ್‌ಡ್‌ ಮಿಲ್ಕನ್ನು ಹಾಕಿ ಸರಿಯಾಗಿ ಕೂಡಿಸಿ ಮೆತ್ತನೆ ನಾದಿಕೊಳ್ಳಿ. ಅದರಿಂದ ಸಣ್ಣ ಸಣ್ಣ ಉಂಡಿಗಳನ್ನು ಮಾಡಿ ಪಕ್ಕದಲ್ಲಿಡಿ. ನಾದಿದ ಗೋಧಿ ಹಿಟ್ಟಿನ ಕಣಕದಿಂದ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ. ಒಂದು ಉಂಡೆಯನ್ನು ಸಣ್ಣ ಪೂರಿ ಅಳತೆಗೆ ಉದ್ದಿಕೊಳ್ಳಬೇಕು. ಅದರಲ್ಲಿ ಚಾಕೊಲೇಟ್‌ ಉಂಡಿಯನ್ನು ಇಟ್ಟು ಮುಚ್ಚಿ. ಈಗ ಅದನ್ನು ಹೋಳಿಗೆ ಅಳತೆಗೆ ಉದ್ದಿ, ಬಿಸಿ ಹೆಂಚಿನ ಮೇಲೆ ಅದನ್ನು ಎಣ್ಣೆ ಸವರಿ ಬೇಯಿಸಿಕೊಳ್ಳಿ. ಬಿಸ್ಕೇಟ್‌ ಹೋಳಿಗೆಗಳನ್ನು ಎರಡು ದಿನಗಳವರೆಗೂ ಇಡಬಹುದು. 

ನಿಂಬೆ ಹಣ್ಣಿನ ಚಟ್ನಿ
ಬೇಕಾಗುವ ಸಾಮಗ್ರಿ:
ದೊಡ್ಡ ತಾಜಾ ನಿಂಬೆ ಹಣ್ಣು- 3 ರಿಂದ 4, ಮೆಂತ್ಯೆ ಕಾಳು- 1 ಸಣ್ಣ ಚಮಚ, ಕಲ್ಲುಪ್ಪು- ರುಚಿಗೆ (ಸಣ್ಣ ಉಪ್ಪು ಕೂಡ ಬಳಸಬಹುದು), ಸಕ್ಕರೆ- 1 ದೊಡ್ಡ ಚಮಚ (ನಿಂಬೆ ಹುಳಿ ಜಾಸ್ತಿ ಇದ್ದರೆ ಇನ್ನಷ್ಟು ಬಳಸಬಹುದು). ಸಕ್ಕರೆ ಬೇಡವಾದರೆ, ಬೆಲ್ಲವನ್ನು ಬಳಸಬಹುದು. ಕೆಂಪು ಖಾರದ ಪುಡಿ- 2 ಚಮಚ.

ಒಗ್ಗರಣೆಗೆ: (ಬೇಕಾದರೆ) ಎಣ್ಣೆ – 1 ಸಣ್ಣ ಚಮಚ, ಸಾಸಿವೆ- 1 ಸಣ್ಣ ಚಮಚ, ಇಂಗು- ಚಿಟಿಕೆ 

Advertisement

ಮಾಡುವ ವಿಧಾನ: ನಿಂಬೆ ಹಣ್ಣುಗಳನ್ನು ತೊಳೆದು ಚೆನ್ನಾಗಿ ಒರೆಸಿ ನಾಲ್ಕು ಹೋಳುಗಳನ್ನಾಗಿ ಕತ್ತರಿಸಿ. ಅದರಲ್ಲಿರುವ ಬೀಜಗಳನ್ನು ತೆಗೆಯಿರಿ. (ಇಲ್ಲವಾದರೆ ನಮ್ಮ ಚಟ್ನಿ ಕಹಿಯಾಗುತ್ತದೆ). ಈಗ ಕತ್ತರಿಸಿದ ಈ ಹೋಳು ಮತ್ತು ಉಳಿದೆಲ್ಲ ಸಾಮಗ್ರಿಯನ್ನು ಕೂಡಿಸಿ ಮಿಕ್ಸಿಯಲ್ಲಿ ಹಾಕಿ ಚಟ್ನಿ ರುಬ್ಬಿಕೊಳ್ಳಿ. ಬೇಕಾದವರು ಈ ಚಟ್ನಿಗೆ ಮೇಲೆ ಹೇಳಿದ ಎಣ್ಣೆ, ಸಾಸಿವೆ ಮತ್ತು ಇಂಗನ್ನು ಹಾಕಿ ಒಗ್ಗರಣೆ ಹಾಕಿ. ಒಂದು ಗಾಜಿನ ಭರಣಿಯಲ್ಲಿ ಹಾಕಿಟ್ಟುಕೊಳ್ಳಿ. 

ಕಾರ್ನ್ಫ್ಲೇಕ್ಸ್‌ ಚೂಡಾ
ಬೇಕಾಗುವ ಸಾಮಗ್ರಿ:
ಕಾರ್ನ್ಫ್ಲೇಕ್ಸ್‌- 1 ಕಪ್‌, ಸಾಸಿವೆ- 1 ಚಮಚ, ಜೀರಿಗೆ- 1 ಚಮಚ, ಪುಟಾಣಿ- 2 ದೊಡ್ಡ ಚಮಚ, ಹುರಿದ ಶೇಂಗಾ- 2 ದೊಡ್ಡ ಚಮಚ, ಕರಿಬೇವು- ಸ್ವಲ್ಪ, ಖಾರದ ಪುಡಿ- 1 ಸಣ್ಣ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ- 1 ಸಣ್ಣ ಚಮಚ, ಎಣ್ಣೆ – 2 ದೊಡ್ಡ ಚಮಚ, ಹುರಿದ ಗೋಡಂಬಿ – 10ರಿಂದ 12(ಬೇಕಾದರೆ)

ಮಾಡುವ ವಿಧಾನ: ಎಣ್ಣೆಯನ್ನು ಬಾಣಲೆಯಲ್ಲಿ ಕಾಯಿಸಿಕೊಳ್ಳಿ. ಸಣ್ಣ ಉರಿಯಲ್ಲಿಟ್ಟು ಸಾಸಿವೆ, ಜೀರಿಗೆ ಹಾಕಿ, ಸಿಡಿಯುವವರೆಗೂ ಕಾಯಿರಿ. ಪುಟಾಣಿ, ಕರಿಬೇವು ಹಾಕಿ ಕೈಯಾಡಿಸಿ. ಉರಿಯನ್ನು ಆರಿಸಿ, ಕೆಳಗಿಳಿಸಿ. ಅದಕ್ಕೆ ಶೇಂಗಾ ಕಾಳು, ಗೋಡಂಬಿ, ಉಪ್ಪು, ಸಕ್ಕರೆ ಮತ್ತು ಖಾರದ ಪುಡಿಯನ್ನು ಹಾಕಿ, ಚೆನ್ನಾಗಿ ಕಲಸಿ. ಅದು ತಣ್ಣಗಾದ ಮೇಲೆ ಅದಕ್ಕೆ ಕಾರ್ನ್ಫ್ಲೆಕ್ಸನ್ನು ಹಾಕಿ ಚೆನ್ನಾಗಿ ಕಲಸಿ. ಈಗ ಕಾರ್ನ್ಫ್ಲೇಕ್ಸ್‌ ಚೂಡಾ ಸಿದ್ಧ.

ಸೇಬು ಹಣ್ಣಿನ ರಸಂ
ಬೇಕಾಗುವ ಸಾಮಗ್ರಿ:
ರಸಭರಿತ ಸೇಬುಹಣ್ಣು- 1 ದೊಡ್ಡ, ಸಣ್ಣ ಟೊಮೇಟೊ – 1 (ರಸಂ ಬಣ್ಣ ಬರಲು), ಎಣ್ಣೆ – 1 ದೊಡ್ಡ ಚಮಚ, ಕರಿಬೇವು – ಸ್ವಲ್ಪ, ಹಸಿಮೆಣಸಿನಕಾಯಿ- 1, ಬೆಳ್ಳುಳ್ಳಿ- 6ರಿಂದ 8 ಹೋಳು, ಸಾಸಿವೆ- 1 ಸಣ್ಣ ಚಮಚ, ಜೀರಿಗೆ- 1 ಸಣ್ಣ ಚಮಚ, ಕೆಂಪು ಖಾರ- 2 ದೊಡ್ಡ ಚಮಚ, ಹವೀಜ ಪುಡಿ – 1 ಸಣ್ಣ ಚಮಚ, ಸಕ್ಕರೆ – 1 ಸಣ್ಣ ಚಮಚ, ಅರಿಶಿನ- 1/4 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ನೀರು- 1 ದೊಡ್ಡ ಕಪ್‌, ತಾಜಾ ಕೊತ್ತಂಬರಿ- 1 ದೊಡ್ಡ ಚಮಚ.

ಮಾಡುವ ವಿಧಾನ: ಸೇಬುಹಣ್ಣನ್ನು ತೊಳೆದು ಒರೆಸಿ ಅದನ್ನು ತುರಿದಿಟ್ಟುಕೊಳ್ಳಿ (ಬಹಳ ಹೊತ್ತು ಇಟ್ಟರೆ ಕಪ್ಪಾಗುತ್ತದೆ), ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಅದಕ್ಕೆ ಸಾಸಿವೆ, ಜೀರಿಗೆ ಹಾಕಿ ಸಿಡಿಯುವವರೆಗೂ ಕಾಯಿರಿ, ಬೆಳ್ಳುಳ್ಳಿ ಹಾಕಿ ಕೈಯಾಡಿಸಿ. ಈಗ ಕರಿಬೇವು ಮತ್ತು ಹಸಿಮೆಣಸಿನಕಾಯಿ ಹಾಕಿ ಅರ್ಧ ನಿಮಿಷ ಹುರಿಯಿರಿ. ಟೊಮೇಟೊ ಮತ್ತು ಎಲ್ಲ ಒಣ ಪುಡಿಗಳನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ತುರಿದ ಸೇಬುಹಣ್ಣು ಹಾಕಿ ಮತ್ತೆ ಕೂಡಿಸಿ. ನೀರನ್ನು ಹಾಕಿ 3 ನಿಮಿಷ ಕುದಿಸಿ ಉರಿಯನ್ನು ಆರಿಸಿ. ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸೇಬುಹಣ್ಣಿನ ರಸಂ ಸವಿಯಲು ಸಿದ್ಧ. 

ತರಕಾರಿ ಮಸಾಲೆ ಅನ್ನ
ಬೇಕಾಗುವ ಸಾಮಗ್ರಿ:
ಬಾಸುಮತಿ ಅಕ್ಕಿ- 2 ಕಪ್‌ (ಸಾದಾ ಅಕ್ಕಿಯನ್ನೂ ಬಳಸಬಹುದು), ಬೀಟ್‌ರೂಟ್‌- 1 ಸಣ್ಣ, ಪಾಲಕ್‌ – 1 ಸಣ್ಣ ಸಿವುಡು, ಗಜ್ಜರಿ- 1 ದೊಡ್ಡದು, ಈರುಳ್ಳಿ- 1 ಸಣ್ಣ, ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಿ. ಕಾಲಿಫ್ಲವರ್‌- 10ರಿಂದ 12 ಹೂವುಗಳು, ಪನೀರ್‌ – 8ರಿಂದ 10 ಕ್ಯೂಬ್‌ (ಬೇಕಾದರೆ), ಸೋಯಾ ನುಗ್ಗೆಟ್ಸ್‌- 10ರಿಂದ 12 (ಬೇಕಾದರೆ ಬಿಸಿ ನೀರಲ್ಲಿಟ್ಟು, ನೀರನ್ನು ಹಿಂಡಿ ತೆಗೆದಿಡಿ), ಟೊಮೇಟೊ- 1 ದೊಡ್ಡದು, ದಾಲಿcನಿ ಎಲೆ- 2, ದಾಲಿcನಿ ಕಡ್ಡಿ- 1 ಇಂಚು, ಲವಂಗ- 3, ಏಲಕ್ಕಿ- 1, ಕೆಂಪು ಖಾರ- 2 ದೊಡ್ಡ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ – 1 ದೊಡ್ಡ ಚಮಚ, ಬೆಣ್ಣೆ – 1 ಸಣ್ಣ ಚಮಚ.

ಮಾಡುವ ವಿಧಾನ: ಅಕ್ಕಿಯನ್ನು ತೊಳೆದು, 15 ನಿಮಿಷ ನೆನೆಸಿ, ನೀರನ್ನು ಬಸಿದಿಡಿ. ಪಾಲಕ ಸೊಪ್ಪನ್ನು ಚೆನ್ನಾಗಿ ತೊಳೆದು, ಕತ್ತರಿಸಿ. ಗಜ್ಜರಿ ಮತ್ತು ಬೀಟ್‌ರೂಟನ್ನು ತೊಳೆದು, ಸಿಪ್ಪೆ ತೆಗೆದು, ಸಣ್ಣ ಹೋಳುಗಳನ್ನಾಗಿ ಮಾಡಿ. ಪಾಲಕ, ಗಜ್ಜರಿ ಮತ್ತು ಬೀಟ್‌ರೂಟನ್ನು ಬೇಯಿಸಿ. ತಣ್ಣಗಾದ ಮೇಲೆ ಅದರ ರಸವನ್ನು ಮಾಡಿಕೊಳ್ಳಿ. ಟೊಮೇಟೊ ಪೇಸ್ಟ್‌ ಮಾಡಿಡಿ. ಈಗ ಕುಕ್ಕರ್‌ನಲ್ಲಿ ಎಣ್ಣೆಯನ್ನು ಕಾಯಿಸಿ ಎಲ್ಲ ಒಣ ಮಸಾಲೆಗಳನ್ನು ಸ್ವಲ್ಪ ಜಜ್ಜಿ ಎಣ್ಣೆಯಲ್ಲಿ ಹಾಕಿ ಕೈಯಾಡಿಸಿ. ಹೆಚ್ಚಿದ ಈರುಳ್ಳಿ ಹಾಕಿ, ಕಂದು ಬಣ್ಣ ಬರುವವರೆಗೂ ಹುರಿಯಿರಿ. ಪನೀರ್‌, ಕಾಲಿಫ್ಲವರ್‌, ಸೋಯಾ ನುಗ್ಗೆಟ್ಸನ್ನು ಹಾಕಿ ಒಂದು ನಿಮಿಷ ಹುರಿಯಿರಿ, ಟೊಮೇಟೊ ಪೇಸ್ಟ್‌ ಮತ್ತು ತರಕಾರಿ ರಸವನ್ನು ಹಾಕಿ ಚೆನ್ನಾಗಿ ಬೇಯಿಸಿ. ಉಪ್ಪು, ಖಾರ ಮತ್ತು ಅಕ್ಕಿಯನ್ನು ಹಾಕಿ ಸರಿಯಾಗಿ ಕೂಡಿಸಿ. ಅಕ್ಕಿಗೆ ಬೇಕಾಗುವಷ್ಟು ಸ್ವಲ್ಪ ನೀರನ್ನು ಹಾಕಿ. ಮೇಲೆ ಬೆಣ್ಣೆಯನ್ನು ಹಾಕಿ, ಕುಕ್ಕರನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಎರಡು ವಿಶಲ್‌ವರೆಗೂ ಬಿಡಿ. ಕುಕ್ಕರ್‌ ಆರಿದ ಮೇಲೆ ತೆಗೆದು, ಚೆನ್ನಾಗಿ ಮಿಕ್ಸ್‌ ಮಾಡಿ. ತರಕಾರಿ ರಸದ ಮಸಾಲೆ ಅನ್ನ ಬಡಿಸಲು ತಯಾರು.

ನಿವೇದಿತಾ ತಡಣಿ

Advertisement

Udayavani is now on Telegram. Click here to join our channel and stay updated with the latest news.

Next