Advertisement
ಬೆಟ್ಟಕ್ಕೆ ಆಗಮಿಸಿದ ಅತಿಥಿಗಳನ್ನು ಕಲಾತಂಡಗಳ ಮೂಲಕ ಬರಮಾಡಿಕೊಳ್ಳಲಾಯಿತು. ಸಿಎಂ ಸಿದ್ದರಾಮಯ್ಯ ಮತ್ತು ಕವಿ ನಿಸಾರ್ ಅಹ್ಮದ್ ಅವರು, ಚಾಮುಂಡಿದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಆಗಮಿಕ ಶಶಿಶೇಖರ ದೀಕ್ಷಿತ್ ಅವರು ಸಿದ್ದರಾಮಯ್ಯ ಹಾಗೂ ನಿಸಾರ್ ಅಹ್ಮದ್ ಅವರಿಗೆ ಮಲ್ಲಿಗೆ ಹೂವಿನ ಹಾರ ಹಾಕಿ, ಶಾಲು ಹೊದಿಸಿ ಗೌರವಿಸಿದರು. ಕ್ರೀಮ್ ಕಲರ್‌ನ ಹೊಸ ಸೂಟಿನಲ್ಲಿ ಮಿಂಚುತ್ತಿದ್ದ ನಿಸಾರ್ ಅಹ್ಮದ್ ಅವರು, ದೇವಸ್ಥಾನದಿಂದ ಹೊರಬಂದು ಸಮಾರಂಭದ ವೇದಿಕೆ ಮೇಲೆ ಬಂದಾಗಲೂ ಹೂವಿನ ಹಾರವನ್ನು ಹಾಕಿಕೊಂಡೇ ಇದ್ದರು. ಇದೇ ವೇಳೆ ದಸರಾ ಕ್ರೀಡಾ ಜ್ಯೋತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಹಸ್ತಾಂತರಿಸಿದರು. ಇದನ್ನು ಚೆಸ್‌ಗ್ರಾಂಡ್ ಮಾಸ್ಟರ್ ತೇಜ್‌ಕುಮಾರ್‌ಗೆ ನೀಡಿದರು.
ನಾಡದೇವಿ ಮುಂದೆ ನಾಡಿನ ಹಾಡಾಗಿ ದಸರೆಗೆ ಚಾಲನೆ ಕೊಟ್ಟ ಕವಿ ನಿಸಾರ್ ಅಹ್ಮದ್ “ಹಲವೆನ್ನದ ಹಿರಿಮೆ, ಕುಲವೆನ್ನದ ಗರಿಮೆ’ ಸಾರುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಜೋಗದ ಬೆಳಕಿನಂತೆ ಕೋರೈಸಿದ್ದ ದಸರೆಯ ಭಕುತಿಯಲಿ, ಲೋಕಾವೃತ ಸೀಮೆಗೆ ಹರಡಿದ ಅದರ ಕಂಪಿನಲಿ, ಗತಸಾಹಸ ಸಾರುವ ಶಾಸನಗಳಂತೆ ಸಾಲಾಗಿದ್ದ ಗಜಗಳ ಗಾಂಭೀರ್ಯದ ನಡುವೆ, ಸಾಮರಸ್ಯದ ತೆನೆಯನ್ನು ಬಳುಕಿಸಿದರು. ದಸರೆಯೆಂಬ ಸರ್ವಧರ್ಮದ ಶಾಂತಿಯ ಉತ್ಸವ, ಅಲ್ಲಿ ತೇಲುವ ಕನ್ನಡ ಮನಸ್ಸುಗಳ ಉತ್ಸಾಹಕೆ ಕವಿ ಮನ ಭಾವುಕವಾಗಿತ್ತು.